ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ದ ರಂಗಪಂಚಮಿ-2024 ಐದು ದಿನಗಳ ನಾಟಕೋತ್ಸವದ ಎರಡನೇ ದಿನದ ಸಮಾರಂಭವು ದಿನಾಂಕ 03-03-2024ರಂದು ನಡೆಯಿತು. ಈ ಸಮಾರಂಭದಲ್ಲಿ ಶುಭಾಶಂಸನೆಗೈದ ಚಲನಚಿತ್ರ ಸಾಹಿತಿ ಪ್ರಮೋದ್ ಮರವಂತೆ “ಕರಾವಳಿಯ ಭಾಗಗಳಲ್ಲಿ ಸಾಂಪ್ರದಾಯಿಕ ಕಂಬಳ, ಹಬ್ಬ ಹರಿದಿನಗಳು, ಯಕ್ಷಗಾನ, ರಥೋತ್ಸವ ಮುಂತಾದವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವಾಗ ರಂಗಭೂಮಿಯ ಅಸ್ಥಿತ್ವಕ್ಕಾಗಿ 47 ವರ್ಷಗಳಿಂದ ನಿರಂತರ ಚಟುವಟಿಕೆಯಲ್ಲಿರುವ ಲಾವಣ್ಯದ ಕಾರ್ಯ ಶ್ಲಾಘನೀಯವಾದದ್ದು. ರಂಗಭೂಮಿ, ಸಿನೇಮಾ, ಇನ್ನಿತರ ಕಲಾಪ್ರಕಾರಗಳಿಗೆ ಮೂಲ ಎನ್ನುವುದು ಬರವಣಿಗೆ ಹಾಗೂ ಸಾಹಿತ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್‌ನಿಂದಾಗಿ ಸಾಹಿತ್ಯಾಭಿರುಚಿ ಕಡಿಮೆಯಾಗುತ್ತಿದೆ. ಪ್ರತಿದಿನ ಮನೆಯಲ್ಲಿ ದಿನಪತ್ರಿಕೆ, ವಾರಪತ್ರಿಕೆಗಳನ್ನು ತರಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಮಕ್ಕಳಿಗೂ ಓದಿನ ಕಡೆ ಗಮನಹರಿಸುವಂತೆ ಮಾಡುವುದು ಇಂದಿನ ಅನಿವಾರ್ಯ. ಹೆತ್ತವರು ಸಂಜೆ ವೇಳೆಯಲ್ಲಿ ಧಾರಾವಾಹಿಗಳನ್ನು ನೋಡುವುದನ್ನು ಕಡಿಮೆ ಮಾಡಿಕೊಂಡು ಆ ಸಮಯವನ್ನು ಓದುವುದರ ಬಗ್ಗೆ ಗಮನಹರಿಸಬೇಕು. ನಮ್ಮೊಳಗಿನ ಸೆಲೆಯನ್ನು ಅಲೆಯಾಗಿಸುವುದೇ ಕಲೆಯಾಗಿದ್ದು ಇದರೊಂದಿಗೆ ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಿ” ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ನರಸಿಂಹ ಬಿ. ನಾಯಕ್ ಇವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗೋರಕ್ಷಕ ಸಂಜೀವ ದೇವಾಡಿಗ ಕಳವಾಡಿ ಇವರನ್ನು ಸನ್ಮಾನಿಸಲಾಯಿತು. ಡಾ. ಎ.ಎಸ್. ಉಡುಪ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಸತೀಶ ಬಟವಾಡಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಿ.ಇ.ಒ. ವಿಷ್ಣು ಆರ್. ಪೈ, ಜೆ.ಸಿ.ಐ. ಬೈಂದೂರು ಸಿಟಿ ಅಧ್ಯಕ್ಷೆ ಅನಿತಾ ಆರ್.ಕೆ., ಶ್ರೀಮಕ್ಕಿ ಮಹಾಲಿಂಗೇಶ್ವರ ಸಂಸ್ಕೃತ ಪಾಠಶಾಲಾ ಪ್ರಾಚಾರ್ಯ ತಿರುಮಲೇಶ ಭಟ್ ಉಪಸ್ಥಿತರಿದ್ದರು. ಗಣಪತಿ ಎಸ್. ಸ್ವಾಗತಿಸಿ, ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಂದಿಸಿದರು. ನಂತರ ಚಿತ್ತಾರ ಬೆಂಗಳೂರು ತಂಡದ ಸದಸ್ಯರಿಂದ ‘ಸುಮ್ಮನೆ’ ನಾಟಕ ಪ್ರದರ್ಶನಗೊಂಡಿತು.