ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆ ಬಹಳ ಮುಖ್ಯವಾದದ್ದು. ಇದುವರೆಗೂ 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಷತ್ತು ಪ್ರಕಟಿಸಿದ್ದು, ಅದು ಒಂದು ರೀತಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಪರಿಷತ್ತು ಪ್ರಕಟಿಸುವ ಪುಸ್ತಕಗಳು ಎಂದರೆ ಹೂರಣ ಮತ್ತು ಮುದ್ರಣಗಳೆರಡರೆಲ್ಲಿಯೂ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದು, ಕನ್ನಡಿಗರಿಗೆ ಈ ಕೃತಿಗಳನ್ನು ತಲುಪಿಸುವ ಉದ್ದೇಶದಿಂದ ವರ್ಷದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡ ರಾಜ್ಯೋತ್ಸವಗಳ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಕಾಲ ವಿಶೇಷ ರಿಯಾಯತಿ ಮಾರಾಟವನ್ನು ಕನ್ನಡ ಸಾಹಿತ್ಯ ಪರಿಷತ್ತು ಅದಮ್ಯ ಪುಸ್ತಕ ಪ್ರೇಮಿ ಗಳಗನಾಥರ ಹೆಸರಿನ ತನ್ನ ‘ಪುಸ್ತಕ ಮಳಿಗೆ’ಯಲ್ಲಿ ಏರ್ಪಡಿಸುತ್ತದೆ.
ಅದರಂತೆ 76ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ 2025ರ ಜನವರಿ ತಿಂಗಳಿಡೀ ‘ವಿಶೇಷ ರಿಯಾಯತಿ ಮಾರಾಟ’ವನ್ನು ನಡೆಸಲಿದ್ದು ಶೇ.10ರಿಂದ ಶೇ 75ರವರೆಗೆ ವಿಶೇಷ ರಿಯಾಯಿತಿಯನ್ನು ಪರಿಷತ್ತಿನ ಪ್ರಕಟಣೆಗಳ ಮೇಲೆ ಈ ಸಂದರ್ಭದಲ್ಲಿ ನೀಡಲಾಗುವುದು. ಪರಿಷತ್ತಿನ ಕಾರ್ಯ ನಿರ್ವಹಣೆಯ ದಿನಗಳಲ್ಲಿ ಈ ವಿಶೇಷ ರಿಯಾಯಿತಿಯನ್ನು ಪಡೆಯಬಹುದು ಹಾಗೂ ಕನ್ನಡಿಗರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ವಿನಂತಿಸಿಕೊಂಡಿದ್ದಾರೆ.