ನಮ್ಮ ಹೆಮ್ಮೆಯ ಕರ್ನಾಟಕದ ಜನಪದ ಸಂಸ್ಕೃತಿಗಳಾದ ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದವುಗಳು ಮಾನವನಷ್ಟೇ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ. ಮೇಲಾಗಿ ನಮ್ಮ ರಾಷ್ಟ್ರದ ಜೀವಾಳ. ಅದರಲ್ಲಿಯೂ ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳು.
ಕರ್ನಾಟಕದ ಧಾರ್ಮಿಕ ನೃತ್ಯಗಳನ್ನು ‘ಕುಣಿತ’ ಎನ್ನಲಾಗುತ್ತದೆ. ಅವುಗಳೇ ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಕಂಗೀಲು, ಕರಡಿ ಮಜಲು, ಕಂಸಾಳೆ, ಜಡೆ ಕೋಲಾಟ, ಗೊರವ ನೃತ್ಯ, ನಂದಿ ಧ್ವಜ ಮುಂತಾದವುಗಳು. ಇವುಗಳಲ್ಲಿ ಗೊರವ ಕುಣಿತ ಒಂದು ವಿಶೇಷ ಪ್ರಕಾರ. ಕರ್ನಾಟಕದ ವಿಶಿಷ್ಟ ಜನಪದ ಕಲೆಗಳಲ್ಲಿ ಒಂದು.
ಗೊರವರ ಕುಣಿತವು ಮೈಲಾರ ಲಿಂಗನ ಪ್ರಾತಿನಿಧಿಕ ರೂಪವಾಗಿದ್ದು, ಪ್ರದರ್ಶನ ಕಲೆಗೆ ಪ್ರಸಿದ್ಧವಾದುದು. ಇವರು ಮೈಲಾರ ಲಿಂಗನ ಶಿಷ್ಯರೆಂದೂ ಮುಡುಕು ತೊರೆಯ ಮೈಲಾರ ಸ್ವಾಮಿಯ ಒಕ್ಕಲಿಗರೆಂದು ಗುರುತಿಸಿಕೊಂಡವರು. ಇದೊಂದು ಕುರುಬ ಗೌಡ ಸಮುದಾಯದ ಸಾಂಪ್ರದಾಯಿಕ ನೃತ್ಯವೂ ಹೌದು. ಇದರಿಂದಾಗಿ ಇವರನ್ನು ಮೈಲಾರ ಲಿಂಗ ಕಥಾ ಪರಂಪರೆಯ ಹಾಡುಗಾರಿಕಾ ವೃತ್ತಿ ಗಾಯಕರು ಎನ್ನಲಾಗಿದೆ. ಕಥೆ ಹೇಳುವ ಗೊರವರನ್ನು ಕಾರಣಿಕ ಸ್ವಾಮಿ ಎನ್ನಲಾಗುತ್ತದೆ. ಪೂಜಾರಿ ಗೊರವ ಜಾತ್ರೆಗಳಲ್ಲಿ ಎಣ್ಣೆ ಸವರಿದ ಕಂಗು ಏರಿ ಭವಿಷ್ಯ ನುಡಿಯುವುದು ವಾಡಿಕೆ. ಜೊತೆಗೆ ಪವಾಡ ಪ್ರದರ್ಶನಗಳಲ್ಲಿ ಪರಿಣಿತರು. ದಕ್ಷಿಣ ಭಾರತದಲ್ಲಿ ಇವರನ್ನು ಗೊರವ, ಗೊಗ್ಗಯ್ಯ, ಗಡಬಡಯ್ಯ. ಉತ್ತರ ಕರ್ನಾಟಕದಲ್ಲಿ ಗ್ವಾರಪ್ಪ, ವಗ್ಗ, ವಾಘ್ಯಾ . ಮಹಾರಾಷ್ಟ್ರದಲ್ಲಿ ಖಂಡೋಬ ಎಂಬುದಾಗಿಯು ಕರೆಯುತ್ತಾರೆ. ಧಾರವಾಡ, ಬೀದರ್, ಗುಲ್ಬರ್ಗಾ, ಬೆಳಗಾವಿ, ಶಿವಮೊಗ್ಗ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನ ಮೈಲಾರ ಕ್ಷೇತ್ರಗಳಲ್ಲಿ ಹೆಚ್ಚಾಗಿ ನೆಲೆಸಿರುತ್ತಾರೆ.
ಇವರ ವೇಷ ಭೂಷಣಗಳು ಅತ್ಯಂತ ಆಕರ್ಷಕ ಮತ್ತು ಐತಿಹ್ಯ. ಕಪ್ಪು ನಿಲುವಂಗಿ ಕೆಂಪು ಪೈಜಾಮ, ಅಡ್ಡ ಕವಡೆ ಪಚ್ಚೆ ಪೋಣಿಸಿ ಕೆಂಪು ವಸ್ತ್ರದಿಂದ ಸಂಯೋಜಿಸಿರುವ ಕವಡೆ ಪಟ್ಟೆ ಕತ್ತಿನ ಪಟ್ಟಿ, ಸೊಂಟದಲ್ಲಿ ಕವಡೆ ಪಟ್ಟಿ, ಕೈಯಲಿ ಪಿಳ್ಳಂಗೋವಿ, ಡಮರುಗ, ಬಂಡಾರದ ಚೀಲ, ತಲೆಗೆ ಕರಡಿ ಟೋಪಿ, ಕಾಲಿಗೆ ಗೆಜ್ಜೆ ಸರ, ಹಣೆಯಲಿ ಅರಿಷಿಣ ಲೇಪನದ ವಿಭೂತಿ, ಕುಂಕುಮ, ಹುಬ್ಬಿನಲ್ಲಿಯೂ ವಿಭೂತಿ ಧರಿಸಿ ಕೊಳಲು ಊದುತ್ತಾ ಅದಕ್ಕೆ ತಕ್ಕಂತೆ ಡಮರುಗ ಭಾರಿಸುತ್ತಾ ಆವೇಷದಿಂದ ಕುಣಿಯುವುದು ಗೊರವ ಕುಣಿತದ ವೈಶಿಷ್ಟ.
ಐತಿಹಾಸಿಕ ಹಿನ್ನಲೆಯ ಪ್ರಕಾರ ಮಣಿ ಅಸುರ ಮತ್ತು ಮಲ್ಲಾಸುರರು ಮರಣಬಾರದಂತೆ ಶಿವನಿಂದಲೇ ವರ ಪಡೆದವರು. ಆದರೆ ಕ್ರಮೇಣ ಲೋಕಕ್ಕೆ ಕಂಟಕ ಪ್ರಾಯರಾಗುತ್ತಾರೆ. ಇದನ್ನು ಸಹಿಸಲಾಗದ ಪುರ ಜನರು ಶಿವನಲ್ಲಿ ರಕ್ಷಣೆಗಾಗಿ ಮೊರೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಶಿವನು ಮೇಲಿನ ಮಾರು ವೇಷ ಧರಿಸಿ ಅವರನ್ನು ಸಂಹರಿಸುತ್ತಾನೆ ಎಂಬ ಪ್ರತೀತಿ. ಅಂದಿನ ಮಾರು ವೇಷದ ಆ ಮೈಲಾರ ಲಿಂಗದ ರೂಪವೇ ಇಂದಿನ ಗೊರವರ ಶೈಲಿಯಾಗಿ ಮುಂದುವರಿದಿದೆ ಎನ್ನಲಾಗಿದೆ.
ಹೀಗೆ ಮೈಲಾರ ಲಿಂಗನ ಸುತ್ತ ಹೆಣೆದ ಮೌಖಿಕ ಪರಂಪರೆಯ ಹಲವು ಪ್ರಸಂಗಗಳಾದ ತುಪ್ಪದ ಮಾಳವ್ವ, ತುಪ್ಪದ ಮೌಳಿ ವಿವಾಹ, ಗಂಗೆ ಮಾಳವ್ವ, ಕುರಿಕಾಯ್ದ ಪ್ರಸಂಗ, ಕಂಬಳಿ ಮಾರಿದ ಪ್ರಸಂಗ, ಸಿದ್ದೇಶ್ವರಮ್ಮಗೆ ಕಣ್ಣು ದೃಷ್ಟಿ ಬಂದ ಪ್ರಸಂಗ ಮುಂತಾದ ಜನಪದ ಕಥೆಯನ್ನು ರಸವತ್ತಾಗಿ ಕಥೆಯ ರೂಪದಲ್ಲಿ ಹೇಳುತ್ತಾ ಹಾಡುತ್ತಾ ಕುಣಿಯುವುದೇ ಗೊರವ ನೃತ್ಯ ಕುಣಿತ.
ಇಂತಹ ವಿಶೇಷ ನೃತ್ಯವನ್ನು ಕರಗತ ಮಾಡಿಕೊಂಡು ಸಮಾನ ವಯಸ್ಸಿನ ಇಪ್ಪತ್ತೈದು ಯುವ ಗೊರವರನ್ನು ಸಂಘಟಿಸಿ ಗೊರವರ ಕುಣಿತದ ಸಂಘ ಕಟ್ಟಿಕೊಂಡು ಭಾರತದಾದ್ಯಂತ ಪ್ರಚಲಿತಗೊಳಿಸಿರುವ ಗೊರವರ ಕಲೆಯನ್ನು ಪ್ರದರ್ಶಿಸಿ ಪೋಷಿಸುತ್ತಿರುವ ಅಪರೂಪದ ಕಲಾವಿದರೇ ಗೊರವ ನೃತ್ಯ ಕಲಾರತ್ನ ಮಲ್ಲೇಶ್.
ಮೂಲತಃ ಇವರು ಕರ್ನಾಟಕ ರಾಜಧಾನಿ ಬೆಂಗಳೂರಿನ ವಿದ್ಯಾರಣ್ಯ ಪುರಂ ಸಮೀಪದ ಸಿಂಗಾಪುರದ ನಿವಾಸಿ. ದಿನಾಂಕ 10-06-1979ರಲ್ಲಿ ಅರಳು ಮಲ್ಲಿಗೆ ಪಟ್ಟಣದ ಗೊರವ ಮೈಲಾರಪ್ಪ ಮತ್ತು ಹನುಮಕ್ಕ ದಂಪತಿಗಳ ಏಕೈಕ ಸುಪುತ್ರನಾಗಿ ಜನಿಸಿದವರು. ಇವರ ಪತ್ನಿ ರಾಧಾ. ಸುಜನ್ ಹಾಗೂ ಮಲ್ಲಿಕಾರ್ಜುನ್ ಮಲ್ಲೇಶ್ ರ ಸುಪುತ್ರರರು. ಎಸ್.ಎಸ್.ಎಲ್.ಸಿ.ವರೆಗೆ ವಿದ್ಯಾಭ್ಯಾಸ ಪಡೆದ ಇವರು ನಂತರದಲ್ಲಿ ಕೃಷಿ ಕಾರ್ಯದೊಂದಿಗೆ ಗೊರವರ ಕುಣಿತವನ್ನು ಒಂದು ವೃತ್ತಿ ಎಂಬಂತೆ ರೂಢಿಸಿಕೊಂಡರು. ಹಿರಿಯ ಗೊರವ ಅತ್ತಿಗನ ಪಾಳ್ಯದ ಗಣಾಚಾರಿ ಮಲ್ಲೇಗೌಡ ಎಂಬವರಿಂದ ದೀಕ್ಷೆ ಪಡೆದು ಜಾನಪದ ಲೋಕದತ್ತ ಸುದೀರ್ಘ ಪಯಣ ಬೆಳೆಸಿದವರು. ಗೊರವ ನೃತ್ಯ ಪ್ರಕಾರದಲ್ಲಿ ಆಳವಾದ ಅಧ್ಯಯನ ಮಾಡಿ ಹಿರಿಯ ಕಲಾವಿದ ಅರಳು ಮಲ್ಲಿಗೆಯ ಮುನಿಯಪ್ಪನವರೊಂದಿಗೆ ಸತತ ಮೂವತ್ತು ವರ್ಷಗಳು ಗೊರವ ಕುಣಿತ, ಜನಪದ ನೃತ್ಯ, ಹಾಡುಗಾರಿಕೆ, ದೊಡ್ಡ ವರಸೆ, ತೆಂಗಿನ ಕಾಯಿ ಪವಾಡ, ಮೈಲಾರ ಲಿಂಗೇಶ್ವರ ಮಹಾ ಕಾವ್ಯ ಹಾಡುವುದರಲ್ಲಿ ಪರಿಣಿತರು. ಮಾತ್ರವಲ್ಲದೆ ಪ್ರಾಚೀನ ಕಲೆಯನ್ನು ಪೋಷಿಸಿ ಬೆಳೆಸಿ ಉಳಿಸಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಗೊಂಡಿರುವ ಇವರ ಅವಿರತ ಪರಿಶ್ರಮ ಶ್ಲಾಘನೀಯ.
ಮಲ್ಲೇಶರು ತಮ್ಮನ್ನು ಕೇವಲ ವೃತ್ತಿ ನೃತ್ಯಕ್ಕೆ ಮಾತ್ರ ಸೀಮಿತಗೊಳಿಸದೆ ಔದಾರ್ಯತೆಯಿಂದ ತಮ್ಮ ನಾಯಕತ್ವದಲ್ಲಿ ಗೊರವ ಕುಣಿತದ ಹಲವಾರು ಕಾರ್ಯಕ್ರಮಗಳನ್ನು ತುಮಕೂರು, ಮಂಗಳೂರಿನ ಬಿ.ಸಿ.ರೋಡ್, ಬೆಂಗಳೂರು ಮುಂತಾದೆಡೆಗಳಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ. ಇಷ್ಟೇ ಅಲ್ಲದೆ ಜನಾಸಕ್ತರನ್ನು ಗುರುತಿಸಿ ದೊಡ್ಡ ಬಳ್ಳಾಪುರ, ಮೈಸೂರು, ಹೈದರಾಬಾದ್, ರಾಮ ನಗರ, ಬೆಂಗಳೂರು, ಯಾದಗಿರಿ ಹೀಗೆ ಕರ್ನಾಟಕದಾದ್ಯಂತ ಗೊರವ ಕುಣಿತದ ಹಲವಾರು ತರಬೇತಿ ಕಾರ್ಯಾಗಾರಗಳನ್ನು ಮಾಡುತ್ತಾ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಮೇಲಾಗಿ ತಮ್ಮ ಅನುಭವ ಮತ್ತು ಆಸಕ್ತಿಯನ್ನು ಸಾಹಿತ್ಯದ ಮೂಲಕ ‘ಕಲೆ ಮತ್ತು ಕ್ರೀಡೆ’ ಸಾಂಸ್ಕೃತಿಕ ವೀರ ಮೈಲಾರ ಲಿಂಗ’ ಹಾಗೂ ಇತರ ಕೃತಿಗಳನ್ನು ಲೋಕಾರ್ಪಣೆ ಮಾಡಿರುವುದು ಇವರ ಸಾಧನೆಯ ಮತ್ತೊಂದು ಗರಿ.
ಗೊರವರ ಕುಣಿತದ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸ್ವತಃ ತಾವೇ ವಿಶೇಷ ವೇಷ ಭೂಷಣಗಳನ್ನು ಧರಿಸಿ ಕುಣಿತಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಾ ಬಂದಿರುವುದು ಇವರ ಅಪ್ರತಿಮ ಸಾಧನೆ. ಇವರ ಅದ್ಭುತ ವೈವಿಧ್ಯಮಯ ಕಲಾ ಸಾಧನೆಗಳನ್ನು ಗುರುತಿಸಿ- ಜನಪದ ಪ್ರಶಸ್ತಿ ಬೆಂಗಳೂರು, ಕಲಾ ಸೇವಾ ಪ್ರಶಸ್ತಿ – ದೊಡ್ಡ ಬಳ್ಳಾಪುರ, ಕನಕ ಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ -ಬೆಂಗಳೂರು, ಜನಪದ ಕಲಾ ಪ್ರಶಸ್ತಿ – ಬೆಂಗಳೂರು ಇವೇ ಮುಂತಾದ ಪ್ರಶಸ್ತಿಗಳು ಇವರ ಪರಿಶ್ರಮಕ್ಕೆ ಸಂದಿರುತ್ತದೆ.
ಪ್ರಸ್ತುತ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಮನರಂಜನಾ ಕಲೆಯನ್ನಾಗಿಸಿರುವ ಕೀರ್ತಿ ಮಲ್ಲೇಶರಿಗೆ ಸಲ್ಲುತ್ತದೆ. ಇಂತಹ ಅಪೂರ್ವ ಗೊರವರ ಕಲೆಗೆ ಆಕರ್ಷಿತ ರೂಪಕೊಟ್ಟು ಪ್ರಸಾರ ಮಾಡುವ ಸದುದ್ದೇಶದಿಂದ ‘ಶ್ರೀ ಮೈಲಾರ ಲಿಂಗೇಶ್ವರ ಗೊರವರ ಕಲಾ ಸಂಘ’ವನ್ನು ಆರಂಭಿಸಿ ರಾಷ್ಟ್ರ ಮಟ್ಟದವರೆಗೆ ಬೆಳೆಸಿರುವ ಕರ್ನಾಟಕದ ಅಪರೂಪದ ಗೊರವ ಕಲೆಯ ಸಂಘಟಕ ಎಂಬುದು ಇವರ ಮತ್ತೊಂದು ಸಾಧನೆಯ ಮಜಲು. ಮುಖ್ಯವಾಗಿ ಮೈಲಾರ ಲಿಂಗ ಕಥಾ ಪರಂಪರೆಯ ಹಾಡುಗಾರಿಕೆಯನ್ನು ವಾಖ್ಯಾನದ ಮುಖಾಂತರ ಭಕ್ತ ವೃಂದಕ್ಕೆ ಪ್ರಸಾರ ಮಾಡುವುದು ಇದರ ಮುಖ್ಯ ಆಶಯವಾಗಿದೆ. ಜೊತೆಗೆ ದೊಣ್ಣೆವರಸೆ, ಕತ್ತಿ ಕಾಳಗದಂತಹ ಸಾಹಸ ಕಥೆಗಳನ್ನು ನೃತ್ಯಗಳ ನಡುವೆ ವಿನೋದಕ್ಕಾಗಿ ಪ್ರದರ್ಶಿಸುತ್ತಾ ಬಂದಿರುತ್ತಾರೆ.ಬೆತ್ತ ಮತ್ತು ತಲೆಯಿಂದ ತೆಂಗಿನಕಾಯಿ ಒಡೆಯುವುದು. ಶಸ್ತ್ರ ಪವಾಡ, ಅಗ್ನಿ ಪವಾಡ, ಸರಪಣಿ ಪವಾಡ ಇಂತಹ ಹಲವು ಚಮತ್ಕಾರಿ ಪ್ರಸಂಗಗಳನ್ನು ಪ್ರೇಕ್ಷಕರ ಮನ ಮುಟ್ಟುವಂತೆ ಪ್ರದರ್ಶಿಸುವುದು, ಆಕರ್ಷಕ ಶಕ್ತಿ. ಕೋಲಾಟ, ಹಾಡುಗಾರಿಕೆ, ಮಲ್ಲಕಂಭದಂತಹ ಕಠಿಣ ಕಲೆಗಳನ್ನೂ ಕರಗತ ಮಾಡಿಸಿಕೊಂಡಿರುವ ಹಿರಿಮೆ ಗೊರವ ಮಲ್ಲೇಶರದ್ದು.
ಗೊರವ ಮಲ್ಲೇಶರು ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ಡಮರುಗ ಧ್ವನಿ ರೂಪಕ ಮತ್ತು ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿರುವ ಓರ್ವ ಅಪರೂಪದ ಅದ್ಭುತ ಕಲಾರಾಧಕರು. ಒಟ್ಟಿನಲ್ಲಿ ಮಲ್ಲೇಶ್ ರು ಬಹುಮುಖ ಜಾನಪದ ಕಲಾ ಪ್ರತಿಭೆಗಳ ಸರದಾರ ಎಂದೇ ಹೇಳಬಹುದು. ಇವರಮುಂದಿನ ಮಹತ್ಕಾರ್ಯಗಳೂ ಅಕ್ಷಯವಾಗುತ್ತಲೇ ಇರಲಿ, ಇವರ ಕೀರ್ತಿ ವಿಶ್ವದಾದ್ಯಂತ ಬೆಳಕು ಚೆಲ್ಲಲಿ ಎಂಬ ಶುಭಹಾರೈಕೆಯೊಂದಿಗೆ .
- ಲಲಿತಾ ಕೆ. ಅಚಾರ್,
ನಿವೃತ್ತ ಪ್ರಾಂಶುಪಾಲರು, ಬೆಂಗಳೂರು