ಹೊನ್ನಾವರ : ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಇವರ ಜನುಮದಿನದಂದು ಯಕ್ಷಪಲ್ಲವಿ ಟ್ರಸ್ಟ್ (ರಿ.) ಯಕ್ಷಗಾನ ಮಂಡಳಿ ಮಾಳಕೋಡ್ ಇದರ 5ನೇ ವರ್ಷದ ಸಂಭ್ರಮೋತ್ಸವ ‘ಮಾಳಕೋಡ್ ಯಕ್ಷವೈಭವ’ ಕಾರ್ಯಕ್ರಮವು ಮಂಕಿಯ ಜಡ್ಡಿ ಶಾಲೆಯಲ್ಲಿ ಯಶಸ್ವಿಯಾಗಿ ದಿನಾಂಕ 30 ಏಪ್ರಿಲ್ 2025ರಂದು ಸಂಪನ್ನಗೊಂಡಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶ್ರೀ ಮಂಕಾಳ ವೈದ್ಯ, ಶ್ರೀ ಸತೀಶ್ ಸೈಲ್, ಕು. ಬೀನಾ ಮಂಕಾಳ ವೈದ್ಯ ಇವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕು. ಬೀನಾ ಮಂಕಾಳ ವೈದ್ಯ, ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಭಟ್ ಇಡಗುಂಜಿ ಇವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಎಲ್.ವಿ. ರಘುನಾಥ ಭಟ್ ಆಗಮಿಸಿದ್ದರು. ಶ್ರೀ ಶ್ರೀನಿವಾಸ ರಾವ್, ಶ್ರೀ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಉದಯ ಹೆಗಡೆ ಮಾಳಕೋಡ್ ಅವರು ಸಹ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ವರ್ಷದ ‘ಯಕ್ಷಪಲ್ಲವಿ’ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ರಮೇಶ್ ಭಂಡಾರಿ ಮೂರೂರು ಇವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನದ ಹಿರಿಯ ಮದ್ದಲೆ ವಾದಕರಾದ ಶ್ರೀ ನರಸಿಂಹ ಹೆಗಡೆ ಮೂರೂರು, ಯಕ್ಷಗಾನದ ಸ್ತ್ರೀ ಪಾತ್ರಧಾರಿ ಶ್ರೀ ಸದಾಶಿವ ಭಟ್ಟ ಮಲವಳ್ಳಿ, ಯಕ್ಷಗಾನದ ವೇಷಭೂಷಣ ತಯಾರಕರಾದ ಶ್ರೀ ಲಕ್ಷ್ಮಣ ನಾಯ್ಕ ಚಿತ್ತಾರ, ಶ್ರೀ ದುರ್ಗಾ ಪರಮೇಶ್ವರಿ ವುಡ್ ವರ್ಕ್ಸ್ ಇದರ ಮಾಲಕರಾದ ಶ್ರೀ ಉದಯ ನಾಯ್ಕ ಜಡ್ಡಿ ಇವರುಗಳಿಗೆ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಚಿಂತನಾ ಹೆಗಡೆ ಅಭಿಮಾನಿ ಬಳಗ ಜಡ್ಡಿ ಮಂಕಿ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಇವರಿಗೆ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಮೊದಲನೇ ಪ್ರಸಂಗವಾಗಿ ಶ್ರೀ ಸುರೇಶ ಶೆಟ್ಟಿ ಶಂಕರನಾರಾಯಣ ಅವರ ಗಾನಸಾರಥ್ಯದಲ್ಲಿ ‘ಭಕ್ತ ಸುಧನ್ವ’ ಎಂಬ ಯಕ್ಷಗಾನವು ಸಂಪನ್ನಗೊಂಡಿತು. ಸುಧನ್ವನಾಗಿ ತೀರ್ಥಹಳ್ಳಿ, ಅರ್ಜುನನಾಗಿ ಯಾಜಿ, ಪ್ರಭಾವತಿಯಾಗಿ ಸದಾಶಿವ ಭಟ್ಟ ಮಲವಳ್ಳಿ, ಪ್ರದ್ಯುಮ್ನನಾಗಿ ಗೌರೀಶ ಗುಣವಂತೆ ಇವರು ರಂಗದಲ್ಲಿ ಕಾಣಿಸಿಕೊಂಡರು. ಎರಡನೇ ಪ್ರಸಂಗವಾಗಿ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಅವರ ಗಾನಸಾರಥ್ಯದಲ್ಲಿ ‘ವೀರ ಅಭಿಮನ್ಯು’ ಎಂಬ ಯಕ್ಷಗಾನವು ಪ್ರೇಕ್ಷಕರನ್ನು ಆಕರ್ಷಿಸಿತು. ಇದರಲ್ಲಿ ದ್ರೋಣನಾಗಿ ಉಜಿರೆ ಅಶೋಕ ಭಟ್, ಅಭಿಮನ್ಯುವಾಗಿ ಕಿರಾಡಿ, ದುಶ್ಯಾಸನನಾಗಿ ಮೂರೂರು ರಮೇಶ್ ಭಂಡಾರಿ, ಕೌರವನಾಗಿ ಕೆಕ್ಕಾರ ಆನಂದ ಭಟ್, ಜಯದೃತನಾಗಿ ಬಂಗಾರಮಕ್ಕಿ ರಾಮಚಂದ್ರ ಭಟ್, ಸುಭದ್ರೆಯಾಗಿ ಮಲವಳ್ಳಿ ಇವರು ರಂಗದಲ್ಲಿ ವಿಜೃಂಭಿಸಿದರು. ಸಾವಿರಾರು ಕಲಾಪ್ರೇಕ್ಷಕರು ಟ್ರಸ್ಟಿನ ಕಾರ್ಯಕ್ರಮಕ್ಕೆ ಬಂದಿರುವುದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.