ಕೋಟ : ರಸರಂಗ ಕೋಟ ಹಾಗೂ ಯಶಸ್ವೀ ಕಲಾವೃಂದ ಜಂಟಿಯಾಗಿ ಆಯೋಜಿಸಿಕೊಂಡಿರುವ ಶ್ವೇತಯಾನ 22 ಕಾರ್ಯಕ್ರಮವು ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಸಹಯೋಗದೊಂದಿಗೆ ದಿನಾಂಕ 23-04-2024ರಂದು ಜಾತ್ರಾ ಮಹೋತ್ಸವದ ಸಂದರ್ಭ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಷ್ಣುಮೂರ್ತಿ ಮೈಯ್ಯರು ಮಾತನಾಡಿ “ಬೇರೆ ಬೇರೆ ಕಡೆಗಳಲ್ಲಿ ಸಾಂಸ್ಕೃತಿಕ ಕಲಾ ಪ್ರಕಾರವನ್ನು ವಾರಕ್ಕೆರಡರಂತೆ ಪ್ರಸ್ತುತ ಪಡಿಸಿ ಸಮಾಜದಲ್ಲಿ ಮಕ್ಕಳಿಂದ ಹಿಡಿದು ವೃದ್ದರವರೆಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕಾಯಕ ದೊಡ್ಡದು. ಒತ್ತಡದ ಮನಸ್ಸುಗಳಿಗೆ ರಸದೌತಣವನ್ನು ನೀಡುವ ಸಾಂಸ್ಕೃತಿಕ ವಾತಾವರಣ ಇಂದಿನ ಕಾಲಘಟ್ಟಕ್ಕೆ ಅತ್ಯಗತ್ಯ. ರಸರಂಗ, ಯಶಸ್ವೀ ಕಲಾವೃಂದ ಅವಿರತ ಪ್ರಯತ್ನದಿಂದ ಸಾಂಸ್ಕೃತಿಕವಾಗಿ ಗೆದ್ದಿದೆ” ಎಂದು ಅಭಿಪ್ರಾಯಪಟ್ಟರು.
ರಸರಂಗದ ಸುಧಾ ಕದ್ರಿಕಟ್ಟು ಮಾತನಾಡಿ “ಹನುಮ ಜಯಂತಿಯ ಕಾರ್ಯಕ್ರಮವನ್ನು ತಾಳಮದ್ದಳೆಯಾಗಿ ಆಚರಿಸಬೇಕೆಂದಾಗ ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ನೆರವಾಗಿ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿಕೊಂಡರು. ಅಪಾರ ಜನಸ್ತೋಮದ ನಡುವೆ ಗೆದ್ದ ಕಾರ್ಯಕ್ರಮವಾಯಿತು” ಎಂದು ಹೇಳಿದರು. ರಾಜೇಂದ್ರ ಉರಾಳ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಹನುಮಾರ್ಜುನ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿಗೊಂಡಿತು. ಕಲಾವಿದರಾಗಿ ಹರೀಶ್ ಕಾವಡಿ, ಪಂಚಮಿ ವೈದ್ಯ, ರಾಹುಲ್ ಕೊಮೆ, ಸುದೀಪ ಉರಾಳ, ಸುಧಾ ಕದ್ರಿಕಟ್ಟು, ಶ್ಯಾಮಲಾ ವರ್ಣ, ಸುಶೀಲ ಹೊಳ್ಳ, ಸುಪ್ರೀತಾ ಪುರಾಣಿಕ ರಂಗದಲ್ಲಿ ಕಾಣಿಸಿಕೊಂಡರು.