ತುಳುನಾಡಿನಲ್ಲಿ ಕಂಡು ಬರುವ ಪ್ರದರ್ಶನ ಕಲೆಗಳಲ್ಲಿ ಕಂಗಿಲು ಕೂಡ ಒಂದು. ಕಂಗಿಲು ಕುಣಿತ ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಕರಾವಳಿ ಕರ್ನಾಟಕ ಭಾಗದಲ್ಲಿ ಈ ಕುಣಿತವನ್ನು ಒಂದು ನಿರ್ದಿಷ್ಟ ಜನಾಂಗದವರು ನಡೆಸುತ್ತಾರೆ. ಮುಖ್ಯವಾಗಿ ಮುಂಡಾಲ ಜನಾಂಗದವರು ಕಂಗಿಲು ಕುಣಿತವನ್ನು ಒಂದು ಆರಾಧನಾ ಪ್ರಕಾರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಕುಣಿತವನ್ನು ನಡೆಸುವ ಮುಖ್ಯ ಉದ್ದೇಶ ಸಸ್ಯ ಸಮೃದ್ಧಿ ಮತ್ತು ರೋಗ ನಿವಾರಣೆ. ತುಳುವಿನಲ್ಲಿ ಬರುವ ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ ಈ ಕುಣಿತವನ್ನು ನಡೆಸುವುದು ರೂಢಿ. ಈ ಆರಾಧನಾ ಪ್ರಕ್ರಿಯೆಯಲ್ಲಿ ಕುಣಿತ, ಹಾಡು, ಹಾಸ್ಯ, ವಾದ್ಯ ಪರಿಕರಗಳ ನುಡಿಸುವಿಕೆ, ಡೋಲು ನಾದಗಳ ಜೊತೆ ಕಾಣಿಕೆ ಒಪ್ಪಿಸುವ ಕ್ರಮಗಳು ನಡೆಯುತ್ತವೆ. ಕಂಗಿಲು ಕುಣಿತ ಅಥವಾ ಆರಾಧನಾ ಪದ್ಧತಿಯು ಮೂರು ಹಗಲು ಮೂರು ರಾತ್ರಿ ನಡೆಯುತ್ತದೆ. ಈ ಆರಾಧನಾ ಪರಂಪರೆಯನ್ನು ಉಳಿಸಿಕೊಂಡು ಹೋಗುವ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಗೊಡ್ಡ ಹಾಗೂ ಮುಂಡಾಲ ಜನಾಂಗದವರು ತಮ್ಮ ಮಾತೃ ಭಾಷೆಯಾದ ತುಳುವನ್ನು ಬಳಸಿಕೊಂಡು ಈ ಪ್ರಕಾರದ ಆಚರಣೆ ಮಾಡುತ್ತಾರೆಯಾದರೂ ಈ ಕುಣಿತ ಪ್ರಕಾರ ತುಳುನಾಡನ್ನು ಹೊಯ್ಸಳರ ಕಾಲದಲ್ಲಿ ಎಂಬ ಉಲ್ಲೇಖಗಳು ದೊರೆಯುತ್ತದೆ. ಈ ಜನಾಂಗದವರು ದೇವಸ್ಥಾನಗಳಲ್ಲಿ ಸೇವೆ ಮಾಡುತ್ತಿದ್ದರು. ಕ್ರಮೇಣ ಯುದ್ಧ ಕೌಶಲಗಳನ್ನು ತಿಳಿದುಕೊಂಡರು ಎಂಬ ಮಾಹಿತಿಗಳು ದೊರೆಯುತ್ತದೆ. ಈ ಜನಾಂಗದ ಮೂಲ ಹಟ್ಟಿಯಂಗಡಿಯಲ್ಲಿದ್ದು ನಂತರದ ದಿನಗಳಲ್ಲಿ ಉಡುಪಿಯ ಕಾಪು, ಪಡುಬಿದ್ರೆ, ಪಾಂಗಳ ಪ್ರದೇಶಗಳಿಗೆ ಬಂದು ದೈವಾರಾಧನೆಯ ಕೆಲಸಗಳಲ್ಲಿ ಪಾಲು ಪಡೆಯತೊಡಗಿದರು. ಇದಕ್ಕೆ ಉದಾಹರಣೆಯಾಗಿ ಕಾಪು ಹಳೇ ಮಾರಿಗುಡಿಯ ಬಳಿ ಇರುವ ದೈವಸ್ಥಾನದಲ್ಲಿ ನಡೆಯುವ ಪಿಲಿಕೋಲ, ಗುಳಿಗ ಕೋಲ, ಬೆರ್ಮೆರು ಮುಂತಾದ ದೈವಗಳಿಗೆ ನಡೆಯುವ ಆರಾಧನೆಯಲ್ಲಿ ಇವರು ಯಜಮಾನರಾಗಿ ಇಂದಿಗೂ ಇರುವುದು ಸಾಕ್ಷಿಯಾಗಿ ಗೋಚರಿಸುತ್ತದೆ.
ಕಂಗಿಲು ಕುಣಿತದ ಪಾತ್ರಧಾರಿಗಳು ತಮ್ಮ ಉಡುಪು ಹಾಗೂ ತಲೆಯ ಮೇಲೆ ತೆಂಗಿನ ತಿರಿಯನ್ನು ಲಂಗದ ರೀತಿಯಲ್ಲಿ ಬಳಸುತ್ತಾರೆ. ಇಲ್ಲಿ ಅನಿಷ್ಟವನ್ನು ಹೊಡೆದೊಡಿಸಿ ಫಲವಂತಿಕೆಯನ್ನು ತಂದು ಕೊಡುವ ಆಶಯವೇ ಪ್ರಧಾನವಾದದ್ದು. ಕಂಗಿಲು ಕುಣಿತದ ಸಂದರ್ಭದಲ್ಲಿ ಡೋಲು ಮತ್ತು ಚಂಡೆಯನ್ನು ಬಳಸುವುದರಿಂದಾಗಿ ಅವುಗಳ ನಿನಾದಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತಾರೆ. ತುಳು ಭಾಷೆಯಲ್ಲಿ ಹಾಡನ್ನು ಹಾಡುತ್ತ ಕುಣಿಯುವ ಪರಿ ಬಹಳ ರಮಣೀಯವಾಗಿದೆ.
ಕಂಗಿಲು ಕುಣಿತದ ಕ್ರಮ
ಕಂಗಿಲು ಕುಣಿತ ಆರಂಭವಾಗುವ ಮೊದಲು ಮಾರಿ ಪೂಜೆ ನಡೆಯುತ್ತದೆ. ಆ ನಂತರದಲ್ಲಿ ಕಂಗಿಲು ವೇಷ ಹಾಕುವುದಕ್ಕೆಆರಂಭಿಸುತ್ತಾರೆ.ಈ ಕುಣಿತದಲ್ಲಿ 5 ರಿಂದ 14 ಮಂದಿ ಇರುತ್ತಾರೆ. ಏಳು ಮಂದಿ ಒಂದೇ ರೀತಿಯ ವೇಷವನ್ನು ಹಾಕುತ್ತಾರೆ. ಲುಂಗಿ ಉಟ್ಟು ಅಂಗಿ ತೊಟ್ಟುಕೊಳ್ಳುತ್ತಾರೆ. ಅದರ ಮೇಲೆ ಸೊಂಟ ಹಾಗೂ ಕುತ್ತಿಗೆಯ ಭಾಗಗಳಿಗೆ ತೆಂಗಿನತಿರಿ ಮುಖಕ್ಕೆ ಕಪ್ಪು ಬಣ್ಣ ಹಚ್ಚಿತೆಂಗಿನ ತಿರಿಯನ್ನು ತಲೆಯ ಮೇಲೆ ಜಾಲರಿಯಂತೆ ಇಳಿಯ ಬಿಡುತ್ತಾರೆ. ಕೆಲವು ಪ್ರದೇಶಗಳಲ್ಲಿ ವೇಷಭೂಷದಲ್ಲೂ ಸ್ವಲ್ಪ ಮಟ್ಟಿನ ಬದಲಾವಣೆಗಳಿರುವುದನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಕೆಲವು ಭಾಗಗಳಲ್ಲಿ ಮುಂಡಾಲು ಬಳಸಿದರೆ ಮತ್ತೆ ಕೆಲವು ಕಡೆ ಬರೀತಲೆಯನ್ನು ಬಿಟ್ಟಿರುತ್ತಾರೆ. ತಿರಿಯ ಬಳಕೆ ಸಾಮಾನ್ಯವಾಗಿ ಎಲ್ಲಾ ಭಾಗದಲ್ಲೂ ಇದೆ. ಮುಖ ಹಾಗೂ ತಲೆಯ ಭಾಗಕ್ಕೆ ಬಳಸುವ ವೇಷಭೂಷಣದಲ್ಲಿ ಮಾತ್ರ ಸ್ವಲ್ಪಮಟ್ಟಿನ ವ್ಯತ್ಯಾಸಗಳಿರುವುದನ್ನು ಗಮನಿಸಬಹುದು. ಕಲಾವಿದರು ಕುಣಿಯುವ ಸಂದರ್ಭದಲ್ಲಿ ವೃತ್ತಾಕಾರದಲ್ಲಿ ಕುಣಿಯುತ್ತಾರೆ. ಹಿಮ್ಮೇಳದಲ್ಲಿ ಹಾಡುವವರು, ಡೋಲು ಬಾರಿಸುವವರು, ತಾಸೆ, ಘಂಟಾಮಣಿ ಹೊಡೆಯುವವರು ಇರುತ್ತಾರೆ. ಕುಣಿತ ಆರಂಭವಾಗಬೇಕಾದರೆ ಒಬ್ಬ ಮುದುಕನ ವೇಷ ಅಥವಾ ಕೊರಗ ವೇಷ, ಸೊಂಟಕ್ಕೆ ಕಪ್ಪುಬಟ್ಟೆ, ಕೊರಳಿಗೆ ಹೂಮಾಲೆ, ತಲೆಗೆ ಮುಟ್ಟಾಳೆ, ಕಾಲಿಗೆ ಗೆಜ್ಜೆಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದು ನೆಲಕ್ಕೆ ಕುಟ್ಟಿಕೊಂಡು ಅಡ್ಡಾದಿಡ್ಡಿ ಕುಣಿಯುತ್ತಾ ಬರುತ್ತಾರೆ. ಹೀಗೆ ಕುಣಿಯುವ ಸಂದರ್ಭದಲ್ಲಿ ಕೂ ಕ್ಹೂ ಎಂಬುದಾಗಿ ಕೂಗುತ್ತಾರೆ.
ಒಟ್ಟಿನಲ್ಲಿ ಕಂಗಿಲು ಕುಣಿತ ತುಳುನಾಡಿನ ಜನಪದ ಆರಾಧನಾ ಕುಣಿತವಾಗಿ ಬಹಳ ಪ್ರಚಲಿತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೃಷಿ ಸಂಬಂಧಿಯಾದ ಈ ಕುಣಿತ ಹುಟ್ಟಿದ ರೀತಿ ತುಳುನಾಡಿನಲ್ಲಿ ಪಸರಿಸಿದ ರೀತಿಯ ಕುರಿತು ಹಾಡಿನಲ್ಲಿರುವುದನ್ನು ಕಾಣಲು ಸಾಧ್ಯ. ರೋಗರುಜಿನಗಳನ್ನು ಓಡಿಸುವ ಮೂಲಕ ಕೃಷಿ ಸಂಪತ್ತನ್ನು ಹೆಚ್ಚಿಸುವ ಆಶಯ ಈ ಕುಣಿತದಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
– ಡಾ. ಕಿಶೋರ್‌ಕುಮಾರ್ ರೈ, ಶೇಣಿ