ಕಲಬುರಗಿ : ರಂಗಸಂಗಮ ಕಲಾ ವೇದಿಕೆ ಕಲಬುರಗಿ ಇದರ ವತಿಯಿಂದ ಶ್ರೀ ಎಸ್.ಬಿ. ಜಂಗಮ ಶೆಟ್ಟಿ ಹಾಗೂ ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18-07-2024ರಂದು ಬೆಳಿಗ್ಗೆ 10-30 ಗಂಟೆಗೆ ಕಲಬುರಗಿಯ ಜಿಲ್ಲಾ ಕೋರ್ಟ್ ಎದುರುಗಡೆ ಇರುವ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳ ಸಾನಿಧ್ಯದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ ಮೂರ್ತಿ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ಇವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಎಸ್.ಬಿ. ಜಂಗಮ ಶೆಟ್ಟಿ ಹಾಗೂ ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ಇವರ ಕುರಿತು ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರರಾದ ಶ್ರೀ ಮಹಾದೇವ ಎಮ್. ಹಂಗರಗಿ ಇವರು ಮಾತನಾಡಲಿದ್ದಾರೆ. ರಂಗಸಂಗಮ ಕಲಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಿವಗೀತಾ ಬಸವಪ್ರಭು ಇವರ ಉಪಸ್ಥಿತಿಯಲ್ಲಿ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಶ್ರೀ ಬಿ. ಎಚ್. ನಿರಗುಡಿ ಇವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶ್ರೀ ಶ್ರೀಧರ ಹೊಸಮನಿ ಹಾಗೂ ಸಂಗಡಿಗರು ಗೀತ ಗಾಯನ ಪ್ರಸ್ತುತ ಪಡಿಸಲಿದ್ದಾರೆ.
ಶ್ರೀ ಎಸ್.ಬಿ. ಜಂಗಮಶೆಟ್ಟಿಯವರು ವೃತ್ತಿಯಲ್ಲಿ ಇಂಜಿನೀಯರ್ ಅಗಿದ್ದರು. ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಪೋಷಕರಾಗಿದ್ದರು. ಅಸಂಖ್ಯಾತ ರಂಗ ಚಟುವಟಿಕೆಗಳನ್ನು ಜಾತಿ, ಮತ, ಭೇದವೆಣಿಸದೆ, ಉತ್ತೇಜಿಸುತ್ತಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಸುಪರಿಂಟೆಂಡೆಂಟ್ ಇಂಜಿನೀಯರ್ ಆಗಿ ನಿವೃತ್ತರಾಗಿದ್ದರು. ಅವರು ವಿಶೇಷವಾಗಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಅಲ್ಲದೇ ಸ್ವತಃ ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಹೊಂದಿದ್ದರು. ಜೊತೆಗೆ ರಾಗಬದ್ಧವಾಗಿ ಹಾಡುತ್ತಿದ್ದರು. ಶ್ರೀ ಎಸ್.ಬಿ. ಜಂಗಮಶೆಟ್ಟಿಯವರ ಸ್ಮರಣಾರ್ಥ ರಂಗಭೂಮಿಯಲ್ಲಿ ಅನುಪಮ ಸೇವೆ ಸಲ್ಲಿಸಿದ ಕಲಾವಿದರಿಗೆ ರಂಗ ಪ್ರಶಸ್ತಿ ನೀಡಲಾಗುತ್ತಿದೆ.
ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿಯವರು ಶ್ರೀ ಎಸ್.ಬಿ. ಜಂಗಮಶೆಟ್ಟಿಯವರ ಧರ್ಮಪತ್ನಿ, ಎಸ್.ಬಿ.ಜಂಗಮಶೆಟ್ಟಿಯವರ ಬೆನ್ನ ಹಿಂದಿನ ಬೆಳಕಾಗಿ ಬದುಕಿದವರು. ಸಾಹಿತ್ಯ, ಸಂಸ್ಕೃತಿ ಹಾಗೂ ರಂಗಭೂಮಿ ಬಗ್ಗೆ ಅಪಾರ ಗೌರವ ಹೊಂದಿದ್ದರು. ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿಯವರ ಸ್ಮರಣಾರ್ಥ ರಂಗಭೂಮಿಯಲ್ಲಿ ಅನುಪಮ ಸೇವೆ ಸಲ್ಲಿಸಿದ ಕಲಾವಿದರಿಗೆ ರಂಗ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರು :
ಶ್ರೀ ಪುರುಷೋತ್ತಮ ಹಂದ್ಯಾಳ ಇವರು ಬಳ್ಳಾರಿ ತಾಲೂಕಿನ ಹಂದ್ಯಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ, ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ಇವರು ತಮ್ಮ ಶಾಲಾದಿನಗಳಲ್ಲಿಯೇ ರಂಗಭೂಮಿಗೆ ಪ್ರವೇಶಿಸಿದರು. ಕುರುಕ್ಷೇತ್ರ, ಧನಿಕರ ದೌರ್ಜನ್ಯ, ಕರ್ತವ್ಯದ ಕಾಣಿಕೆ, ಮಹಿಮಾಪುರ, ಕುಂಕುಮ ತಂದ ಕೈಲಾಸ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ರಕ್ತರಾತ್ರಿ’ ನಾಟಕದಲ್ಲಿಯ ಶಕುನಿ ಪಾತ್ರದಲ್ಲಿಯ ಇವರ ವಿಶಿಷ್ಟ ಅಭಿನಯಕ್ಕೆ “ಅಭಿನವ ಶಕುನಿ” ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಶಕುನಿಯ ಇವರ ಅಭಿನಯವನ್ನು ನಾಡೋಜ ಬೆಳಗಲಿ ವೀರಣ್ಣನವರು ಹಾಗೂ ನಾಡೋಜ ಸುಭದ್ರಮ್ಮ ಮನ್ಸೂರ್‌ರವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಬಳ್ಳಾರಿಯ ಕಾರಾಗೃಹದ ಖೈದಿಗಳ ಮನಃಪರಿವರ್ತನೆಗಾಗಿ ಖೈದಿಗಳಿಗಾಗಿ ನಾಟಕ ನಿರ್ದೇಶನವನ್ನು ಮಾಡಿರುವರು. ಕರೋನದ ಸಂಕಷ್ಟದ ಕಾಲದಲ್ಲಿ ಜನಜಾಗೃತಿಗಾಗಿ ಕಿರುಚಿತ್ರ ನಿರ್ಮಿಸಿ ಅಭಿನಯಿಸಿದ್ದಾರೆ. ಕನ್ನಡದ ನಾಲ್ಕು ಧಾರಾವಾಹಿಗಳಲ್ಲೂ ಪುರುಷೋತ್ತಮರವರು ಅಭಿನಯಿಸಿದ್ದಾರೆ. ಮೂವತ್ತುಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಪುರುಷೋತ್ತಮ ಹಂದ್ರಾಳ ಅವರಿಗೆ ಈ ಬಾರಿಯ ‘ಶ್ರೀ ಎಸ್.ಬಿ. ಜಂಗಮಶೆಟ್ಟಿ ರಂಗಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.
ರಾಧಿಕಾ ವ್ಹಿ. ಬೇವಿನಕಟ್ಟಿ ಇವರು 12ನೆಯ ವಯಸ್ಸಿನಲ್ಲಿಯೇ ‘ಬಸ್ ಕಂಡಕ್ಟರ್’ ನಾಟಕದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ರಾಧಿಕಾ, ಓದಿದ್ದು ಕಡಿಮೆಯಾದರೂ ಎಂತಹ ಪಾತ್ರ ಕೊಟ್ಟರು ಒಂದೇ ದಿನದಲ್ಲಿ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ. ಮದುಮಗಳು, ಕಿತ್ತೂರ ಚೆನ್ನಮ್ಮ, ಸಂಗ್ಯಾ ಬಾಳ್ಯಾ, ಸಂಪತ್ತಿಗೆ ಸವಾಲ್, ಸಂತ ಸಕ್ಕುಬಾಯಿ, ಜಗಜ್ಯೋತಿ ಬಸವೇಶ್ವರ, ರೈತನ ಮಕ್ಕಳು ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಇವರು ಸಮರಸಿಂಹಿಣಿ ಬೆಳವಡಿ ಮಲ್ಲಮ್ಮ ನಾಟಕದಲ್ಲಂತೂ ಮಲ್ಲಮ್ಮನ ಪಾತ್ರದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಕಲಾವೈಭವ ಕಂಪನಿ, ಚಿತ್ತರಗಿ ಕಂಪನಿ, ಹುಚ್ಚೇಶ್ವರ ನಾಟ್ಯ ಸಂಘ, ಕುಮಾರೇಶ್ವರ ನಾಟ್ಯ ಸಂಘ, ಏಣಗಿ ಬಾಳಪ್ಪನವರ ಕಂಪನಿ ಹೀಗೆ ಹಲವಾರು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ಕಂಪನಿ ಕಟ್ಟಿ, ಹತ್ತು ವರ್ಷ ನಡೆಸಿ ಕೈ ಸುಟ್ಟುಕೊಂಡಿದ್ದಾರೆ. ಏಣಗಿ ನಟರಾಜ ಇವರ ನಿರ್ದೇಶನದಲ್ಲಿ ‘ಕಿನ್ನರಿ’ ಮತ್ತು ‘ಇದು ಎಂತಾ ಲೋಕವಯ್ಯ’ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಅಜ್ಞಾತದಲ್ಲಿರುವ ಅಭಿಜಾತ ರಂಗಪ್ರತಿಭೆಗೆ ಈ ಬಾರಿಯ ‘ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.