ಉಡುಪಿ : ಅಂಬಲಪಾಡಿಯ ಶ್ರೀ ಮಹಾಕಾಳಿ ಹಾಗೂ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಭವಾನಿ ಮಂಟಪದಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 16 ನವೆಂಬರ್ 2025ರಂದು ನಡೆಯಿತು.
ದೇವಸ್ಥಾನದ ಪೂಜ್ಯ ಧರ್ಮದರ್ಶಿಯವರಾದ ಡಾ. ನಿ.ಬಿ. ವಿಜಯ ಬಲ್ಲಾಳ್ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಉದ್ಘಾಟನೆ ಮಾಡಿ ದೇವಸ್ಥಾನ ಹಾಗೂ ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ ಪುರಾಣ ನೃತ್ಯ ಪ್ರಕಾರ ನೃತ್ಯಾಭ್ಯಾಸ ಭರತನಾಟ್ಯಗಳಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ ಎಂಬ ಸಂದೇಶ ನೀಡಿದರು.
ಪ್ರಸ್ತುತ 25 ವರ್ಷಗಳ ನೃತ್ಯ ಪರಂಪರೆಯನ್ನು ಆಚರಿಸುತ್ತಿರುವ ಶ್ರೀ ಭ್ರಾಮರೀ ನಾಟ್ಯಾಲಯವು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ್ದು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ, ನಿವೃತ್ತ ಮುಖ್ಯೋಪಾಧ್ಯರಾದ ಬಿ. ರವೀಂದ್ರ ರಾವ್, ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ, ನಾಟ್ಯಾಲಯದ ಗೌರವಾಧ್ಯಕ್ಷರಾದ ಶ್ರಿಯುತ ಕೆ. ಭಾಸ್ಕರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಾಟ್ಯಾಲಯದ ಸಂಸ್ಥಾಪಕರಾದ ನೃತ್ಯಗುರು ವಿದ್ವಾನ್ ಕೆ. ಭವಾನಿಶಂಕರ್ ರವರು ನಾಟ್ಯಾಲಯ ನಡೆದು ಬಂದ ದಾರಿ ಹಾಗೂ ರಜತ ಸಂಭ್ರಮದ ಮುನ್ನೋಟದ ಬಗ್ಗೆ ಮಾಹಿತಿ ನೀಡುತ್ತಾ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ ಎಂಬ ಶೀರ್ಷಿಕೆಯೊಂದಿಗೆ 25 ನೃತ್ಯ- ಸಂಗೀತ ಕಾರ್ಯಕ್ರಮ ಹಾಗೂ ನೃತ್ಯ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಯೋಚನೆಗಳೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.

ಕೂಚಿಪುಡಿ ನೃತ್ಯದೊಂದಿಗೆ ರಜತ ವರ್ಷದ ಲಾಂಛನ ಅನಾವರಣದ ನಂತರ ನಾಟ್ಯಾಲಯದ ಕಲಾವಿದರಿಂದ ಭರತನಾಟ್ಯ ಪರಂಪರೆಯ ನೃತ್ಯಗಳ ಸುಂದರ ಸಂಯೋಜಿತ ಪ್ರದರ್ಶನ ‘ಮಾರ್ಗಂ’ ಪ್ರಸ್ತುತಗೊಂಡಿತು ಪ್ರೇಕ್ಷಕರಿಂದ ಈ ಕಾರ್ಯಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಕಳೆದ 25 ವರ್ಷಗಳಿಂದ ಈ ನೃತ್ಯ ಸಂಸ್ಥೆಗೆ ಸಹಕಾರ ಸಹಾಯ ನೀಡಿ ತಮಗೆ ಪ್ರೋತ್ಸಾಹಿಸಿಕೊಂಡು ಬಂದಿರುವವರನ್ನು ಸ್ಮರಿಸುವುದರ ಜೊತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯುವ ವಿಚಾರ ವೇದಿಕೆಯವರನ್ನು ಸನ್ಮಾನಿಸಲಾಯಿತು. ನಾಟ್ಯಾಲಯದ ಪೋಷಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಕುಮಾರಿ ಭ್ರಮರೀ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಸುಬ್ರಹ್ಮಣ್ಯ ಆಚಾರ್ಯರವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಶ್ರೀಯುತ ಯೊಗೀಶ್ ಕೊಳಲಗಿರಿಯವರು ಸುಂದರವಾಗಿ ನಿರೂಪಿಸಿದರು.
