ಗಾಂಜಾಂ ತಿಮ್ಮಣ್ಣಯ್ಯ ಮತ್ತು ಸುಬ್ಬಮ್ಮ ದಂಪತಿಯ ದ್ವಿತೀಯ ಪುತ್ರ ಪ್ರೊ. ವೆಂಕಟಸುಬ್ಬಯ್ಯ. ಇವರು ಜನಿಸಿದ್ದು ದಿನಾಂಕ 23 ಆಗಸ್ಟ್ 1913 ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ಇವರ ಹಿರಿಯರು ನೆಲೆಸಿದ್ದು ಮುದಗುಂದೂರಿನಲ್ಲಿ. ಪೌರೋಹಿತ್ಯ ಕಾರ್ಯಗಳನ್ನು ಮಾಡಿಕೊಂಡು ಕಷ್ಟದಲ್ಲಿ ಸರಳ ಜೀವನ ನಿರ್ವಹಣೆ ಮಾಡುತ್ತಿದ್ದ ಇವರ ಹಿರಿಯರು ಮೈಸೂರು ರಾಜ್ಯದಲ್ಲಿ ಕ್ಷಾಮ ತಲೆದೋರಿದಾಗ ಜೀವನ ನಿರ್ವಹಣೆ ಕಷ್ಟವಾಗಿ ಶ್ರೀರಂಗಪಟ್ಟಣದ ಉಪನಗರವಾದ ಪುಟ್ಟ ಕುಗ್ರಾಮ ‘ಗಾಂಜಾಂ’ನಲ್ಲಿ ನೆಲೆಸಿದರು. ತಂದೆ ಗಾಂಜಾಂ ತಿಮ್ಮಣ್ಣಯ್ಯ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾಂಸರಾಗಿದ್ದು, ಮೈಸೂರು ಅರಮನೆಯಲ್ಲಿ ಗೌರವದ ಸ್ಥಾನವನ್ನು ಪಡೆದಿದ್ದರು.
1937ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪ್ರಥಮ ಸ್ಥಾನವನ್ನು ಸುವರ್ಣ ಪದಕದೊಂದಿಗೆ ಪಡೆದು ತೇರ್ಗಡೆ ಹೊಂದಿದರು. ಮುಂದೆ ಬಿ.ಟಿ. ಪದವಿಯನ್ನು ಪಡೆದ ಇವರು 1939ರಲ್ಲಿ ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿ 40 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಅದಾಗಲೇ 1937ರಲ್ಲಿ ಲಕ್ಷ್ಮೀಯವರನ್ನು ಬಾಳ ಸಂಗಾತಿಯನ್ನಾಗಿ ಪಡೆದುಕೊಂಡಿದ್ದರು. ಮಂಡ್ಯದ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಬೆಂಗಳೂರಿನ ಬೆಂಗಳೂರು ಹೈಸ್ಕೂಲಿನ ಶಿಕ್ಷಕರಾಗಿ ಮುಂದೆ ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ಈ ಮಧ್ಯೆ ಬೆಂಗಳೂರಿನ ವಿಶ್ವೇಶ್ವರಪುರದಲ್ಲಿ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ಹಾಸ್ಟೆಲ್ ಇದರ ವಾರ್ಡನ್ ಆಗಿ ಕಾರ್ಯ ನಿರ್ವಹಿಸುವುದರೊಂದಿಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದರು. ‘ಜಯರಾಮ ಸೇವಾ ಮಂಡಳಿ’ ಎಂಬ ಸಾರ್ವಜನಿಕ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ವೆಂಕಟಸುಬ್ಬಯ್ಯನವರ 60 ಹಾಗೂ 90ನೇ ವರ್ಷಗಳ ಶುಭ ಸಂದರ್ಭದಲ್ಲಿ ಗೌರವ ಸಮಾರಂಭಗಳು ನಡೆದವು.
ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯದ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ತಜ್ಞರಾದ ಇವರು ಪ್ರಜಾವಾಣಿಯ ‘ಇಗೋ ಕನ್ನಡ’ ಎಂಬ ಅಂಕಣ ಬರಹಗಳ ಮೂಲಕ ಕನ್ನಡ ಭಾಷೆಯ ಪದಗಳನ್ನು ಓದುಗರಿಗೆ ನೀಡಿ, ಮೋಡಿ ಮಾಡಿದವರು. ಬೆಂಗಳೂರಿನಲ್ಲಿ ನಡೆದ 77ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವ ಪಡೆದ ಹೆಗ್ಗಳಿಕೆ ವೆಂಕಟಸುಬ್ಬಯ್ಯನವರದು. 1993-94ರ ಸಮಯದಲ್ಲಿ ವೆಂಕಟ ಸುಬ್ಬಯ್ಯನವರ ಆಧುನಿಕ ಕನ್ನಡದ ‘ಪ್ರಥಮ ನಿಘಂಟು’ ಲೋಕಾರ್ಪಣೆಗೊಂಡಿತು. ಎಂಟಕ್ಕೂ ಹೆಚ್ಚು ನಿಘಂಟುಗಳನ್ನು ಸಂಪಾದಿಸಿದ ಖ್ಯಾತಿ ಇವರದು.
ಇವರು ವಿಮರ್ಶೆ, ಮಕ್ಕಳ ಸಾಹಿತ್ಯ ಅನುವಾದ ಮತ್ತು ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೃತಿ ರಚನೆ ಮಾಡಿದವರು. ಪದ್ಮಶ್ರೀ ಪ್ರಶಸ್ತಿ, ಭಾಷಾ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆಗಾಗಿ 2005ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ‘ನಾಡೋಜ ಪ್ರಶಸ್ತಿ’, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವ, ಸನ್ಮಾನಗಳು ಇವರಿಗೆ ಸಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸನ್ಮಾನ ಪುರಸ್ಕಾರ, ಬೀದರಿನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ 77ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವುಗಳಲ್ಲಿ ಮುಖ್ಯವಾದವುಗಳು.
ಕನ್ನಡ ಸಾರಸ್ವತ ಲೋಕದಲ್ಲಿ ಜಿ.ವಿ. ಎಂದೇ ಪ್ರಖ್ಯಾತರಾದ ಪ್ರೊ. ಗಾಂಜಾಂ ವೆಂಕಟಸುಬ್ಬಯ್ಯನವರು ತಮ್ಮ ಅನುಪಮ ಸಾಹಿತ್ಯ ಸೇವೆಯ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ 108 ವರ್ಷಗಳ ತುಂಬು ಜೀವನ ನಡೆಸಿ 2021 ಏಪ್ರಿಲ್ 18ರಂದು ಇಹವನ್ನು ತ್ಯಜಿಸಿದರು. ಇಂದು ಅವರ ಜನ್ಮದಿನ. ದೇಶ ಭಾಷೆಯ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಸ್ಮರಿಸುತ್ತಾ, ಅಗಲಿದ ಆತ್ಮಕ್ಕೆ ಅನಂತ ನಮನಗಳು.
• ಅಕ್ಷರೀ