ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಪ್ರೊಫೆಸರ್ ಡಿ. ಲಿಂಗಯ್ಯನವರು ಪ್ರಸಿದ್ಧ ಜಾನಪದ ತಜ್ಞರಾಗಿ, ಪ್ರಾಧ್ಯಾಪಕರಾಗಿ, ಕವಿಗಳಾಗಿ, ಸಾಹಿತಿಗಳಾಗಿ ವೃತ್ತಿ ಜೀವನದೊಂದಿಗೆ ಸಾಹಿತ್ಯ ಕೃಷಿ ಮಾಡಿದ ಅನುಭವಿ. ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯಲ್ಲಿ 16 ಡಿಸೆಂಬರ್ 1939ರಲ್ಲಿ ದೇವೇಗೌಡ ಮತ್ತು ಸಿದ್ದಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಆರಂಭದ ಶಿಕ್ಷಣವನ್ನು ಮಂಡ್ಯದಲ್ಲಿ ಮುಗಿಸಿ 1968ರಲ್ಲಿ ಕನ್ನಡ ಎಂ.ಎ. ಪದವಿ ಪಡೆದು, ವಿಶ್ವೇಶ್ವರಯ್ಯ ಪದವಿ ಕಾಲೇಜಿಗೆ ಉಪನ್ಯಾಸಕರಾಗಿ ಸೇರಿದರು. ಹಂತ ಹಂತವಾಗಿ ಮೇಲೇರುತ್ತ ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕರಾಗಿ, ಸಹೋದ್ಯೋಗಿಗಳಿಗೆ ಆತ್ಮೀಯರಾಗಿ ಉತ್ತಮ ಸೇವೆ ನೀಡಿ 1997ರಲ್ಲಿ ನಿವೃತ್ತಿ ಹೊಂದಿದರು. ಪ್ರೊಫೆಸರ್ ಲಿಂಗಯ್ಯನವರು ಕೇವಲ ಕಾಲೇಜು, ಸಾಹಿತ್ಯ ಮತ್ತು ತಮ್ಮ ವೈಯಕ್ತಿಕ ಜೀವನಕ್ಕೆ ತಮ್ಮನ್ನು ಸೀಮಿತಗೊಳಿಸದೆ ಸಾಮಾಜಿಕವಾಗಿಯೂ ದುಡಿದ್ದಾರೆ ಎಂಬುದು ಸಂತೋಷದ ಸಂಗತಿ.
ಬೆಂಗಳೂರು ವಿಶ್ವವಿದ್ಯಾಲಯ ಅಕಾಡೆಮಿಕ್ ಕೌನ್ಸಿಲ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಸ್ನಾತಕ ಅಧ್ಯಯನ ಮಂಡಳಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಬಿಎಂಶ್ರೀ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿ, ಕೋಶಾಧಿಕಾರಿ, ಪರಿಷತ್ತಿನ ಗ್ರಂಥ ಪ್ರಕಟಣಾ ಸಲಹಾ ಸಮಿತಿಯ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಹಳ್ಳಿಯ ಜಾನಪದ ಸಂಸ್ಕೃತಿಯ ಮಧ್ಯೆ ಹುಟ್ಟಿ ಬೆಳೆದ ಇವರು ಹಳ್ಳಿಯ ಜನರ ಹೃದಯಕ್ಕೆ ಹತ್ತಿರವಾಗಿ ಬೆಳೆದವರು. ಕೆಳಗಲ ಹಟ್ಟಿ ಸಿದ್ದಮ್ಮನಿಂದ ಜಾನಪದ ಹಾಡುಗಳ ದೀಕ್ಷೆ ಪಡೆದುಕೊಂಡ ಲಿಂಗಯ್ಯನವರು ಆ ಬಗ್ಗೆ ಅತೀವ ಆಸಕ್ತಿ ವಹಿಸಿದ್ದರು. ಮಾತ್ರವಲ್ಲದೆ ಜಾನಪದ ಸಂಸ್ಕೃತಿ ರಕ್ತಗತವಾಗಿರುವುದರಿಂದಲೇ, ಜಾನಪದ ಕ್ಷೇತ್ರದಲ್ಲಿ ಸತತ ಕ್ಷೇತ್ರಕಾರ್ಯ ಮಾಡಿದ ಪರಿಣಾಮವಾಗಿ ಜಾನಪದ ಗೀತೆಗಳು, ಜಾನಪದ ಕಾವ್ಯಗಳು, ಪ್ರಾಣಿಯ ಕಥೆಗಳು ಹೀಗೆ ಸುಮಾರು 21 ಪುಸ್ತಕಗಳನ್ನು ಪ್ರಕಟಿಸುವುದು ಅವರಿಗೆ ಸಾಧ್ಯವಾಯಿತು. ಸಾಹಿತ್ಯ ಕ್ಷೇತ್ರದ ಎಲ್ಲಾ ಆಯಾಮಗಳಲ್ಲೂ ಕೈಯಾಡಿಸಿದ ಇವರ ಸಾಧನೆ ಅನನ್ಯ. ನಾಟಕ, ಕಥೆ, ಕವನ, ಜೀವನ ಚರಿತ್ರೆ, ವ್ಯಕ್ತಿ ಚಿತ್ರಣಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಹೆಸರಾದವರು.
ಆಟಿಕೆ, ಕನಸಿನ ರಾಣಿ, ರಣಕಾಟಿಗಳು – ಇವರ ಕಥಾ ಸಂಕಲನಗಳು. ಅಂತರಂಗದ ಹಾಡು, ವೀಕ್ಷಕ, ಕಲಬೆರಕೆ, ಭಗ್ನ ಪ್ರತಿಮೆ, ವಚನ ರಚನ, ಚುಟುಕಾಂಜಲಿ, ವಚನ ದವನ, ಚೇತನ ಚಿಲುಮೆ, ಗಂಧವತಿ ಇವು ಇವರ ಕವನ ಸಂಕಲನಗಳು. ದಡ್ಡ ಶಿಖಾಮಣಿ, ಬಡತನದ ಬಾಳು, ಬ್ರಹ್ಮಚಾರಿ, ಬ್ರಹ್ಮ ಬರಹ ಇವು ಇವರ ಲೇಖನಿಯಿಂದ ಹೊರಬಂದ ನಾಟಕಗಳು. ಕಾವ್ಯಾಸ್ವಾದನ, ಕಾವ್ಯ ಚಿಂತನ, ಕಾವ್ಯಾನುಭವ ಇವು ವಿಮರ್ಶ ಕೃತಿಗಳು. ಕನ್ನಡ ರಥಿಕರು, ದೊಡ್ಡವರು ಇವು ವ್ಯಕ್ತಿ ಚಿತ್ರಣ ಕೃತಿಗಳಾದರೆ, ಶಿಲಾಪದ್ಮ. ಶಿಕ್ಷಣದಲ್ಲಿ ಕನ್ನಡ. ಚಿಂತನ ಸಿಂಧು. ಕಣ್ಣಳತೆ ಇವು ಪ್ರಬಂಧ ಕೃತಿಗಳು. ಕೊಂತಿ ಪೂಜೆ, ಮಣ್ಣಿನ ಮಿಡಿತ, ಪಡಿನೆರಳು, ಬಯಲು ಸೀಮೆಯ ಜನಪದ ಗೀತೆಗಳು ಇತ್ಯಾದಿ ಜಾನಪದ ಕೃತಿಗಳನ್ನು ಸೇರಿಸಿ ಸುಮಾರು 65ಕ್ಕೂ ಹೆಚ್ಚು ಕೃತಿಗಳು ಲೋಕಾರ್ಪಣೆಗೊಂಡಿದೆ. ಕೊಂತಿ ಪೂಜೆ ಆಚರಣೆಯ ವೈಜ್ಞಾನಿಕ ಹಿನ್ನಲೆ ತಿಳಿದುಕೊಂಡು ಇದರ ಆಳವಾದ ಅಧ್ಯಯನ ಮಾಡಿದರು. ‘ಕೊಂತಿ ಪೂಜೆ’ ಕೃತಿಯು ತೀ.ನಂ.ಶ್ರೀ., ಪಿ.ಕೆ. ವೆಂಕಟರಾಮಯ್ಯ ಇತ್ಯಾದಿ ಹಿರಿಯ ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಸಾಹಿತ್ಯ ಕೃಷಿ ಮಾಡಿ ಸಾಮಾಜಿಕವಾಗಿ ದುಡಿದ ಇವರು ಅಷ್ಟಕ್ಕೇ ನಿಲ್ಲಿಸದೆ ಸಮಾಜದ ವ್ಯವಸ್ಥೆಯನ್ನು ಸುಧಾರಿಸಲು ಜನಪರ ಚಳುವಳಿಗಳಲ್ಲಿ ಭಾಗವಹಿಸಿ ತಮ್ಮ ಪಾಲಿನ ಅನನ್ಯ ಸೇವೆ ಸಲ್ಲಿಸಿದ್ದಾರೆ. ಕನ್ನಡ ಚಳುವಳಿಗಳಲ್ಲಿ ಅವರದು ಎತ್ತಿದ ಕೈ. ಚಳುವಳಿಗಳ ಬಗ್ಗೆ ಪತ್ರಿಕಾ ಹೇಳಿಕೆ ನೀಡುವ ಮೂಲಕ ಪ್ರತಿಭಟನೆ ಮಾಡುವಲ್ಲಿಗೆ ಮಿತಿಯನ್ನು ಹಾಕಿಕೊಳ್ಳದೆ ಚಳುವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 1982ರಲ್ಲಿ ನಡೆದ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿಯನ್ನು ಪ್ರತಿಭಟಿಸಿ ಒಂದು ಹಂತದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಆದ್ದರಿಂದಲೇ ಅವರು ಜನಮನಕ್ಕೆ ಮೆಚ್ಚುಗೆಯಾದರು.
ಸಾಹಿತ್ಯ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಗಾಗಿ ಕರ್ನಾಟಕದ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ರಾಜ್ಯ ಪ್ರಶಸ್ತಿ, ಚುಟುಕ ಭೂಷಣ ಪ್ರಶಸ್ತಿ, ಡಾ. ಸಿಂಪಿಲಿಂಗಣ್ಣ ಪ್ರಶಸ್ತಿ, ಡಾ. ಜಿ. ಶಂಪೋ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಮಂಡ್ಯ ಜಿಲ್ಲೆಯವರಾದ ಲಿಂಗಯ್ಯನವರು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, 13 ಸಪ್ಟಂಬರ್ 2012ರಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಟ್ರಸ್ಟಿನ ಹಿರಿಯ ಸದಸ್ಯರೂ ಸಂಶೋಧಕರೂ ಆದ ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ಎಲ್.ಎಸ್. ಶೇಷಗಿರಿ ರಾವ್, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಡಾ. ಚಿದಾನಂದ ಮೂರ್ತಿ ಇವರುಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮೂರು ಮಂದಿಯನ್ನು ಸನ್ಮಾನಿಸಿದ ನಂತರ ಡಾ. ಚಿದಾನಂದ ಮೂರ್ತಿ ಇವರನ್ನು ಸನ್ಮಾನಿಸುವ ಸಂದರ್ಭದಲ್ಲಿ ಹೃದಯಾಘಾತದಿಂದ ವೇದಿಕೆಯಲ್ಲಿ ಕುಸಿದು ಸಾಹಿತ್ಯ ಸೇವೆ ಮಾಡುತ್ತಲೇ ಸಾಹಿತ್ಯ ಲೋಕದಿಂದ ದೂರವಾದರು. “80ರಿಂದ 100 ವರ್ಷ ವಯಸ್ಸಿನ ನಾಲ್ವರು ಹಿರಿಯ ಸದಸ್ಯರನ್ನು ಗೌರವಿಸುತ್ತಿದ್ದೇವೆ. ಇಂಥ ಸಂಭ್ರಮದಲ್ಲಿ ಪಾಲ್ಗೊಂಡ ನಾವೇ ಭಾಗ್ಯವಂತರು. ಇದು ಬಿ.ಎಂ.ಶ್ರೀ ಪ್ರತಿಷ್ಠಾನದ ಇತಿಹಾಸದಲ್ಲಿ ಮರೆಯಲಾಗದ ದಿನ” ಎಂಬುದು ಆ ವೇದಿಕೆಯಲ್ಲಿ ಅವರು ಹೇಳಿದ ಕೊನೆಯ ಮಾತಾಗಿತ್ತು. ಅದರಂತೆ ಸಾಹಿತ್ಯ ಸೇವೆ ಮಾಡುತ್ತಲೇ ಕೊನೆಯುಸಿರೆಳೆದ ಆ ಸಂದರ್ಭ ಸಾಹಿತ್ಯ ಕ್ಷೇತ್ರದ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿಯೇ ಉಳಿಯಿತು.
– ಅಕ್ಷರೀ
