ಬಿಳುಮನೆ ರಾಮದಾಸ್ ಒಬ್ಬ ಹಿರಿಯ ಕಥೆ ಕಾದಂಬರಿಕಾರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿಳುಮನೆಯಲ್ಲಿ 1941 ಮಾರ್ಚ್ 9ರಂದು ಜನಿಸಿದವರು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಮೌಲ್ಯಯುತ ಕಾದಂಬರಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ‘ಅನಾವರಣ’ ಎಂಬುದು ನಗರ ಜೀವನದ ಬಗ್ಗೆ ರಾಮದಾಸ್ ಬಿಳುಮನೆಯವರು ಬರೆದ ಚೊಚ್ಚಲ ಕಾದಂಬರಿ. ‘ರೋಜಾ ಪುಸ್ತಕ’ ಇದು ಕಾದಂಬರಿ ಪ್ರಕಾರಕ್ಕೆ ಅವರು ನೀಡಿದ ಅನನ್ಯ ಕೊಡುಗೆ. ಇವರ ಪ್ರಮುಖ ಕಾದಂಬರಿಗಳು ‘ಮರಳಿನ ಮನೆ’, ‘ಕುಂಜ’, ‘ಕರಾವಳಿಯ ಹುಡುಗಿ’, ‘ಲಡಾಯಿ’, ‘ವ್ಯಾಮೋಹ’, ‘ನಂಬಿ ಕೆಟ್ಟವರಿಲ್ಲವೋ’, ‘ಮಲೆಯ ಸಂತ’ ಇತ್ಯಾದಿ. ‘ಪ್ರೇಮ ಪ್ರೇಮ ಪ್ರೇಮ’ ಚಲನಚಿತ್ರ ಇವರ ರಚನೆಯ ‘ತಲೆಮಾರು’ ಕಾದಂಬರಿಯಾಧಾರಿತವಾಗಿದೆ. ‘ಹುಲಿ ಮಾಡಿಸಿದ ಮದುವೆ’ ಇದೊಂದು ಪ್ರಬಂಧ ಸಂಕಲನ. ‘ಹತ್ತಿರ ಬಂದು ದೂರಸರಿದವರು’ ಇವರ ರಚನೆಯ ನಾಟಕ ಕೃತಿ. ಅನುಕರಣೆ ಮಾಡುವ ಕಲೆ ಸಿದ್ಧಿಸಿಕೊಂಡವರು ರಾಮದಾಸ್ ಬೀಳುಮನೆಯವರು. ಎರಡು ಪಾತ್ರಗಳ ಸಂವಾದವನ್ನು ದ್ವಿಪಾತ್ರ ಅಭಿನಯದ ಮೂಲಕ ಸುಂದರವಾಗಿ ನಿರೂಪಿಸುವ ಅನುಕರಣ ಪಟುವಾಗಿದ್ದರು. ಅವರ ಸಾಹಿತ್ಯದಲ್ಲಿ ಬದಲಾವಣೆಗೆ ಒಗ್ಗಿಕೊಂಡ ಮಲೆನಾಡಿನ ಬದುಕಿನ ಸಾಧಕ – ಬಾದಕಗಳು ಕಂಡುಬರುತ್ತವೆ. ಇವರ ‘ಕರಾವಳಿ ಹುಡುಗಿ’ ಕಾದಂಬರಿಯಲ್ಲಿ ಘಟ್ಟದ ಕೆಳಗಿನ ಒಬ್ಬ ಹೆಣ್ಣುಮಗಳು ಘಟ್ಟದ ಮೇಲಕ್ಕೆ ಹೋಗಿ ಯಶಸ್ವೀ ಹೋಟೆಲ್ ವ್ಯವಹಾರ ನಡೆಸಿದ ಕಥಾವಸ್ತುವಾದರೆ, ಜೀತದಾಳನ್ನು ಮುಖ್ಯ ಪಾತ್ರವಾಗಿಟ್ಟು ರೂಪಿಸಿದ ಅತ್ಯುತ್ತಮ ಕಾದಂಬರಿ ‘ಕುಂಜ’. ‘ರೋಜಾ ಪುಸ್ತಕ’ ಭಿನ್ನ ಕಥಾ ವಸ್ತುವಿನ ಸುತ್ತ ಹೆಣೆದ ಒಂದು ಸ್ತ್ರೀ ಸಂಕಥನ. ಅಗಲಿದ ಗಂಡ ಮತ್ತು ದುಶ್ಚಟಗಳ ದಾಸನಾದ ಮಗ ಇವರ ಮಧ್ಯೆ ಜೀವನದಲ್ಲಿ ಹೋರಾಟ ಮಾಡಿ ಕುಟುಂಬವನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದ ಮಹಿಳೆಯ ಕಥೆ. ಹೀಗೆ ಕಾದಂಬರಿ ಲೋಕಕ್ಕೆ ಇವರು ನೀಡಿದ ಕೊಡುಗೆ ಅನನ್ಯವಾದುದು. ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗೆ ‘ಹಾವನೂರ ಪ್ರಶಸ್ತಿ’, ‘ಗೊರೂರು ಸಾಹಿತ್ಯ ಪ್ರಶಸ್ತಿ’, ‘ಕುವೆಂಪು ಶ್ರೀ ಪ್ರಶಸ್ತಿ’ ಮತ್ತು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ‘ರಾಜ್ಯೋತ್ಸವ ಸನ್ಮಾನ’ ಸೇರಿದಂತೆ ಹಲವಾರು ಗೌರವ – ಸನ್ಮಾನಗಳು ಅವರಿಗೆ ಸಂದಿವೆ. 2007ರಲ್ಲಿ ‘ಡಾ. ಎಲ್. ಬಸವರಾಜು ಪ್ರಶಸ್ತಿ’ಗೆ ಅವರು ಆಯ್ಕೆಯಾಗಿದ್ದರು ಅವರು ಪಡೆದ ಪ್ರಶಸ್ತಿಯ ನಗದು ಮೊತ್ತ ರೂಪಾಯಿ ಹತ್ತು ಸಾವಿರಕ್ಕೆ ತಮ್ಮ ಕಡೆಯಿಂದ ಹದಿನೈದು ಸಾವಿರ ಸೇರಿಸಿ ನಗದು ಮೊತ್ತ ಇಪ್ಪತೈದು ಸಾವಿರವನ್ನು ಡಾ. ಎಲ್. ಬಸವರಾಜು ಟ್ರಸ್ಟಿಗೆ ಹಿಂದಿರುಗಿಸಿದ ಸಹೃದಯಿ ಮಹಾನುಭಾವ ಬಿಳುಮನೆ ರಾಮದಾಸ್. ಇವರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಮತ್ತು ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿಳುಮನೆಯ ಇವರು ಜಯನಗರದಲ್ಲಿ ತಮ್ಮ ಸಹೋದರಿಯೊಂದಿಗೆ ವಾಸವಾಗಿದ್ದರು. ತಮ್ಮ 80ನೆಯ ವಯಸ್ಸಿನಲ್ಲಿ ಹೃದಯಾಘಾತಗೊಂಡು ಸಾಹಿತ್ಯ ಲೋಕದಿಂದ ಕಣ್ಮರೆಯಾದರು. ಈ ಅನನ್ಯ ಚೇತನಕ್ಕೆ ಹೃತ್ಪೂರ್ವಕ ನಮನ.
-ಅಕ್ಷರೀ