ರಾಮಾಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ 09 ಜನವರಿ 1927ರಂದು ಜನಿಸಿದ ಎಚ್.ಆರ್. ಶಂಕರನಾರಾಯಣ ಅವರು ಮೂಲತಃ ತುಮಕೂರಿನವರು. ಹಾ.ರಾ. ಕಾವ್ಯನಾಮದಲ್ಲಿ ಬರವಣಿಗೆ ಆರಂಭಿಸಿದ ಇವರು ಖ್ಯಾತ ವಕೀಲರು. ಕೊರವಂಜಿ, ನಗುವನಂದ, ಅಪರಂಜಿ, ವಿಕಟ ವಿನೋದ ಹಾಗೂ ಇತರ ಪತ್ರಿಕೆಗಳಲ್ಲಿ ಹಾ.ರಾ. ಅವರ ಹಾಸ್ಯ ಲೇಖನಗಳು ಪ್ರಕಟವಾಗಿದ್ದವು. ಬೆಂಗಳೂರಿನ ಲಾ ಕಾಲೇಜಿನಿಂದ ಬಿ.ಎಲ್. ಪಡೆದ ಇವರು ಕೆಲ ಕಾಲ ಪತ್ರಕರ್ತರಾಗಿದ್ದರು. ನಂತರ ತುಮಕೂರಿನ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ವಕೀಲಿ ವೃತ್ತಿಯನ್ನೂ ಮಾಡುತ್ತಿದ್ದರು. ತುಮಕೂರಿನಲ್ಲಿ ಜಿಲ್ಲಾ ಸಾಹಿತ್ಯ ಸಂಘವನ್ನು ಸ್ಥಾಪಿಸಿ, ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರ ‘ಸಮರಸ’ ಗ್ರಂಥವು ಜಿಲ್ಲಾ ಸಾಹಿತಿಗಳ ಕೈಪಿಡಿಯಾಗಿದೆ.
ಹಾಸ್ಯ ಬರಹಗಳು ಹಾಗೂ ಹಾಸ್ಯ ಉಪನ್ಯಾಸಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಹಾಸ್ಯ ಲೇಖನಗಳನ್ನು ಬರೆದ ಕೀರ್ತಿ ಹಾ.ರಾ. ಅವರಿಗೆ ಸಲ್ಲುತ್ತದೆ. ಇವರ ಗುಲಾಬಿ ಪ್ರಕಾಶನದಲ್ಲಿ ‘ಕಬ್ಬು ಕುಡುಗೋಲು’, ‘ನಗೆ-ನಾಣ್ಯ’, ‘ಹಿಂದೇನಾ ಮುಂದೇನಾ ಎಂದೆಂದೂ ಹಿಂಗೇನಾ’, ‘ಗಿಲ್ಟ್ ಆರ್ ನಾಟ್ ಗಿಲ್ಟ್’, ‘ಯಾರಿಗೆ ತಲೆ ಸರಿಯಾಗಿದೆ’, ‘ಸುಬ್ಬನ ಬುರುಡೆಗಳು’, ‘ವಕ್ರೇಶ ವಚನಗಳು’ ಮತ್ತು ‘ವಕೀಲಿ ದಿನಗಳು’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ನಗೆಯು ಬರುತ್ತಿದೆ’, ‘ಸಮಗ್ರ ಹಾಸ್ಯ’, ‘ಮಂದಸ್ಮಿತ’ ಕೃತಿಗಳು ಇತ್ತೀಚಿನ ಪ್ರಕಟಣೆಗಳು. ‘ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ’, ‘ಗೊರೂರು ಪ್ರಶಸ್ತಿ’, ‘ಪಡುಕೋಣೆ ರಮಾನಂದ ಪ್ರಶಸ್ತಿ’ ಇವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಸಂದ ಪ್ರಮುಖ ಪ್ರಶಸ್ತಿಗಳು.
ವಿಮರ್ಶಕರು ಮಾಧುರಿ ಶ್ರೀರಾಮ್