Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹೀಗೂ ಒಂದು ವಿಶಿಷ್ಟ ಕನ್ನಡ ಭವನ, ಅದೂ ಕೇರಳದಲ್ಲಿ – ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ
    Article

    ಹೀಗೂ ಒಂದು ವಿಶಿಷ್ಟ ಕನ್ನಡ ಭವನ, ಅದೂ ಕೇರಳದಲ್ಲಿ – ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ

    May 3, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಜಗತ್ತಿನ ಅಂಧಕಾರವನ್ನು ಕಳೆಯುವ ಬೆಳಕಾಗಿ ಹಬ್ಬಗಳು ಬರಬೇಕು ಎಂಬುವುದು ದೀಪಾವಳಿಯ ಕಲ್ಪನೆ. ಮನುಕುಲವನ್ನು ಕಾಡುವ ಅನಿಷ್ಟಗಳು, ಸಾಂಕ್ರಾಮಿಕ ರೋಗಗಳು, ನೋವು, ದುಮ್ಮಾನಗಳು ಇವುಗಳಿಗೆ ಪರಿಹಾರವಾಗಿ ಪ್ರತಿಯೊಬ್ಬರ ಬದುಕಿನಲ್ಲಿ ನಲಿವಿನ ಜತೆಗಿನ ನೆಮ್ಮದಿಯ ಬೆಳಕು ಬೇಕು. ಇದರ ನಿರೀಕ್ಷೆಯಲ್ಲಿ ಜಗತ್ತಿನ ಪ್ರತೀ ಮನಸ್ಸುಗಳೂ ಇರುತ್ತಿವೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ತವಕದ ಪಯಣದಲ್ಲಿ ಸಾವಿರಾರು ಕನಸುಗಳಿವೆ, ಯೋಜನೆಗಳಿವೆ. ಇವೆಲ್ಲವೂ ಸಾಕಾರಗೊಳ್ಳಬೇಕು. ಮನುಜ ಸಂಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಜ್ಞಾನದೀವಿಗೆಯ ಅಗತ್ಯವೂ ಇದೆ. ಮಾನವನ ಎಲ್ಲಾ ಪ್ರಗತಿಯಲ್ಲು ಕೂಡಾ ಜ್ಞಾನದ ಬೆಳಕಿನ ಸ್ಥಾನ ದೊಡ್ಡದು. ಅದು ಗಟ್ಟಿಯಾದ ಅಡಿಪಾಯ. ಮಾನವನ ಮನದೊಳಗೆ ಜ್ಞಾನವನ್ನು, ಬದುಕಿನ ರೀತಿಯನ್ನು ನಾಗರಿಕತೆಯ ಪಥವನ್ನು ಮಹತ್ವದ ಗ್ರಂಥಗಳು ನೀಡುತ್ತವೆ. ಪ್ರತೀ ಗ್ರಂಥಗಳೂ ಕೂಡಾ ಸನಾತನ ಸತ್ವಗಳ ಪೂರಣ. ಅದು ಮನಮುಟ್ಟಿದಾಗ ಮನಸ್ಸಿನಲ್ಲು ಪಕ್ವತೆ, ಕೃತಿಯಲ್ಲಿ ದೃಢತೆ, ವ್ಯವಹಾರದಲ್ಲಿ ಸಾತ್ವಿಕತೆ ದೊರೆಯುತ್ತದೆ. ಮನಸ್ಸಿನ ತಾಮಸ ಗುಣವನ್ನು ಕಳೆಯುವುದಕ್ಕೆ ಜ್ಞಾನವು ಬೆಳಕಿನ ರೂಪದಲ್ಲಿ ಆವಾಹನೆಯಾಗಬೇಕು. ಆದ್ದರಿಂದ ನಮ್ಮ ಸುತ್ತಲಿನ ಪ್ರಬುದ್ಧ ಗ್ರಂಥಗಳು ಸತ್ಯದರ್ಶನದ ಮೂಲಬಿಂದುಗಳು. ಆದ್ದರಿಂದಲೇ ಗ್ರಂಥಾಲಯಗಳನ್ನು ದೇವಾಲಯಕ್ಕೆ ಸಮಾನವೆಂದು ತಿಳಿಯಲಾಗಿದೆ. ಜನಾನುರಾಗಿ ಸಮಾಜ ನಿರ್ಮಾಣಕ್ಕೆ ಪ್ರತೀ ಮನೆಯೂ ಗ್ರಂಥಾಲಯವಾಗಬೇಕು. ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ಕೂಡಾ ಕಾಸರಗೋಡಿನ ಜ್ಞಾನನಿಧಿಯಂತೆ ರೂಪುಗೊಂಡಿದೆ.

    ಈ ಗ್ರಂಥಾಲಯಕ್ಕೆ ಇದೀಗ ವಿಂಶತಿಯ ಸಂಭ್ರಮ. 2001ರ ಜುಲೈ 23ರಂದು ಡಾ. ಲಲಿತಾ ಎಸ್.ಎನ್. ಭಟ್ ಅವರು ಕನ್ನಡ ಭವನವನ್ನು ಹಾಗೂ ಹಿರಿಯ ಮಲಯಾಳ ಸಾಹಿತಿ ಪಿ.ವಿ.ಕೆ. ಪನೆಯಾಲ್ ಅವರು ಗ್ರಂಥಾಲಯವನ್ನು ಉದ್ಘಾಟಿಸಿದ್ದರು. ಈ ಗ್ರಂಥಾಯಲದಲ್ಲಿ ಸಾವಿರಾರು ಉಪಯುಕ್ತ ಪುಸ್ತಕಗಳಿವೆ. ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ, ಡಾ. ಪಿ. ವೆಂಕಟರಾಜ ಪುಣಿಂಚತ್ತಾಯ, ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಅನೇಕ ವಿದ್ವಾಂಸರಿಗೆ ಗೌರವಾರ್ಪಣೆ ಮಾಡಲಾಗಿದೆ. ಆನೇಕ ಯುವ ಸಾಧಕರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಗ್ರಂಥಾಲಯವು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಮಾನ್ಯತೆ ಪಡೆದಿದ್ದು, ಈ ಗ್ರಂಥಾಲಯವು ಪ್ರತೀ ವರ್ಷ ಬೇಕಲ ರಾಮ ನಾಯಕರ ಶತಮಾನೋತ್ತರ ಸಂಸ್ಮರಣೆಯನ್ನೂ ನಡೆಸುತ್ತಿದೆ. ಪ್ರಸ್ತುತ 20ನೇ ವರ್ಷದ ಸಂಭ್ರಮದಲ್ಲಿ ಕಾಸರಗೋಡಿನ ಸುಮಾರು 20 ಮಂದಿ ಹಿರಿಯ ಚೇತನಗಳಿಗೆ ಗುರುನಮನ ಹಾಗೂ ಯುವ ಸಾಧಕರಿಗೆ ‘ಕನ್ನಡ ಪಯಸ್ವಿನಿ’ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಈ ಯೋಜನೆಯಂತೆ ಅನೇಕ ಮಂದಿಯನ್ನು ಗೌರವಿಸಲಾಗಿದೆ. ಈ ಗ್ರಂಥಾಲಯದಲ್ಲಿ ಈಗಾಗಲೇ ಸುಮಾರು ಹತ್ತು ಸಾವಿರದಷ್ಟು ಅಮೂಲ್ಯ ಪುಸ್ತಕಗಳಿದ್ದು, ಸಂಶೋಧಕರಿಗೆ ಅಧ್ಯಯನಕ್ಕೆ ವ್ಯವಸ್ಥೆ ಇದೆ. ಗ್ರಂಥಾಲಯದ ಪುಸ್ತಕಗಳ ಸಂಖ್ಯೆಯನ್ನು ಸುಮಾರು 20 ಸಾವಿರಕ್ಕೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹಿರಿಯ ಸಾಹಿತಿ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಅವರು ಪ್ರಸ್ತುತ ಈ ಗ್ರಂಥಾಲಯದ ಅಧ್ಯಕ್ಷರಾಗಿದ್ದಾರೆ ಎಂದು ಗ್ರಂಥಾಲಯದ ಸಂಸ್ಥಾಪಕರಾದ ಕೆ. ವಾಮನ್ ರಾವ್ ಬೇಕಲ್ ಹೇಳುತ್ತಾರೆ. ಕೆ. ವಾಮನ್ ರಾವ್ ಬೇಕಲ್ ಅವರ ಸಾಮಾಜಿಕ ಕಾಳಜಿ ದೊಡ್ಡದು. ನುಳ್ಳಿಪ್ಪಾಡಿಯಲ್ಲಿರುವ ತಮ್ಮ ಮನೆಯ ಸಮುಚ್ಛಯವನ್ನು ಗ್ರಂಥಾಲಯ, ವಾಚನಾಲಯ, ಕನ್ನಡ ಭವನ ಹಾಗೂ ಬಯಲು ರಂಗಮಂದಿರವನ್ನಾಗಿ ರೂಪಿಸಿದ್ದಾರೆ. ಪ್ರತೀ ದಿನವೂ ಈ ಗ್ರಂಥಾಲಯಕ್ಕೆ ಅನೇಕ ಮಂದಿ ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿಗಳು, ಮಕ್ಕಳು ಆಗಮಿಸಿ ಜ್ಞಾನದಾಹ ತೀರಿಸಿಕೊಳ್ಳುತ್ತಿದ್ದಾರೆ. ವಾಮನ್ ರಾವ್ ಅವರ ಸಾಮಾಜಿಕ ಕೈಂಕರ್ಯದಲ್ಲಿ ಅವರ ಪತ್ನಿ ಕೆ.ಪಿ. ಸಂಧ್ಯಾರಾಣಿ ಅವರ ಸಹಕಾರವೂ ಇದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ರಾಮಮೋಹನ ಲೋಹಿಯಾ ರಾಷ್ಟ್ರೀಯ ಗ್ರಂಥಾಲಯ ಮೊದಲಾದ ಸಂಸ್ಥೆಗಳ ಮೌಲಿಕ ಕೃತಿಗಳು ಈ ಗ್ರಂಥಾಲಯದಲ್ಲಿದೆ. ಕರ್ನಾಟಕ ಗ್ರಂಥಾಲಯ ಇಲಾಖೆಯು ಸುಮಾರು 3 ಸಾವಿರ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದೆ. ಕೆಲವು ಮಂದಿ ವೈಯಕ್ತಿಕವಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳು ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿವೆ.

    ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ಕಳೆದ 20 ವರ್ಷಗಳಿಂದ ಸದ್ದಿಲ್ಲದೆ ಗ್ರಂಥಗಳ ಮೂಲಕ ಜ್ಞಾನ ಹಂಚುವ ವಾಮನ್ ರಾವ್ ಬೇಕರ್ ಅವರನ್ನು ಧಾರವಾಡದಲ್ಲಿ ನಡೆದ ಕರ್ನಾಟಕ ಗ್ರಂಥಾಲಯ ಸಮ್ಮೇಳನದಲ್ಲಿ, ಮೈಸೂರಿನಲ್ಲಿ ನಡೆದ ದೇವರಾಜ ಅರಸ್ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ ಕನ್ನಡ ಭವನ ಗ್ರಂಥಾಲಯದಲ್ಲಿ ಪುಸ್ತಕಗಳ ಜೊತೆಗೆ ಐತಿಹಾಸಿಕ ನಾಣ್ಯಗಳ ಸಂಗ್ರಹವೂ ಇದೆ. ವಾಮನ್ ರಾವ್ ಅವರು ವೃತ್ತಿ ಜೀವನದಲ್ಲಿ ಆನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ದೊರೆತ ವಿದೇಶಿ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೆಟ್ಸ್, ಸೌದಿ ಅರೇಬಿಯಾ, ಕುವೈತ್, ಇಟಲಿ, ಫ್ರಾನ್ಸ್, ನೋರ್ವೆ, ಯು.ಎಸ್.ಎ., ಆಫ್ರಿಕಾ, ಗಬೋನ್, ನೈಜಿರಿಯಾ, ಇವೋರಿಕೋಸ್ಟ್, ಯು.ಕೆ., ಬ್ರೆಝಿಲ್, ವೆನೆಜುವಾಲ, ಕೆನಡಾ, ಸಿಂಗಾಪುರ್, ಚೀನಾ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ, ಪಿಲಿಪೈನ್ಸ್, ಇಂಡೋನೇಶ್ಯಾ ಮೊದಲಾದ ದೇಶಗಳ ನಾಣ್ಯ ಹಾಗೂ ಕರೆನ್ಸಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇರಿಸಲಾಗಿದೆ. ಗ್ರಂಥಾಲಯಕ್ಕೆ ಓದಲು ಆಗಮಿಸುವ ಮಕ್ಕಳಿಂದ ಹಿಡಿದು ಎಲ್ಲರಿಗೂ ಈ ಸಂಗ್ರಹ ಖುಷಿ ನೀಡುತ್ತದೆ. ಅದರ ಜತೆಯಲ್ಲೇ ಹಳೆಯ ಕಾಲದ ಅನೇಕ ಕರಕುಶಲ ವಸ್ತುಗಳೂ ಗ್ರಂಥಾಲಯದ ಸಂಗ್ರಹದಲ್ಲಿವೆ. 1939ರ 2 ಆಣೆ, 1969ರ 20 ಪೈಸೆ, 1951ರ ಕಾಲು ರೂಪಾಯಿ, 1944ರ ಒಂದು ಪೈಸೆಯ ಸಂಗ್ರಹ ಗ್ರಂಥಾಲಯದಲ್ಲಿದೆ. ಈ ಗ್ರಂಥಾಯಲದ ಸಾರ್ಥಕ ಸೇವೆಯಲ್ಲಿ ಪತ್ರಕರ್ತ ಪ್ರದೀಪ್ ಬೇಕಲ್, ಕೆ. ಜಗದೀಶ ಕೂಡ್ಲು, ಕೆ. ನವೀನ್‌ಚಂದ್ರ ಅಣಂಗೂರು, ದಯಾನಂದ ಬೆಳ್ಳೂರಡ್ಕ ಮೊದಲಾದವರ ಸಹಕಾರವಿದೆ. ಈ ವರೆಗೆ ಯಾವುದೇ ವ್ಯಕ್ತಿಯಿಂದ, ಸಂಸ್ಥೆಯಿಂದ ಅಥವಾ ಸರ್ಕಾರದಿಂದ ಧನಸಹಾಯ ಪಡೆಯದೆ 20 ವರ್ಷಗಳಲ್ಲಿ ಅನೇಕ ಸಮಾಧಾನಕರ ಕಾರ್ಯಕ್ರಮಗಳನ್ನು ಗ್ರಂಥಾಲಯವು ನಿರ್ವಹಿಸಿದೆ. ಇದಕ್ಕೆ ಬಳಗದ ಮಂದಿಯ ನಿಸ್ವಾರ್ಥ ಸೇವಾ ಮನೋಭಾವವೇ ಕಾರಣ ಎಂದು ಗ್ರಂಥಾಲಯದ ಖಜಾಂಜಿ ಸಂಧ್ಯಾರಾಣಿ ಟೀಚರ್ ಹೇಳುತ್ತಾರೆ. ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಹಿರಿಯರಾದ ಬಿ. ಬಾಲಕೃಷ್ಣ ಅಗ್ಗಿತ್ತಾಯ, ವಿ.ಬಿ. ಕುಳಮರ್ವ, ಹರಿಕೃಷ್ಣ ಭರಣ್ಯ, ಕೆ. ಸುಂದರ ಶೆಟ್ಟಿ ಮಾಸ್ತರ್, ಪುರುಷೋತ್ತಮ ಮಾಸ್ತರ್, ಬಿ. ಕೇಶವ ಆಚಾರ್ಯ ಮೊದಲಾದವರಿಗೆ ಗುರುನಮನ ಸಲ್ಲಿಸಲಾಗಿದೆ. ಸೀತಮ್ಮ ಪುರುಷ ನಾಯಕ ಗ್ರಂಥಾಲಯದ 20 ವರ್ಷಗಳ ಹಾದಿಯ, ‘ಸಾಧನೆಯ ಹೆಜ್ಜೆಗುರುತುಗಳು’ ಎಂಬ ಪರಿಚಯ ಪತ್ರವನ್ನು ಈಚೆಗೆ ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಗ್ರಂಥಾಲಯದ ಆಶ್ರಯದಲ್ಲಿ ಸಾಹಿತ್ಯಾಸಕ್ತರಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರ ರಚನಾ ಸ್ಪರ್ಧೆಗಳೂ ನಡೆದಿವೆ. ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಮೂಲಕ ನಾಡಿನೆಲ್ಲೆಡೆ ಜ್ಞಾನದ ಬೆಳಕು ಪಸರಿಸಲಿ. ಅಜ್ಞಾನದ ಕತ್ತಲೆ ಕರಗಲಿ ಎಂಬುವುದೇ ಮನದಾಳದ ಹಾರೈಕೆ ಮತ್ತು ಆಶಯ.

    ಇದೀಗ ಕನ್ನಡ ಭವನ ಗ್ರಂಥಾಲಯವು ಸಾರ್ವಜನಿಕರಿಗಾಗಿ ವಿಶಾಲವೂ ಸುವ್ಯವಸ್ಥಿತವೂ ಆದ ವಾಚನಾಲಯವನ್ನು ಸಜ್ಜಗೊಳಿಸಿದೆ. ಸುಮಾರು 15000 ಪುಸ್ತಕಗಳು ಓದುಗರಿಗೆ, ಸಂಶೋಧಕರಿಗೆ ಉಪಯುಕ್ತ ನೆಲೆಯಲ್ಲಿದೆ. ಕೇರಳ ರಾಜ್ಯದಿಂದ ಹೊರಗಿನವರಿಗೆ ಕೇರಳ ಪ್ರಾಂತ್ಯಕ್ಕೆ ಸಾಂಸ್ಕೃತಿಕ ಸಾಹಿತ್ಯಿಕ ರಾಯಭಾರಿಗಳಾಗಿ ಆಗಮಿಸುವವರಿಗೆ ಕನ್ನಡ ಭವನ ಸಮುಚ್ಛಯದಲ್ಲಿ ಮೊದಲೇ 9633073400 ಸಂಚಾರವಾಣಿಯಲ್ಲಿ ನಿಗದಿಪಡಿಸಿದರೆ ಉಚಿತ ವಸತಿ ವ್ಯವಸ್ಥೆಯಿದೆ. ಇದರ ಸದುಪಯೋಗ ಪಡೆದುಕೊಳ್ಳಲು ವಾಮನ್ ರಾವ್ ಬೇಕಲ್ ಕೋರಿದ್ದಾರೆ.

    2024ರಲ್ಲಿ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಮಂಗಳೂರಿನ ಕಥಾಬಿಂದು ಪ್ರಕಾಶನದ ಸಹಯೋಗದಲ್ಲಿ ‘ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ 2024’, ಪಂಜೆ ಮಂಗೇಶರಾಯರ 150ನೇ ಜನ್ಮದಿನ ಸಂಭ್ರಮ, ಕೋಲಾರದ ಸ್ವರ್ಣಭೂಮಿ ಪೌಂಡೇಶನ್ ಸಹಯೋಗದಲ್ಲಿ ಕೇರಳ-ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024. ಕರ್ನಾಟಕ ಅಕಾಡೆಮಿ ಪ್ರಾಧಿಕಾರಗಳಲ್ಲಿ ನೇಮಕಗೊಂಡ ಕೇರಳ ಪ್ರಾಂತ್ಯದ ಸದಸ್ಯರಿಗೆ ಅಭಿನಂದನೆ ಇತ್ಯಾದಿ ಕಾರ್ಯಕ್ರಮಗಳು ನಿರಂತರ ನಡೆಯಿತು.

    ಕನ್ನಡ ಭವನವು ಹಿರಿಯರಿಗೆ “ಗುರುನಮನ”, “ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ”, “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ”, “ಕನ್ನಡ ಪಯಸ್ವಿನಿ ಪ್ರಶಸ್ತಿ”, “ಕನ್ನಡ ಭವನ ಸಮಾಜ ಸೇವಾರತ್ನ ಪ್ರಶಸ್ತಿ”, ಯುವ ಪ್ರತಿಭೆಗಳಿಗೆ “ಭರವಸೆಯ ಬೆಳಕು ಪ್ರಶಸ್ತಿ” ಅರ್ಹತೆಯ ವಿವಿಧ ಮಜಲುಗಳಿಗೆ ಅರ್ಹವಾಗಿ ನೀಡಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಕನ್ನಡ ಕೈಂಕರ್ಯಕ್ಕೆ ಪ್ರೋತ್ಸಾಹಿಸುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಯನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭಾ ಪ್ರೋತ್ಸಾಹ ಮಾಡುತ್ತಿದೆ.

    ಕನ್ನಡ ಮನಸ್ಸುಗಳು ಒಮ್ಮೆ ಹೋಗಿ ನೋಡಿ, ಕನ್ನಡತನವನ್ನು ಅನುಭವಿಸಿ ಬನ್ನಿ. ಕನ್ನಡದಿಂದ ಬದುಕುವವರಿದ್ದಾರೆ. ಕನ್ನಡವನ್ನು ಬದುಕಿಸುವವರಿದ್ದಾರೆ. ಇದರಲ್ಲಿ ಎರಡನೇಯ ಪಂಕ್ತಿಗೆ ಸೇರಿದವರು ವಾಮನ್ ರಾಮ್ ಬೇಕಲ್ ಸಂಧ್ಯಾರಾಣಿ ದಂಪತಿಗಳು.

    ಲೇಖಕರು : ಪ್ರದೀಪ್ ಬೇಕಲ್ ಜಿಲ್ಲಾ ವರದಿಗಾರರು, ಉದಯವಾಣಿ, ಕಾಸರಗೋಡು

    Share. Facebook Twitter Pinterest LinkedIn Tumblr WhatsApp Email
    Previous Article‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮ
    Next Article ಕೊಡಗಿನ ಕವಿ ಸಾಹಿತಿ  ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ಕೇಳು ಪಾಪಕ್ಕ’

    May 23, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications