ಸಂಗೀತದ ಬಗ್ಗೆ ಅಗಾಧ ಪಾಂಡಿತ್ಯವುಳ್ಳ ಪಂಡಿತ್ ಆರ್. ಕೆ. ಬಿಜಾಪುರೆ ಇವರು ಸುಸಂಸ್ಕೃತ ಕುಟುಂಬದ ಸಂಗೀತಮಯ ವಾತಾವರಣವಿರುವ ಮನೆಯಿಂದ ಬಂದವರು. ಪ್ರಬುದ್ಧ ನಾಟಕಕಾರ ಮತ್ತು ಸಂಯೋಜಕ ಬೆಳಗಾವಿ ಜಿಲ್ಲೆಯ ಕಾಗ್ವಾಡದ ಕಲ್ಲೋಪಂತ್ ಬಿಜಾಪುರೆ ಮತ್ತು ಗೋದುಬಾಯಿ ದಂಪತಿಯ ಪುತ್ರ. ಪಂಡಿತ್ ಆರ್. ಕೆ. ಬಿಜಾಪುರೆ ಎಂದೇ ಪ್ರಸಿದ್ಧರಾಗಿರುವ ರಾಮ ಕಲ್ಲೋ ಬಿಜಾಪುರೆ ಇವರನ್ನು ‘ಪಂಡಿತ್ ರಾಮಭಾವು ಬಿಜಾಪುರೆ’ , ‘ಬಿಜಾಪುರೆ ಮಾಸ್ತರ್’ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರು, ಸಾಹಿತಿಗಳು, ಸಂಗೀತ ಆರಾಧಕರೂ ಆಗಿದ್ದ ತಂದೆ, ದಾಸರ ಪದ ಹಾಗೂ ಜಾನಪದ ಗೀತೆಗಳನ್ನು ಮಧುರ ಕಂಠದಿಂದ ಹಾಡುವ ತಾಯಿ ಮತ್ತು ಉತ್ತಮ ತಬಲವಾದಕ ದೊಡ್ಡಪ್ಪ ಇವರೆಲ್ಲರ ಸಂಗೀತ ಸಂಸ್ಕಾರದ ಪ್ರಭಾವ ಎಳವೆಯಲ್ಲಿಯೇ ಬಿಜಾಪುರೆಯವರ ಮೇಲೆ ಅತೀವ ಪ್ರಭಾವ ಬೀರಿತ್ತು.
ತಂದೆ ಕಲ್ಲೋಪಂತರಿಗೆ ಗೋಕಾಕ ತಾಲೂಕಿನ ಅಕ್ಕತಂಗೇರ ಹಾಳಕ್ಕೆ ವರ್ಗಾವಣೆಯಾದಾಗ ಬಿಜಾಪುರೆಯವರ ಸಂಗೀತದ ಕಲಿಕೆಗೆ ಅನುಕೂಲವೇ ಆಯ್ತು. ಕಲ್ಲೋಪಂತರ ನಾಟಕಗಳಿಗೆ ಸಂಗೀತ ರಚನೆ ಮಾಡಿದ ನಾಟಕದ ಮಾಸ್ಟರ್ ಅಣ್ಣಿಗೇರಿ ಮಲ್ಲಯ್ಯನವರು ಸಂಗೀತ ಪಾಠಕ್ಕಾಗಿ ಕಲ್ಲೋಪಂತರ ಮನೆಯಲ್ಲಿ ನಾಲ್ಕು ತಿಂಗಳು ಉಳಿದುಕೊಂಡರು. ಹೇಳಿದ್ದನ್ನು ಕೂಡಲೇ ಗ್ರಹಿಸುತ್ತಿದ್ದ ಶಿಷ್ಯನ ಕೌಶಲ್ಯ ಕಂಡು ಅತ್ಯಂತ ಉತ್ಸಾಹದಿಂದ ಹಾರ್ಮೋನಿಯಂ ಪಾಠ ಕಲಿಸಿದ ಮಲ್ಲಯ್ಯನವರು ತಮ್ಮೂರಿಗೆ ಹೊರಟ ನಂತರ ಕಲ್ಲೋ ಪಂತರೇ ಗುರುಗಳ ಸ್ಥಾನದಲ್ಲಿ ನಿಂತು ಮಗನಿಗೆ ಸಂಗೀತ ಪಾಠ ಮಾಡಿದರು. ಪತ್ನಿಯ ವಿಯೋಗದ ನಂತರ 1929ರಲ್ಲಿ ಮಗನ ಭವಿಷ್ಯದ ದೃಷ್ಟಿಯಿಂದ ವರ್ಗಾವಣೆ ಮಾಡಿಸಿಕೊಂಡು ಸಂಗೀತ ಕ್ಷೇತ್ರದ ದಿಗ್ಗಜರುಗಳಿರುವ, ಸಂಗೀತದ ಪ್ರಮುಖ ಕೇಂದ್ರವಾಗಿದ್ದ ಬೆಳಗಾವಿಗೆ ಬಂದರು.
ಬಿಜಾಪುರೆಯವರು ಕಾಗಲಕರ ಬುವಾರಲ್ಲಿ ಆರಂಭದ ಹಾಡುಗಾರಿಕೆ ಪಾಠದ ನಂತರ, ಎಂಟು ವರ್ಷಗಳವರೆಗೆ ಪಂಡಿತ್ ರಾಜವಾಡೆಯವರಲ್ಲಿ ಸಂಗೀತ ಮತ್ತು ಪಂಡಿತ್ ಗೋವಿಂದ ಗಾಯಕವಾಡೆಯವರಲ್ಲಿ ಹಾರ್ಮೋನಿಯಂ ಅಭ್ಯಾಸ ಮಾಡಿದರು. ಹದಿಹರೆಯಕ್ಕೆ ಕಾಲಿಡುವ ಸಮಯದಲ್ಲಿ ಸ್ವರ ಗಡುಸಾಗಿ ಮೊದಲಿನ ಇಂಪು ಇಲ್ಲವಾದಾಗ ಹಾಡುಗಾರಿಕೆ ಬಿಟ್ಟು, ಹಾರ್ಮೋನಿಯಂ ಕಡೆಗೆ ಹೆಚ್ಚು ಗಮನವಿರಿಸಿದರು. ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಸಂಗೀತದ ಜ್ಞಾನವನ್ನು ಹಂಚಿದ ಬಿಜಾಪುರೆಯವರು ಸಂಗೀತಕ್ಕೆ ಸಹವಾದಕರಾಗಿ ಮಾತ್ರವಲ್ಲದೆ, ಗುರುವಾಗಿ ಸಾವಿರಾರು ಪ್ರಬುದ್ಧ ಶಿಷ್ಯರನ್ನು ಸಂಗೀತ ಲೋಕಕ್ಕೆ ನೀಡಿದ್ದಾರೆ. ಸುಧಾಂಶು ಕುಲಕರ್ಣಿ, ರವೀಂದ್ರ ಮಾನೆ, ಶ್ರೀಧರ ಕುಲಕರ್ಣಿ, ಮಧುಲಿಭಾವೆ, ದೀಪಕ್ ಮರಾಠೆ, ಮಹೇಶ್ ತೆಲಂಗ್, ಇವರೆಲ್ಲರೂ ಬಿಜಾಪುರೆಯವರ ಗರಡಿಯಲ್ಲಿ ಪಳಗಿದ ಸಂಗೀತಲೋಕದ ಅನಘ್ಯರತ್ನಗಳು.
ಸುಮಾರು 1934 – 35ನೇ ಇಸವಿಯ ಕಾಲಘಟ್ಟದಲ್ಲಿ ಬೆಳಗಾವಿಯ ಪೋಸ್ಟ್ ಮಾಸ್ಟರ್ ರ ಒತ್ತಾಯದ ಮೇರೆಗೆ ಸಂಗೀತ ಕಲಿಯುವ ಆಸಕ್ತಿ ಹೊಂದಿದ್ದ ಅವರ ಧರ್ಮಪತ್ನಿಗೆ ಮನೆಯಲ್ಲಿಯೇ ಹಾರ್ಮೋನಿಯಂ ಪಾಠ ಮಾಡಿದರು. ಅಲ್ಲಿಂದ ಆರಂಭವಾದ ಸಂಗೀತ ಪಾಠದ ಪಯಣದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಸೈಕಲ್ ನಲ್ಲಿ ಹೋಗಿ ಪಾಠ ಮಾಡುತ್ತಿದ್ದ ಪ್ರಾಮಾಣಿಕ ಪ್ರತಿಭಾವಂತರು ಬಿಜಾಪುರೆ.
ಬಿಜಾಪುರೆಯವರು 1938 ರಲ್ಲಿ ಸ್ಥಾಪಿಸಿದ “ಶ್ರೀ ರಾಮ ಸಂಗೀತ ವಿದ್ಯಾಲಯವು 1991ರಲ್ಲಿ ಸುವರ್ಣ ಮಹೋತ್ಸವನ್ನು ಕಂಡಿತು. ಈ ಸಂಗೀತ ವಿದ್ಯಾಲಯದ ಮೂಲಕ ಅನೇಕ ಅಂಧ ಮತ್ತು ಅಂಗವಿಕಲರಿಗೆ ಉಚಿತ ಸಂಗೀತ ಶಿಕ್ಷಣ ನೀಡಿದ ಹೆಗ್ಗಳಿಕೆ ಇವರದು. ಕರ್ನಾಟಕ ಸರಕಾರದ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ, ಪ್ರಾಥಮಿಕ ಶಾಲೆಗೆ ಸಂಬಂಧಪಟ್ಟಂತೆ “ಪ್ರಾಥಮಿಕ ಶಾಲಾ ಸಂಗೀತ ಶಿಕ್ಷಕ” ಎಂಬ ಸಂಗೀತ ಪಠ್ಯಪುಸ್ತಕವನ್ನು ರಚಿಸಿ ಆ ಕ್ಷೇತ್ರಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಪ್ರತಿಭಾನ್ವಿತ.
ರಾಮಭಾವು ಬಿಜಾಪುರೆಯವರ ವೃತ್ತಿ ಜೀವನ ಒಂದು ವಿಶೇಷವಾದ ಶುಭ ಗಳಿಗೆಯಲ್ಲಿ ಆರಂಭವಾಯಿತು. ಶ್ರೇಷ್ಠ ಸಂಗೀತಗಾರರಾದ ರಾಮಕೃಷ್ಣ ಬುವಾವಝೆಯವರಿಗೆ ಗುರ್ಲ ಹೊಸೂರಿನ ಚಿದಂಬರೇಶ್ವರ ಸಾನಿಧ್ಯದಲ್ಲಿ ಉತ್ಸವದ ಸಂದರ್ಭ ಒಂದು ವಾರದ ಕಾಲ ಸಂಗೀತ ಸೇವೆ ನೀಡುವಂತೆ ಆಹ್ವಾನ ಬಂದಿತು. ಅವರಿಗೆ ಸಹಕಲಾವಿದರಾಗಿ ಹಾರ್ಮೋನಿಯಂ ನುಡಿಸುವ ಅವಕಾಶ ರಾಮಭಾವು ಅವರಿಗೆ ದೊರೆತಿತ್ತು. ಒಂದು ವಾರದ ಕಾರ್ಯಕ್ರಮದ ನಂತರ ಅಲ್ಲಿನ ವ್ಯವಸ್ಥಾಪಕರು ರೂಪಾಯಿ 21ನ್ನು ಸಂಭಾವನೆಯ ರೂಪದಲ್ಲಿ ಇವರಿಗೆ ನೀಡಿದರು. ದೇವರ ಸನ್ನಿಧಿಯಲ್ಲಿ ದೊರೆತ ಪ್ರಸಾದ ರೂಪದ ಮೊದಲ ಸಂಭಾವನೆಯನ್ನು ಆರ್. ಕೆ. ಬಿಜಾಪುರೆಯವರು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ಸಂಗೀತ ಕ್ಷೇತ್ರದ ಘಟಾನುಘಟಿಗಳಿಗೆ ನೆಚ್ಚಿನ ಹಾರ್ಮೋನಿಯಂ ಸಹ ಕಲಾವಿದರಾಗಿ ಪಾಲ್ಗೊಂಡ ಹೆಮ್ಮೆ ಈ ಕಲಾರಾಧಕನದು.
ಕರ್ನಾಟಕ ವಿಶ್ವವಿದ್ಯಾನಿಲಯದ ಸಂಗೀತ ಅಧ್ಯಾಪಕರೂ ಮತ್ತು ಪ್ರಸಿದ್ಧ ರುದ್ರ ವೀಣಾ ವಾದಕರೂ ಆದ ಡಾ. ಬಿಂದು ಮಾಧವರಾವ್ ಪಾಠಕ್ ಇವರು ಆರ್ .ಕೆ. ಬಿಜಾಪುರೆಯವರ ಬಗ್ಗೆ ಹೇಳಿದ ಮೆಚ್ಚುಗೆಯ ಮಾತುಗಳು ಹೀಗಿವೆ. “ನಿರ್ಜೀವವಾದ ಕಟ್ಟಿಗೆಯ ಪೆಟ್ಟಿಗೆಯಿಂದ ಉಜ್ವಲವಾದ ಸ್ವರಗಳನ್ನು ಹೊಮ್ಮಿಸಿ ಶ್ರೋತೃಗಳನ್ನು ಗಂಧರ್ವ ಲೋಕಕ್ಕೆ ಒಯ್ಯಬಲ್ಲ ಮಾಂತ್ರಿಕ ಪಂಡಿತ್ ಆರ್ .ಕೆ. ಬಿಜಾಪುರೆ.” ಈ ಮಾತುಗಳಿಂದ ರಾಮಭಾವು ಬಿಜಾಪುರೆಯವರ ಪಾಂಡಿತ್ಯವೇನೆಂಬುದು ನಮ್ಮ ಅರಿವಿಗೆ ಬರುತ್ತದೆ.
ಇವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ 1982ರಲ್ಲಿ “ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ”, 1985ರಲ್ಲಿ “ಕರ್ನಾಟಕ ಕಲಾ ತಿಲಕ”, 2001ರಲ್ಲಿ “ಸಂಗೀತ ವಿದ್ವಾನ್ ಗೌರವ” ಹಾಗೂ “ರಾಷ್ಟ್ರಮಟ್ಟದ ಟಿ. ಚೌಡಯ್ಯ ಪ್ರಶಸ್ತಿ” ಮಾತ್ರವಲ್ಲ ಹಲವಾರು ಗೌರವ ಸನ್ಮಾನಗಳು ಇವರಿಗೆ ಸಂದಿವೆ.
ಕಲಾ ಲೋಕದ ನಭದಲ್ಲಿ ಧ್ರುವತಾರೆಯಂತೆ ಮಿನುಗುತ್ತಿದ್ದ ಒಬ್ಬ ಮೇರು ಕಲಾವಿದ ಪಂಡಿತ್ ಆರ್. ಕೆ. ಬಿಜಾಪುರೆಯವರು ಸಾವಿರಾರು ಮಂದಿ ವಿದ್ವಾಂಸರನ್ನು ಶಿಷ್ಯ ರೂಪದಲ್ಲಿ ನೀಡಿ, ದಿನಾಂಕ 19 ನವಂಬರ್ 2010 ರಲ್ಲಿ ಕಲಾ ಸರಸ್ವತಿಯಲ್ಲಿ ಐಕ್ಯರಾದರು. ಈ ಮಹಾನ್ ಚೇತನಕ್ಕೆ ಅನಂತ ವಂದನೆಗಳು