ಕಟೀಲು : ಯಕ್ಷಗಾನ ಆಟ ಕೂಟಗಳ ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಅರವತ್ತು ವರ್ಷ ತುಂಬಿದ ಈ ಸುಸಂದರ್ಭದಲ್ಲಿ ಆಯೋಜಿಸಲಾದ ಸಂಮಾನ ಕಾರ್ಯಕ್ರಮವು ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ವಿದ್ವಾಂಸ ಉಮಾಕಾಂತ ಭಟ್ “ಪಾತ್ರ ಪ್ರಸಂಗ ನಿರ್ವಹಣೆಯನ್ನು ಆಟ ಕೂಟಗಳಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಪ್ರಸಂಗದ ಜೊತೆಗೆ ಪಾತ್ರವನ್ನು ಮೆರೆಸುವ ಕಲಾವಿದರಲ್ಲಿ ಅದ್ವಿತೀಯರು ಸುಣ್ಣಂಬಳ ವಿಶ್ವೇಶ್ವರ ಭಟ್ಟರು. ಪ್ರತಿಭೆ ಮತ್ತು ಪಾಂಡಿತ್ಯವನ್ನು ಸಮಸಮವಾಗಿ ನಿರ್ವಹಿಸಿದ ಸುಣ್ಣಂಬಳರು ಕೇವಲ ಕಲಾವಿದರಲ್ಲ, ಯಕ್ಷಗಾನ ಕಲೆಯ ವಿಶ್ವ ವಿದ್ಯಾಲಯ ಆಗಿದ್ದಾರೆ.” ಎಂದು ಹೇಳಿದರು.
ಮಾನವ ಹಕ್ಕು ಆಯೋಗದ ಟಿ. ಶ್ಯಾಮ್ ಭಟ್ ಮಾತನಾಡಿ “ಆಟಕೂಟಗಳ ಮೂಲಕ ಪ್ರಸ್ತುತ ಯಕ್ಷಗಾನದ ನಂಬರ್ ಒನ್ ಕಲಾವಿದ ಎಂದು ಗುರುತಿಸಬಹುದಾದ ಕಲಾವಿದ ಸುಣ್ಣಂಬಳ ನಯವಿನಯತೆಯಿಂದ ಎಲ್ಲರನ್ನೂ ಗೌರವಿಸಿ ಬೆಳೆಯುತ್ತ ಬಂದವರು. ಇವರು ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುವಲ್ಲಿ ಶ್ರೇಷ್ಠರಾಗಿದ್ದಾರೆ.” ಎಂದರು.
ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬಿಪಿನ್ ಚಂದ್ರಶೆಟ್ಟಿ, ಪ್ರವೀಣ್ ಭಂಡಾರಿ, ಡಾ. ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ್ ಕಲ್ಕೂರ, ರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದುರ್ಗಾಮಕ್ಕಳ ಮೇಳದ ಕಲಾವಿದರು ಅರವತ್ತು ಹರಿವಾಣಗಳಲ್ಲಿ ಫಲವಸ್ತುಗಳನ್ನು ಸಮರ್ಪಿಸಿದರು.
ರವೀಂದ್ರ ಅತ್ತೂರು ಮತ್ತು ಸುದರ್ಶನ ಆಚಾರ್ ಇವರು ಮಂತ್ರೋಕ್ತದ ಮೂಲಕ ಷಷ್ಟಿಪೂರ್ತಿಯ ಸಲುವಾಗಿ ಸುಣ್ಣಂಬಳರನ್ನು ಹಾರೈಸಿದರು. ಅನೇಕ ಅಭಿಮಾನಿಗಳು, ಕಟೀಲು ಮೇಳದ ಕಲಾವಿದರು ಕಿರೀಟ, ಛಾಯಾಚಿತ್ರ, ಹಾರ, ವಸ್ತ್ರ, ಬಂಗಾರದ ಸರ,ಇತ್ಯಾದಿಗಳ ಮೂಲಕ ಸುಣ್ಣಂಬಳ ದಂಪತಿಗಳನ್ನು ಗೌರವಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ “ಕಲ್ಲಾಡಿ ವಿಠಲ ಶೆಟ್ಟರಿಂದ ಆದಿಯಾಗಿ ಧರ್ಮಸ್ಥಳ ಕೇಂದ್ರದಲ್ಲಿ ಸಿಕ್ಕ ಗುರುಗಳು, ಕಟೀಲು ಮೇಳದಲ್ಲಿ ಬಲಿಪರು, ಹಿರಿಯ ಕಲಾವಿದರು ಹೀಗೆ ಅನೇಕರು ತನ್ನನ್ನು ಬೆಳೆಸಿದ್ದಾರೆ. ತನ್ನನ್ನು ತಾನು ವಿಮರ್ಶಿಸಿಕೊಳ್ಳುವ ಗುಣ ಕಲಾವಿದರಲ್ಲಿ ಬೇಕು. ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಂಡಿದ್ದೇನೆ. ಕಲಾಭಿಮಾನಿಗಳು ಕಟೀಲಿನ ಆಸ್ರಣ್ಣ ಬಂಧುಗಳು. ಸಹಕಲಾವಿದರು ಕೊಟ್ಟ ಪ್ರೀತಿ ದೊಡ್ಡದು. ಕಲಾವಿದನಾದವನಿಗೆ ಕಲಾವಿದರ ಮಧ್ಯೆಯೇ ಸಂಮಾನಿಸುವುದು ಅತ್ಯಂತ ಆನಂದ. ನಿತ್ಯವೇಷದವನಿಂದಲೂ ಕಲಿಯಲು ಇರುತ್ತದೆ. ಯಕ್ಷಗಾನ ಏನು ಕೊಟ್ಟಿದೆ ಎಂದು ಕೇಳಬಹುದು. ಆರೋಗ್ಯಪೂರ್ಣವಾಗಿ ತಿನ್ನುವವನಿಗೆ ಯಕ್ಷಗಾನ ಎಲ್ಲವನ್ನೂ ಕೊಡುತ್ತದೆ.” ಎಂದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ಮಧೂರು ವಾಸುದೇವ ರಂಗಾ ಭಟ್ ನಿರೂಪಿಸಿ, ವಾಸುದೇವ ಶೆಣೈ ವಂದಿಸಿದರು.