ಬೆಂಗಳೂರು : ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75ರ ಸಂಭ್ರಮ ಸಮಿತಿ ಇದರ ವತಿಯಿಂದ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇದರ ಸಹಯೋಗದೊಂದಿಗೆ ‘ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75′ ಅಭಿನಂದನೆ ಸಮಾರಂಭವನ್ನು ದಿನಾಂಕ 08 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರು ಕುಮಾರಪಾರ್ಕ್ ಪೂರ್ವ, ಗಾಂಧಿಭವನ, 2ನೆಯ ಮಹಡಿ, ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಕವಿಗಳಾದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಇವರ ಅಧ್ಯಕ್ಷತೆಯಲ್ಲಿ ಸಂಶೋಧಕ ಹಾಗೂ ಸಂಸ್ಕೃತಿ ಚಿಂತಕರಾದ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಅಮೃತ ಕಥಾನಕ’ ಅಭಿನಂದನಾ ಗ್ರಂಥವನ್ನು ಪ್ರಸಿದ್ಧ ಸಾಹಿತಿ ಮತ್ತು ಸಂಸ್ಕೃತಿ ಚಿಂತಕರಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಇವರು, ‘ಸ್ನೇಹಮೇರು’ ಸ್ಮರಣ ಸಂಚಿಕೆಯನ್ನು ಕರ್ನಾಟಕ ಗಾಂಧಿ ಸ್ಮಾರಕನಿಧಿ ಇದರ ಅಧ್ಯಕ್ಷರಾದ ನಾಡೋಜ ಡಾ. ವೊಡೇ ಪಿ. ಕೃಷ್ಣ ಇವರು ಹಾಗೂ ‘ತೋರಿದ ದಾರಿ’ ಸಾಕ್ಷ್ಯಚಿತ್ರವನ್ನು ವಿದ್ವಾಂಸರು ಹಾಗೂ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಇವರು ಬಿಡುಗಡೆಗೊಳಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ಜನಪದ ಗೀತ ಗಾಯನ ನಡೆಯಲಿದೆ.