ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಇದರ ವತಿಯಿಂದ ಕವಿ ಚಿಂತಕ, ಅಧ್ಯಾಪಕರಾದ ಶ್ರೀ ಜಿ. ನಾಗರಾಜ್ ನಾದಲೀಲೆ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ದಿನಾಂಕ 02 ಫೆಬ್ರವರಿ 2025ರಂದು ಬೆಂಗಳೂರಿನ ಶೇಷಾದ್ರಿಪುರಂ ಮೊದಲನೆಯ ಮಹಡಿ ಕಾನ್ಫ್ ರೆನ್ಸ್ ಹಾಲ್ ನಲ್ಲಿ ಬೆಳಗ್ಗೆ ಗಂಟೆ 9-30ರಿಂದ ಗಾಂಧೀಜಿ ವಿವೇಕಾನಂದ ಪ್ರಣಿತ ರಾಜ್ಯ ಮಟ್ಟದ ಎಂಟನೇ ಯುವಜನ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಡಾ. ಕೃಷ್ಣ ಹಾನ್ ಬಾಳ್ ಹಾಗೂ ಶ್ರೀಮತಿ ಜಯಶ್ರೀ ರಾಜು ಅವರ ಕೃತಿಗಳ ಲೋಕಾರ್ಪಣೆ, ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಬೆಳಿಗ್ಗೆ 9-30 ಗಂಟೆಗೆ ವಿಶ್ರಾಂತ ಮುಖ್ಯೋಪಾಧ್ಯಾಯರು ಶ್ರೀ ಏಕಾಂಬರೇಶ್ವರ್ ಇವರಿಂದ ಧ್ವಜಾರೋಹಣ ಮತ್ತು ಹಿರಿಯ ಸಾಹಿತಿ ಶ್ರೀಮತಿ ಅಂಬುಜಾ ಪ್ರಕಾಶ್ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯುವ ಸಾಹಿತಿ ಡಾ. ಕೃಷ್ಣ ಹಾನ್ ಬಾಳ್ ರವರ ‘ಗೆಳತಿ’ ಮತ್ತು ನಮ್ಮೂರು ಹಾನುಬಾಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಶ್ರೀಮತಿ ವಿದ್ಯಾ ಅಮಿತ್, ಶ್ರೀಮತಿ ಆಶಾ ಪಾರ್ವತಿ ಇವರಿಂದ ಗೀತ ಗಾಯನ ನಡೆಯಲಿದೆ. ಮಧ್ಯಾಹ್ನ 12-00 ಗಂಟೆಗೆ ವಿಚಾರಗೋಷ್ಠಿಯಲ್ಲಿ ‘ಗಾಂಧೀಜಿ ಮತ್ತು ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಡಾ. ನರಸಿಂಹಮೂರ್ತಿ ಹಳೇಹಟ್ಟಿ ಇವರು ಮತ್ತು ‘ಸಮ್ಮೇಳನಾಧ್ಯಕ್ಷರ ಬದುಕು ಬರಹ’ ವಿಷಯದ ಬಗ್ಗೆ ಲೇಖಕರಾದ ಎಂ.ಆರ್. ಉಪೇಂದ್ರ ಕುಮಾರ್ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಬಳಿಕ ಕವಿಗೋಷ್ಠಿಯಲ್ಲಿ ಕವಿಗಳಿಂದ ಕಾವ್ಯ ವಾಚನ ಮತ್ತು ಕಥಾ ವಾಚನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ‘ಗಾಂಧಿ – ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಲೇಖಕಿ ಶ್ರೀಮತಿ ಜಯಶ್ರೀ ರಾಜು ಇವರ ‘ಮೋನು ಪುಟ್ಟಿ’ ಮಕ್ಕಳ ಕಥನ ಕವನ ಕೃತಿಯನ್ನು ಲೇಖಕರಾದ ಡಾ. ಆರ್. ವಾದಿರಾಜು ಇವರು ಲೋಕಾರ್ಪಣೆಗೊಳಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ಪ್ರೊ. ಹೇಮಾವತಿ ಎಸ್. ಇವರ ನಿರ್ದೇಶನದಲ್ಲಿ ಶ್ರೀರಾಮ ಮತ್ತು ತಂಡದವರಿಂದ ಸಮೂಹ ಜನಪದ ಗೀತಗಾಯನ ಮತ್ತು ನೃತ್ಯ ಕಲಾವಿದೆ ಶ್ರೀಮತಿ ಅಲಾಫೀಯ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.