ಬೆಂಗಳೂರು : ವಿಧಾನ ಸೌಧದ ಆವರಣದಲ್ಲಿ ಏರ್ಪಾಡಿಸಿದ್ದ ಪುಸ್ತಕ ಮೇಳದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು’ ಎನ್ನುವ ಸಂವಾದ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ “ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ನೋಡಿದರೆ ನಮಗೆ ಕಾಣಿಸುವುದು ಸಾಮರಸ್ಯದ ಭಾವ. ವಿವಿಧ ಧರ್ಮಗಳ ಅನೋನ್ಯ ಸಂಪರ್ಕ. ಸಮಭಾವ ಮತ್ತು ಮನುಷ್ಯ ಜಾತಿ ತಾನೊಂದೆ ಎನ್ನುವ ಐಕ್ಯತೆಯ ದೃಷ್ಟಿ ಇಲ್ಲಿದೆ. ಬೂಕರ್ ಪ್ರಶಸ್ತಿಯ ಪ್ರಧಾನ ಸುತ್ತಿಗೆ ಬಾನುಮುಷ್ತಾಕ್ ಅವರ ಕೃತಿ ಪ್ರವೇಶಿಸಿರುವುದು ಹೆಮ್ಮೆ ಕನ್ನಡಿಗರಿಗೆ ಹೆಮ್ಮೆ. ರಂಜಾನ್ ನ ಪವಿತ್ರ ತಿಂಗಳಿನಲ್ಲಿ ಅವರಿಂದ ಕನ್ನಡಕ್ಕೆ ಶುಭ ಸುದ್ದಿ ದೊರಕಲಿ. ‘ಸಾಮರಸ್ಯದ ಭಾವ ಕನ್ನಡದ ಜೀವ’ ಎನ್ನುವುದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿಯೇ ಅಳವಡಿಕೆಯಾಗಿತ್ತು. ಪಂಪನು ಕನ್ನಡದ ಆದಿಕವಿ. ಸಮಾನತೆಯ ಭಾವವು ಅವನ ಕಾವ್ಯದಲ್ಲಿಯೇ ಆರಂಭವಾಯಿತು. ಇದು ವೃಕ್ಷದಂತೆ ಇಡೀ ಕನ್ನಡ ಸಾಹಿತ್ಯ ಪರಂಪರೆಯನ್ನು ಪ್ರಭಾವಿಸಿತು. ಕರ್ಣನ ಬಾಯಲ್ಲಂತೂ ಪಂಪ ಕುಲದ ಹೆಗ್ಗಳಿಕೆಯನ್ನು ಜಾಡಿಸಿದ್ದಾನೆ. ʼಕುಲಂ ಕುಲಂ ಅಲ್ತು ಚಲಂ ಕುಲಂʼ ಎಂದು ಖಚಿತವಾಗಿ ಹೇಳುತ್ತಾನೆ. ಶ್ರೀ ಕೃಷ್ಣ ಸರ್ವರಲ್ಲಿ ಸಮಾನತೆಯನ್ನು ಸಾರುವ ಧೀರೋದಾತ್ತ ಮೂರ್ತಿ. ʼಪಂಪನು ಕೇವಲ ಕವಿ ಮಾತ್ರವಲ್ಲ ಸಮಾನತೆಯ ಸಂದೇಶವನ್ನು ಸಾರಿದ ರಾಷ್ಟ್ರೀಯ ಪುರುಷʼ ಎಂದು ಮುಳಿಯ ತಿಮ್ಮಪ್ಪಯ್ಯನವರು ಹೇಳಿದ ಮಾತು ಇಲ್ಲಿ ಗಮನಾರ್ಹವಾಗಿದೆ. ಕನ್ನಡ ಸಾಹಿತ್ಯದಲ್ಲಿ ಸಮನತೆಯ ಮೇರು ಶಿಖರಗಳೆಂದರೆ ವಚನಗಳು. ʼಇವರು ನಮ್ಮ ನಾಡಿನ ರಸಋಷಿಗಳು, ಅವರ ಚಿಂತನೆಗಳ ಸಾಹಿತ್ಯ ದರ್ಶನವೇ ವಚನಗಳುʼ ಎಂದು ತಮ್ಮ ʼವಚನ ಧರ್ಮಸಾರʼದಲ್ಲಿ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ. ವಚನಗಳಲ್ಲಿ ನಾವು ಅಂತರಂಗದ ನಿರೀಕ್ಷೆಯ ಜೊತೆಗೆ ಸಮಾಜದ ಡೊಂಕುಗಳನ್ನು ತಿದ್ದುವ ಮನೋಭಾವವನ್ನೂ ಕಾಣ ಬಹುದು. ಸಮಾನತೆಯ ನೀತಿಗಳು ವಚನಗಳಲ್ಲಿ ಮತ್ತೆ ಮತ್ತೆ ಕಾಣಿಸುತ್ತವೆ. ಇಡೀ ಪರಂಪರೆಯೇ ಸಮಾನತೆಯ ಕನಸನ್ನು ಕಂಡು ಬಹುದೊಡ್ಡ ಹೆದ್ದಾರಿಯನ್ನು ಕನ್ನಡ ಸಾಹಿತ್ಯಕ್ಕೆ ನಿರ್ಮಿಸಿತು. ದಾಸ ವಾಜ್ಞಯವು ಹಾಡಿನ ರೂಪದಲ್ಲಿ ಸಮಾನತೆಯ ಭಾವವನ್ನು ಜನರಿಗೆ ತಲುಪಿಸಿತು. ಅನೇಕ ಪುರಾಣದ ಕಥೆಗಳ ಮೂಲಕವೇ ಬದುಕಿನ ಸತ್ಯವನ್ನು ಇಲ್ಲಿ ವಿವರಿಸಲಾಯಿತು. ಸಮಾಜ ಬೋಧನೆ ಪುರುಂದರ ದಾಸರ ಕೀರ್ತನೆಗಳಲ್ಲಿ ಮುಖ್ಯವಾದ ಸಂಗತಿ. ‘ಕುಲದ ಮೇಲೆ ಹೋಗ ಬೇಡ ಕುಲವಿಲ್ಲ ಜ್ಞಾನಿಗೆʼ ಎಂದು ಅವರು ಖಚಿತವಾಗಿ ನುಡಿದಿದ್ದಾರೆ. ಕನಕದಾಸರು ಕೇವಲ ಕೀರ್ತನೆಕಾರರು ಮಾತ್ರವಲ್ಲ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆಯಂತಹ ಕಾವ್ಯಗಳನ್ನೂ ಬರೆದವರು ಹರಿಹರ ಬೇಧವ ಅಳಿಸುವಂತೆ ಖಚಿತ ನಿಲುವನ್ನು ತಳೆದವರು” ಎಂದರು.ಬಾನು ಮುಷ್ತಾಕ್ ಮತ್ತು ಡಾ.ಡಿ.ಡೊಮೆನಿಕ್ ಅವರ ಜೊತೆಗೆ ಸಹಭಾಷಣಕಾರರಾಗಿದ್ದರು.
Subscribe to Updates
Get the latest creative news from FooBar about art, design and business.
ವಿಧಾನಸೌಧದ ಪುಸ್ತಕ ಮೇಳದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು’ ವಿಷಯದ ಸಂವಾದ
No Comments2 Mins Read
Previous Articleಕವಿ ಸಾಹಿತಿಗಳ ಪರಿಚಯ ಮಾಲಿಕೆ 49 | ಡಾ. ಮುಲ್ಲೇಂಗಡ ರೇವತಿ ಪೂವಯ್ಯ