ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ವಿವೇಕಾನಂದ ಸಂಶೋಧನ ಕೇಂದ್ರ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಘ ಇದರ ಸಹಯೋಗದಲ್ಲಿ ದಿನಾಂಕ 16-04-2023ರಂದು ನಡೆದ ‘ನಿರಂಜನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಹಾಗೂ ಪುತ್ತೂರಿನ ಸಾಹಿತಿಯಾದ ಪ್ರೊ. ವಿ.ಬಿ. ಅರ್ತಿಕಜೆ ಇವರು ಭಾಗವಹಿಸಿ ಮಾತನಾಡುತ್ತಾ “ಸಾಹಿತ್ಯವನ್ನು ನಾವು ಅಪ್ಪಿಕೊಳ್ಳಬೇಕು, ಹಾಗೆಯೇ ನಮ್ಮದು ಎಂದು ಒಪ್ಪಿಕೊಳ್ಳಬೇಕು. ಅದೆಷ್ಟೋ ಏರು ಪೇರುಗಳನ್ನು ಎದುರಿಸಿದರೂ, ಮನಸ್ಸು ಮುದುಡಿ ಹೋದರೂ, ಜೀವನವೇ ಬೇಡ ಎಂದು ನಿರ್ಧಾರವಾದರೂ ನಾವು ನಮ್ಮ ಮನಸನ್ನು ಗಟ್ಟಿಮಾಡಿಕೊಳ್ಳಬೇಕು” ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಮಾತನಾಡಿ “ಮಾನವ ಸಂಬಂಧ ರೂಪಿಸಿಕೊಳ್ಳುವ ಮತ್ತು ಸಮಾಜದಲ್ಲಿ ಬದುಕುವ ಬಗ್ಗೆ” ತಿಳಿಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್.ಜಿ. “ಕಥೆಗಳನ್ನು ಹುಡುಕಿ, ಆರಿಸಿ ಆ ಕಾಲಕ್ಕೆ ಯಾವ ಕಥೆಗಳು ಹೆಚ್ಚು ಪ್ರಸ್ತುತ ಮತ್ತು ಯಾವುದರಲ್ಲಿ ಆಧುನಿಕವಾದಂತಹ ಪ್ರಗತಿ ಶೀಲವಾದಂತಹ, ಪ್ರಗತಿಪರವಾದಂತಹ ಚಿಂತನೆಗಳು ಮಹಿಳೆಯರ ಬಗ್ಗೆ ಇದೆ. ಹಾಗೆಯೇ ಇರುವುದನ್ನು ಆಲೋಚನೆ ಮಾಡಿ, ಅದನ್ನು ಆರಿಸಿ ಪ್ರಕಟ ಮಾಡಿದೆವು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಅವರು ಶ್ರೀಮತಿ ಗಂಗಾ ಪಾದೇಕಲ್ ಅವರಿಗೆ ‘ನಿರಂಜನ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಿದರು. ಶ್ರೀಮತಿ ಗಂಗಾ ಪಾದೇಕಲ್ ಪ್ರಶಸ್ತಿ ಸ್ವೀಕರಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರುಳಿ ಕೃಷ್ಣ ಕೆ.ಎನ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಹಾಗೂ ಪರೀಕ್ಷಾಂಗ ಕುಲ ಸಚಿವ ಡಾ.ಶ್ರೀಧರ್ ಹೆಚ್.ಜಿ ಸ್ವಾಗತಿಸಿ, ಕನ್ನಡ ವಿಭಾಗದ ಸಹಶಿಕ್ಷಕ ಡಾ. ಮನಮೋಹನ್ ಎಂ. ವಂದಿಸಿ, ಕನ್ನಡ ವಿಭಾಗದ ಸಹ ಶಿಕ್ಷಕಿ ಡಾ.ಮೈತ್ರಿ ಭಟ್ ನಿರೂಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ಲು ಅವರ ಹುಟ್ಟು ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತಿ ಅಮ್ಮ. ಏಳನೇ ತರಗತಿವರೆಗೆ ಓದಿದ ಗಂಗಾ ಅವರ ವಿವಾಹ 16ನೇ ವಯಸ್ಸಿನಲ್ಲಿ ಪಾದೇಕಲ್ಲು ಗೋವಿಂದ ಭಟ್ಟರೊಂದಿಗೆ ಆಯಿತು. ಈಗ ಇವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. 34ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಗಂಗಾ, ಸಾಹಿತ್ಯ ಚಟುವಟಿಕೆಗಳ ಮೂಲಕ ಹೆಸರು ಗಳಿಸಿದರು.
‘ಪುಲಪೇಡಿ ಮತ್ತು ಇತರ ಕತೆಗಳು’, ‘ಹೆಜ್ಜೆ ಮೂಡದ ಹಾದಿಯಲ್ಲಿ’, ‘ಹೊಸ ಹೆಜ್ಜೆ’, “ವಾಸ್ತವ’, ‘ಕ್ಷಮಯಾ ಧರಿತ್ರಿ’, ‘ನೆಲೆ ತಪ್ಪಿದ ಹಕ್ಕಿ’, ‘ಮನ್ನಣೆಯ ದಾಹ’, ‘ಈ ಪ್ರಜಾ ರಾಜ್ಯದಲ್ಲಿ’, ‘ಸಂಕ್ರಮಣ’, ‘ಚಿನ್ನದ ಸೂಜಿ’ ಇವು ಇವರ ಕಥಾಸಂಕಲನಗಳು, ‘ಹೊನ್ನಳ್ಳಿಯಲ್ಲೊಮ್ಮೆ’, ‘ಸೆರೆಯಿಂದ ಹೊರಗೆ’, ‘ಪಯಣದ ಹಾದಿಯಲ್ಲಿ’, ‘ಮೌನರಾಗಗಳು’, ‘ಅದೃಷ್ಟ ರೇಖೆ’, ‘ಕನಕಾಂಬರಿ’, ‘ಸೆರಗಿನ ಕೆಂಡ’, ‘ಇನ್ನೊಂದು ಅಧ್ಯಾಯ’, ‘ಬಂಗಾರದ ಜಿಂಕೆ ಹಿಂದೆ’ ಇವು ಕಾದಂಬರಿಗಳು. ‘ಆಯ್ದ ಕತೆಗಳು’, ‘ಪ್ರತಿಬಿಂಬ’, ‘ಮುಳಿಯ ಮೂಕಾಂಬಿಕೆ’, ‘ಏರ್ಯ ಚಂದ್ರಭಾಗಿ ರೈ’ ಇವು ಸಂಪಾದಿತ ಕೃತಿಗಳು. ‘ಸೆರೆಯಿಂದ ಹೊರಗೆ’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’, ‘ಇನ್ನೊಂದು ಅಧ್ಯಾಯ’ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ, ಕೃಷ್ಣಬಾಯಿ ದತ್ತಿನಿಧಿ ಪ್ರಶಸ್ತಿ, ನೀರ್ಪಾಜೆ ಭೀಮಭಟ್ಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ ದೊರೆತಿದೆ.