12 ಏಪ್ರಿಲ್ 2023, ಕಾಸರಗೋಡು: ಪೆರ್ಲದ ಶಿವಾಂಜಲಿ ಕಲಾ ಕೇಂದ್ರ (ರಿ) ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಜ್ಞಾನ ವಿಕಾಸ -2023’ ಭರತನಾಟ್ಯ ಕಾರ್ಯಗಾರ ಏಪ್ರಿಲ್ 8 ಮತ್ತು 9ರಂದು ನಡೆಯಿತು. ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಶಿಕ್ಷಕರೂ, ಭಾಗವತರೂ ಆದ ಡಾ. ಶ್ರೀ ಸತೀಶ್ ಪುಣಿಂಚತ್ತಾಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಭರತನಾಟ್ಯ ಕಲೆಯ ಸಂವರ್ಧನೆಗಾಗಿ ಇಂತಹ ಕಾರ್ಯಾಗಾರವನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹ. ಕ್ಷೇತ್ರದಲ್ಲಿ ನುರಿತವರಿಂದ ನೀಡಲ್ಪಡುವ ವಿಶೇಷ ನಿರ್ದೇಶನಗಳು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ” ಎಂದರು. ದೇವಾಲಯದ ಪ್ರಮುಖರಾದ ಶ್ರೀ ಸದಾನಂದ ಕುಡ್ವ ಇವರು ಶುಭಾಶಂಸನೆಗೈದರು.
‘ಜ್ಞಾನ ವಿಕಾಸ -2023’ ಭರತನಾಟ್ಯ ಕಾರ್ಯಗಾರದ ಜವಾಬ್ದಾರಿಯನ್ನು ಹೊತ್ತ ವಿದುಷಿ ಕಾವ್ಯಾ ಭಟ್ ಇವರು ಪುತ್ತೂರಿನ ಅಂಬಿಕಾ ಮಹಾ ವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿ ಪಸರಿಸುವುದೇ ಶಿವಾಂಜಲಿ ಕಲಾ ಕೇಂದ್ರದ ಉದ್ದೇಶವಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುವ ಇವರು ಶಾಸ್ತ್ರಕ್ಕೆ ಧಕ್ಕೆಯಾಗದಂತೆ ಹೊಸತನವನ್ನು ಪ್ರಯೋಗಿಸುತ್ತಾ ಸದಾ ಪ್ರಯೋಗಶೀಲರಾಗಿ ಭರತನಾಟ್ಯದಲ್ಲಿ ಹೆಚ್ಚಿನ ಕೃಷಿ ಮಾಡುತ್ತಿರುವ ಕಲಾವಿದೆ.
ವಿದುಷಿ ಕಾವ್ಯಾ ಭಟ್ ಭರತನಾಟ್ಯದ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಮತ್ತು ರಾಜ್ಯ ಮಟ್ಟದ ಹಲವು ಭರತನಾಟ್ಯ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಭಾಗವಹಿಸಿದ ಅನುಭವ ಇರುವ ಯುವ ಪ್ರತಿಭೆ. ಮಹಿಷ ಮರ್ದಿನಿ, ಭಸ್ಮಾಸುರ ಮೋಹಿನಿ, ವೀರರಾಣಿ ಅಬ್ಬಕ್ಕ, ಸೀತಾ ಸ್ವಯಂವರ, ಸೀತಾನ್ವೇಷಣೆ ಮುಂತಾದ ಪ್ರಮುಖ ನೃತ್ಯ ರೂಪಕಗಳಿಗೆ ನೃತ್ಯ ನಿರ್ದೇಶನವನ್ನು ಮಾಡಿರುತ್ತಾರೆ. ಮಾತ್ರವಲ್ಲದೆ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ರಚನೆಯ ‘ಜನನಿ ಜಗಜ್ಜನನಿ’ ಎಂಬ ಏಕವ್ಯಕ್ತಿ ನೃತ್ಯ ರೂಪಕವನ್ನು ಇವರು ಪ್ರಸ್ತುತ ಪಡಿಸಿ ಜನಮನ್ನಣೆಯನ್ನು ಗಳಿಸಿರುತ್ತಾರೆ.
‘ಜ್ಞಾನ ವಿಕಾಸ -2023’ ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ನಾಟ್ಯಾರಾಧನಾ ಕಲಾಕೇಂದ್ರ ಉರ್ವದ ನಿರ್ದೇಶಕಿ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಮಾರ್ಗದರ್ಶನ ನೀಡಿದರು. ಇವರು ತಮ್ಮ ಏಳರ ಎಳವೆಯಿಂದಲೇ ಭರತನಾಟ್ಯಕ್ಕೆ ಪಾದಾರ್ಪಣೆ ಮಾಡಿ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ನಿರ್ದೇಶನದಲ್ಲಿ ನಡೆಯುವ ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾಕೇಂದ್ರ ಈಗ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿದೆ. ನೃತ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಯಕ್ಷಗಾನ, ತಾಳಮದ್ದಲೆಯಲ್ಲಿ ನುರಿತ ಇವರು “ಯಕ್ಷಾರಾಧನಾ”ದ ನಿರ್ದೇಶಕಿಯೂ ಆಗಿದ್ದಾರೆ. ಇವರದೇ ಪರಿಕಲ್ಪನೆ, ರಚನೆ, ನೃತ್ಯ ಸಂಯೋಜನೆಯ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಜತಿಸ್ವರ, ಅಭಿಸಾರಿಕಾ ನಾಯಿಕೆಯ ಪದ, ಸ್ವಾಧೀನ ಪತ್ನೀಕಾ ಅವಸ್ಥೆಯ, ಧೀರ ಲಲಿತ ನಾಯಕಾ ಭಾವದ ಜಾವಳಿಯೊಂದರ ತರಬೇತಿ ನೀಡಿದರು. ಈ ಎಲ್ಲಾ ನೃತ್ಯ ಬಂಧಗಳ ಸಂಪೂರ್ಣ ವಿವರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ವಿವರಿಸಿ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಾಗಾರದ ಸಮಾರೋಪದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಕಾರ್ಯಾಗಾರದಿಂದಾಗಿ ಭರತನಾಟ್ಯ ಕ್ಷೇತ್ರದ ಹೊಸತನದ ಬಾಗಿಲು ತೆರೆದಿದೆ. ಬಹಳಷ್ಟು ಹೊಸ ವಿಷಯಗಳು ನಮ್ಮ ಜ್ಞಾನದ ವೈಶಾಲ್ಯತೆಯನ್ನು ಹೆಚ್ಚಿಸಿವೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಬಿಚ್ಚು ಮನಸ್ಸಿನಿಂದ ಹೇಳಿಕೊಂಡರು.
ಶಿವಾಂಜಲಿ ಕಲಾ ಕೇಂದ್ರ (ರಿ) ಇದರ ಕಾರ್ಯದರ್ಶಿಗಳಾದ ವಿದುಷಿ ಕಾವ್ಯಾ ಭಟ್ ಪೆರ್ಲ ಇವರು ಸ್ವಾಗತಿಸಿ, ವಂದಿಸಿದರು.