ಲಿಂಗಣ್ಣಯ್ಯ ಗುಂಡಪ್ಪನವರು ಹಾಸನ ಜಿಲ್ಲೆಯ ಮತಿಗಟ್ಟ ಎಂಬಲ್ಲಿ 08 ಜನವರಿ 1903ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ಗುಂಡಪ್ಪನವರ ಮಾರ್ಗದರ್ಶಿಗಳೂ, ಗುರುಗಳೂ ಆದ್ದವರು ಬಿ.ಎಂ. ಶ್ರೀಕಂಠಯ್ಯನವರು. ಭಾಷಾಂತರ, ಗ್ರಂಥ ಸಂಪಾದನೆ, ಆಧುನಿಕ ಸಾಹಿತ್ಯಗಳಲ್ಲಿ ನಿರಂತರ ಕೆಲಸ ಮಾಡಿದ ಇವರು ಕನ್ನಡ ಭಾಷಾ ಸಂಸ್ಕೃತಿಗೆ ಅಮೋಘ ಕಾಣಿಕೆಗಳನ್ನು ನೀಡಿದ್ದಾರೆ. ಗುಂಡಪ್ಪನವರಿಗೆ ತಮಿಳಿನ ಮೇಲೆ ಪ್ರಭುತ್ವವಿದ್ದ ಕಾರಣ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ತಿರುಕ್ಕುರುಳ್’, ‘ಮಣಿಮೇಖಲೈ’, ‘ಶಿಲಪ್ಪದಿಕಾರಂ’, ‘ಅವ್ವೆಯಾರ್’, ‘ಪೆರಿಯ ಪುರಾಣಂ’, ‘ನಾಲ್ಮಡಿ ಕಡುಕು’, ‘ತಿರುವಾಚಕಂ’, ‘ಪೆರುಂಗದೈ’ ಮತ್ತು ‘ಉಳಗ ನೀತಿ’ಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಪ್ರಾಚೀನ ತಮಿಳು ಮಾತ್ರವಲ್ಲದೆ, ಸುಬ್ರಹ್ಮಣ್ಯ ಭಾರತಿಯವರ ಕವಿತೆಗಳ ಕನ್ನಡ ರೂಪವಾದ ‘ಭಾರತಿಯವರ ಕವಿತೆಗಳು’, ಮು. ವರದರಾಜನ್ ಅವರ ‘ತಮಿಳು ಸಾಹಿತ್ಯ ಚರಿತ್ರೆ’, ಯು. ಸ್ವಾಮಿನಾಥ ಅಯ್ಯರ್ ಅವರ ‘ನನ್ನ ಚರಿತ್ರೆ’ ಆಧುನಿಕ ತಮಿಳಿನ ಭಾಷಾಂತರಗಳು. ಕೌಂಟ್ ಲಿಯೋ ಟಾಲ್ ಸ್ಟಾಯ್ ಅವರ ಕಥೆಗಳ ಅನುವಾದಗಳು ಇಂದಿಗೂ ಜನಪ್ರಿಯವಾಗಿವೆ. ಇವುಗಳಲ್ಲದೇ ಸಂಸ್ಕೃತದಲ್ಲಿರುವ ಭಾಸನ ‘ಸ್ವಪ್ನ ವಾಸವದತ್ತ’ ಹಾಗೂ ಇನ್ನಿತರ ಏಕಾಂತ ನಾಟಕಗಳು ಕೂಡಾ ಗುಂಡಪ್ಪನವರಿಂದ ಕನ್ನಡಕ್ಕೆ ಬಂದಿವೆ. ಭಾಷಾಂತರದ ಕುರಿತಾದ ‘ಕನ್ನಡಿ ಸೇವೆ’ ಎಂಬ ಪುಸ್ತಕವನ್ನೂ ಬರೆದಿರುವುದು ಗಮನಾರ್ಹ. ‘ಆದಿಪುರಾಣ ಸಂಗ್ರಹ’ ಗುಂಡಪ್ಪನವರ ಬಹುದೊಡ್ಡ ಸಾಧನೆ.
ಅನುವಾದ ಮಾತ್ರವಲ್ಲದೆ ಸ್ವತಃ ಬರಹಗಾರರಾದ ಗುಂಡಪ್ಪನವರ ಸ್ವಂತ ಕೃತಿಗಳು – ‘ಚಟಾಕಿ ಮತ್ತು ಕವನಗಳು’, ‘ಪಂಪ ಪರಿಚಯ’, ‘ಥಾಮಸ್ ಅಲ್ವಾ ಎಡಿಸನ್’, ‘ಫ್ಲಾರೆನ್ಸ್ ನೈಟಿಂಗೇಲ್’ ಮತ್ತು ‘ಕನ್ನಡ ವ್ಯಾಕರಣ ಪಾಠಗಳು’. ಇವರಿಗೆ ಸಂದ ಪುರಸ್ಕಾರಗಳು ಹಲವು. ಮುಖ್ಯವಾದವು ಮೈಸೂರು ವಿಶ್ವವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣ ಪದಕ ಪ್ರಶಸ್ತಿ, ತಮಿಳು ಕನ್ನಡ ಬಾಂಧವ್ಯಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ, ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ. ಗುಂಡಪ್ಪ ಹಾಗೂ ಶ್ರೀಮತಿ ಶಾರದ ಈ ದಂಪತಿಗಳಿಗೆ ಏಳು ಮಂದಿ ಮಕ್ಕಳು. ಎಲ್.ಜಿ. ಸಹೋದರಿಯರೆಂದು ಖ್ಯಾತರಾದ ಇವರ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಕನ್ನಡ ಜಾನಪದ ಗೀತೆಗಳನ್ನು ಹಾಡಿ ಖ್ಯಾತಿಯನ್ನು ಪಡೆದಿದ್ದಾರೆ.
- ವಿಮರ್ಶಕರು ಮಾಧುರಿ ಶ್ರೀರಾಮ್
ಅಧ್ಯಾಪಕಿ