ಮಂಗಳೂರು : ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 15 ಜನವರಿ 2026ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.


ಈ ಸಮಾರಂಭದಲ್ಲಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಸಾಹಿತಿ ಕೆ. ಶರೀಫಾ ಇವರು ಮಾತನಾಡಿ “ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಸದಾ ಮುಂಚೂಣಿಯಲ್ಲಿರುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ, ಎನ್‌ಆರ್‌ಸಿ- ಸಿಎಎ ವಿರುದ್ಧದ ಹೋರಾಟದಲ್ಲೂ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲೂ ಹಲವು ಪ್ರಥಮಗಳನ್ನು ಸ್ಥಾಪಿಸಿದ್ದಾರೆ. ಮುಸ್ಲಿಂ ಮಹಿಳೆ ಮನೆಯಿಂದ ಹೊರ ಬರಲು ಅವಕಾಶಗಳೇ ಕಡಿಮೆ ಇದ್ದ ಸಂದರ್ಭದಲ್ಲೂ ಮಹಿಳೆಯ ನೇತೃತ್ವದಲ್ಲಿ, ಅನುಪಮ ಮಾಸಿಕ 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ. ಪತ್ರಿಕೆಯು ನೈತಿಕತೆಯನ್ನು ಅನುಸರಿಸಿಕೊಂಡು ಅಕ್ಷರದ ಬಳಕೆಯ ಗೌರವ ಉಳಿಸಿಕೊಂಡು ಬರುತ್ತಿದೆ” ಎಂದು ಹೇಳಿದರು.
ವಕೀಲರಾದ ರೋಹಿಣಿ ಸಾಲ್ಯಾನ್ “ಮಹಿಳೆಯರಲ್ಲಿ ಅದ್ಭುತ ಶಕ್ತಿ ಇದೆ. 25 ವರ್ಷಗಳ ಕಾಲ ಮಹಿಳೆಯೊಬ್ಬರು ‘ಅನುಪಮ’ ಪತ್ರಿಕೆ ನಡೆಸಿದ್ದು ಸಣ್ಣ ವಿಚಾರವಲ್ಲ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಸಿಪಿ ನಜ್ಮಾ ಫಾರೂಕಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಬೆಥನಿ ಸೇಂಟ್ ತೆರೆಸಾ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಲೂರ್ಡ್ಸ್, ಆಪ್ತ ಸಮಾಲೋಚಕಿ ಡಾ. ರುಕ್ಸಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ., ಓದುಗರಾದ ಆಯಿಶಾ ಇ. ಶಾಫಿ ಇವರನ್ನು ಸನ್ಮಾನಿಸಲಾಯಿತು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಶಾನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೆಯ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಬಾಲಕೃಷ್ಣ, ಅನುಪಮಾ ಬಳಗದ ಸಾಜಿದಾ ಮುಮಿನ್, ಶಹೀದಾ ಉಮರ್, ಕುಲ್ಸುಮ್ ಅಬೂಬಕರ್ ವೇದಿಕೆಯಲ್ಲಿ ಭಾಗವಹಿಸಿದ್ದರು. ಓದುಗರ ಪರವಾಗಿ ವೈ.ಎಫ್. ಕಳವಡ, ಸಿಹಾನ ಬಿ.ಎಂ., ಶಮೀಮಾ ಕುತ್ತಾರ್, ಸುಖಾಲಾಕ್ಷಿ ಅನಿಸಿಕೆ ಹಂಚಿಕೊಂಡರು. ಉಪ ಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿ, ಸಮೀನಾ ಉಪ್ಪಿನಂಗಡಿ ವಂದಿಸಿ, ಅಸ್ಮತ್ ವಗ್ಗ, ಲುಬ್ನಾ ಝಕಿಯ್ಶ ಕಾರ್ಯಕ್ರಮ ನಿರೂಪಿಸಿದರು.


