ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಯಕ್ಷದೇಗುಲ ತಂಡ ಪ್ರಸ್ತುತಪಡಿಸಿದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನವು 20 ಆಗಸ್ಟ್ 2024ರಂದು ನಡೆಯಿತು.
ಕಲಾವಿದರಾಗಿ ಹಿಮ್ಮೇಳದಲ್ಲಿ ಯಕ್ಷ ಗುರುಗಳಾದ ಲಂಬೋದರ ಹೆಗಡೆ, ಚಂಡೆಯಲ್ಲಿ ಶ್ರೀನಿವಾಸ ಪ್ರಭು, ಮದ್ದಲೆಯಲ್ಲಿ ಸಂಪತ್ ಕುಮಾರ್ ಹಾಗೂ ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ ಬಾಲಕೃಷ್ಣ ಭಟ್, ಕಡಬಾಳ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ಸ್ಪೂರ್ತಿ ಭಟ್, ರಾಮಕೃಷ್ಣ ಭಟ್, ಉದಯ ಭೋವಿ, ಶ್ರೀ ವಿದ್ಯಾ, ಶ್ರೀವತ್ಸ ಮತ್ತು ಪ್ರಕಾಶ್ ಉಳ್ಳೂರ ಇವರು ಭಾಗವಹಿಸಿದರು. ಕಾರ್ಯಕ್ರಮವು ಯಕ್ಷಗುರು ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆಯಿತು.
ಬೆಂಗಳೂರಿನಲ್ಲಿ ಕಳೆದ 44 ವರ್ಷದಿಂದ ಕೆ. ಮೋಹನ್ ನಿರ್ದೇಶನ ಮತ್ತು ಪ್ರಿಯಾಂಕ ಕೆ. ಮೋಹನ್ ನೃತ್ಯ ಸಂಯೋಜನೆಯಲ್ಲಿ ಯಕ್ಷದೇಗುಲ ತಂಡವು ಸಾಂಪ್ರದಾಯಿಕ ಯಕ್ಷಗಾನ, ನಾಟಕಗಳು ಹಾಗೆಯೇ ನವೀನ ಮತ್ತು ಪ್ರಾಯೋಗಿಕ ನಿರ್ಮಾಣಗಳನ್ನು ಪ್ರದರ್ಶಿಸುವ ಏಕೈಕ ತಂಡವಾಗಿದೆ. ಈವರೆಗೆ 5000ಕ್ಕೂ ಹೆಚ್ಚು ಪ್ರದರ್ಶನವನ್ನು ದೇಶ, ವಿದೇಶಗಳಲ್ಲಿ ನೀಡಿ ಪ್ರಖ್ಯಾತಿ ಹೊಂದಿದೆ. ಸದಾ ತರಬೇತಿ, ಪ್ರದರ್ಶನ ನೀಡುವ ಚಟುವಟಿಕೆಯಿಂದಿರುವ ತಂಡ ‘ಯಕ್ಷದೇಗುಲ’ವಾಗಿದೆ.