ರಾಮ ನೆಲೆಸಬೇಕಾದದ್ದು ಎಲ್ಲರ ಹೃದಯದಲ್ಲಿ ಎಂಬ ಆಶಯವನ್ನು ಆಕೃತಿಗೊಳಿಸಲು, ಇತ್ತೀಚೆಗೆ ಅನೇಕ ರಂಗ ಪ್ರಯೋಗಗಳು ರಾಮಾಯಣದ ಕತೆಗಳನ್ನೇ ಆಧರಿಸಿ ಹೆಣೆಯಲ್ಪಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆ ನಿಟ್ಟಿನಲ್ಲಿ ನಡೆದ ಒಂದು ಅನನ್ಯ ಪ್ರಯತ್ನ, ಸುರಭಿ ಬೈಂದೂರಿನವರು, ಇತ್ತೀಚೆಗೆ ಬ್ರಹ್ಮಾವರದಲ್ಲಿ ಮಂದಾರ ಬೈಕಾಡಿಯವರ ರಂಗೋತ್ಸವದಲ್ಲಿ ಪ್ರಸ್ತುತ ಪಡಿಸಿದ ನಾಟಕ, ಮಕ್ಕಳ ರಾಮಾಯಣ.
ನೀನಾಸಮ್ ರಂಗಶಾಲೆಯ ಪ್ರಾಧ್ಯಾಪಕರಾದ ಬಿ.ವೆಂಕಟರಮಣ ಐತಾಳರು ಈ ನಾಟಕದ ರಚನಾಕಾರರು. ಕುವೆಂಪು ಅವರ ರಾಮಾಯಣ ದರ್ಶನದ ಅನೇಕ ಭಾಗಗಳನ್ನು ಈಗಾಗಲೇ ರಂಗಕ್ಕೆ ತಂದು ಅತ್ಯಂತ ಜನಪ್ರಿಯಗೊಳಿಸಿದ ಯುವ ನಿರ್ದೇಶಕ ಗಣೇಶ್ ಮಂದಾರ್ತಿ ಈ ಪ್ರಯೋಗದ ನಿರ್ದೇಶಕರು. ಸಂಪೂರ್ಣವಾಗಿ ಎಲ್ಲಾ ಬಾಲ ನಟರೇ ಅಭಿನಯಿಸಿದ್ದು ಇಲ್ಲಿಯ ಒಂದು ವಿಶೇಷವಾದರೆ, ದೇಸೀ ಭಾಷೆಯಾದ ಕುಂದಾಪುರ ಕನ್ನಡದಲ್ಲಿ ನಾಟಕವಾಡಿದ್ದು ಇನ್ನೊಂದು ವಿಶೇಷ.
ರಾಮಾಯಣದ ಕತೆ ಹೇಳುತ್ತಾ ನಾಟಕ ಕಟ್ಟುವ ಒಂದು ವಿಶಿಷ್ಟ ತಂತ್ರ ಇಲ್ಲಿ ಬಳಸಲಾಗಿದೆ. ಹಾಗಾಗಿ ಆಯಾ ಸಂದರ್ಭದಲ್ಲಿ ಪಾತ್ರಗಳೇ ನಿರೂಪಕರೂ ಆಗಿ ಬಿಡುತ್ತಾರೆ. ಈ ನಿರೂಪಣೆಯನ್ನೂ, ಸಂಭಾಷಣೆಗಳನ್ನೂ ಎಲ್ಲ ಬಾಲ ಕಲಾವಿದರೂ ಅತ್ಯಂತ ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದ್ದು ನಾಟಕದ ಬಹಳ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಗಣೇಶರ ಹೆಚ್ಚಿನ ರಾಮಾಯಣ ಸಂಬಂಧೀ ನಾಟಕಗಳಲ್ಲಿರುವಂತೆ ಇಲ್ಲಿಯೂ ಯಕ್ಷಗಾನದ ಲಯವನ್ನೇ ನಾಟಕದ ಚಲನೆಗೆ ಬಳಸಿಕೊಳ್ಳಲಾಗಿತ್ತು. ಅತ್ಯಂತ ಆತ್ಮವಿಶ್ವಾಸದಿಂದ ಮಕ್ಕಳು ರಂಗದ ತುಂಬೆಲ್ಲಾ ಕುಣಿಯುತ್ತಾ ಹಾಡುತ್ತಾ, ಪ್ರಸ್ತುತಿ ಮಾಡುತ್ತಿದ್ದರೆ ನೋಡುಗರೊಳಗೂ ಒಂದು ರಂಗಸ್ಥಳ ಸೃಷ್ಟಿಯಾಗಿ ಕುಣಿಯುವ ಹುಕಿ ಮೂಡುತ್ತಿತ್ತು. ಪುಟ್ಟ ಸೀತೆಯನ್ನು ಕಾಣುವಾಗಲಂತೂ ಮುದ್ದು ಉಕ್ಕಿ ಬರುತ್ತಿತ್ತು.
ಇಡೀ ಪ್ರಯೋಗದಲ್ಲೇ ಒಂದು ಮಗುತನದ ಸೌಂದರ್ಯವಿದೆ. ಸರಳ ವಸ್ತ್ರಾಲಂಕಾರ ಭೂಷಿತ ನಟರು, ರಾಜು ಮಣಿಪಾಲ, ಇವರ ಬಣ್ಣದ ಬೆಳಕಿನ ಸಂಯೋಜನೆಯಲ್ಲಿ ದಿವ್ಯವಾಗಿ ಕಾಣುತ್ತಿದ್ದರು. ಸಾಮಾನ್ಯವಾಗಿ ಮಕ್ಕಳ ನಾಟಕದಲ್ಲಿ ಬಳಸುವ ಮೋಹಕ ರಂಗ ಪರಿಕರಗಳೂ ಇಲ್ಲಿರದ ಕಾರಣ, ಕಥೆ ಮತ್ತು ನಟರ ಅಭಿನಯ ಮಾತ್ರ ಇಲ್ಲಿ ವಿಜ್ರಂಭಿಸುವಂತಾಯ್ತು. ಶುದ್ಧ ಕನ್ನಡದಲ್ಲಿಯೇ ಪೌರಾಣಿಕ ಕತೆಗಳನ್ನು ಬಯಸುವ ನಮ್ಮ ಸಾಂಪ್ರದಾಯಿಕ ಮನಸ್ಸುಗಳೂ ಮಕ್ಕಳ ಸರಳ, ಸಹಜ ಕುಂದಗನ್ನಡಕ್ಕೆ ಶರಣಾಗಿ ಬಿಟ್ಟವು. ನಟರ ಆಡುಭಾಷೆಯ ಈ ಸಾಧ್ಯತೆಯನ್ನೂ ಶೋಧಿಸಿದ ನಿರ್ದೇಶಕರಿಗೆ ವಿಶೇಷ ಅಭಿನಂದನೆಗಳು. ಇಡೀ ನಾಟಕದ ಪಠ್ಯ, ಪದಗಳು, ಚಲನೆ ಎಲ್ಲವನ್ನೂ ತಮ್ಮದಾಗಿಸಿಕೊಂಡು, ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟ ಈ ಪುಟ್ಟ ಮಕ್ಕಳ ಶಕ್ತಿ ಬೆರಗು ಮೂಡಿಸುವಂತಿತ್ತು. ಇಂತದ್ದನ್ನು ಸಾಧ್ಯವಾಗಿಸಿದ ನಿರ್ದೇಶಕರ ವೃತ್ತಿಪರತೆಯೂ ಸಾಮಾನ್ಯದ್ದಲ್ಲ. ಆದರೆ, ಒಂದು ಹಂತದ ನಂತರ ನಾಟಕದೊಳಗೊಂದು ಏಕತಾನತೆ ಕಂಡು ಬರುವ ಕಾರಣ, ನಾಟಕದ ಅವಧಿ ತುಸು ಮಿತಿಗೊಳಿಸಬಹುದಿತ್ತು. “ಪಂಚವಟಿ” ಯಕ್ಷಗಾನ ಪ್ರಸಂಗದ, ಪಾರ್ತಿಸುಬ್ಬ ಇವರ ಕೆಲವು ಹಾಡುಗಳನ್ನು ಇಲ್ಲಿ ಬಳಸಿಕೊಂಡಿದ್ದು, ಅದು ಅಷ್ಟಾಗಿ ಇಲ್ಲಿಯ ಲಯಕ್ಕೆ ಹೊಂದಿ ಬರಲಿಲ್ಲ ಅನ್ನಿಸಿತು.
ಮಕ್ಕಳ ನಾಟಕಗಳು ಬೇಸಿಗೆ ಶಿಬಿರಕ್ಜಷ್ಟೇ ಸೀಮಿತವಾಗುತ್ತಿರುವ ಈ ಸಂದರ್ಭದಲ್ಲಿ , ಇಪ್ಪತ್ತೊಂದು ಮಕ್ಕಳಿಗೆ ತರಬೇತಿ ನೀಡಿ ಊರೂರಿಗೆ ಕರೆದೊಯ್ದು ಪ್ರದರ್ಶನ ನೀಡುತ್ತಿರುವ ಸುರಭಿ ಬೈಂದೂರು ಸಂಸ್ಥೆಗೆ ಮೊದಲು ಅಭಿನಂದನೆ ಸಲ್ಲಬೇಕು. ಏಕೆಂದರೆ ರಂಗಭೂಮಿಯ ಒಡನಾಟ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನೀಡುವ ಕೊಡುಗೆ ಅಪಾರ. ನಾಟಕ ಪ್ರದರ್ಶನಗಳ ಭಾಗವಾಗುವ ಮಕ್ಕಳ ಬುದ್ದಿ, ಭಾವ ,ಕೌಶಲಗಳ ಸಂಸ್ಕಾರವಾಗಿ, ಅವರಲ್ಲೊಂದು ಸೂಕ್ಷ್ಮ ಸಂವೇದನೆ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ. ಇದರೊಂದಿಗೇ ಮಕ್ಕಳ ಮನಸ್ಸಷ್ಟೇ ತಾಜಾತನ ಹೊಂದಿರುವ ವಾಲ್ಮೀಕೀ ರಾಮಾಯಣದ ಕತೆಯನ್ನು ಈ ನಾಟಕ ಆಡುವ ಮತ್ತು ನೋಡುವ ನೂರಾರು ಮಕ್ಕಳು ತಮ್ಮೊಳಗೆ ಬೆಳೆಯಬಿಡುವಂತಾದದ್ದು ಕೂಡಾ ಬಹಳ ಮುಖ್ಯ ಸಂಗತಿ ಮತ್ತು ಅದು ಈ ಕಾಲದ ತೀರ ಅಗತ್ಯವೂ ಹೌದು. ಈ ತಂಡದ ಬಹುತೇಕ ಕಲಾವಿದರು ಹೆಣ್ಣು ಮಕ್ಕಳೇ ಆಗಿದ್ದರು ಎಂಬುದನ್ನೂ ಇಲ್ಲಿ ಗಮನಿಸಬೇಕು. ಬ್ರಹ್ಮಾವರದಲ್ಲಿ ಈ ಕಂದಮ್ಮಗಳ “ಮುದ್ದು ಮುದ್ದು ರಾಮಾಯಣ” ಪ್ರದರ್ಶನ ಏರ್ಪಡಿಸಿದ ಮಂದಾರ ಬೈಕಾಡಿ ತಂಡದವರನ್ನೂ ನಾವು ಪ್ರೇಕ್ಷಕರು ಕೃತಜ್ಞತೆಯಿಂದ ನೆನೆಯಲೇಬೇಕು.
ಅಭಿಲಾಷಾ ಎಸ್. ಬ್ರಹ್ಮಾವರ
B Sc., B ed, ಇಂಗ್ಲಿಷ್ ಹಾಗೂ ಕನ್ನಡದಲ್ಲಿ MA, Med ಪದವೀಧರೆಯಾದ ಅಭಿಲಾಷಾರವರು ಎಸ್.ಎಂ.ಎಸ್. ಬ್ರಹ್ಮಾವರದ ಪ್ರಾಂಶುಪಾಲೆ. ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನದ ತರಬೇತಿಯನ್ನು ಬಾಲ್ಯದಿಂದಲೇ ಪಡೆದಿದ್ದು, ರಂಗಭೂಮಿಯ ನಟಿಯಾಗಿ, ನಿರ್ದೇಶಕಿಯಾಗಿ, ಗುರುತಿಸಿಕೊಂಡಿರುವ ಇವರು 2019-20ರ ಆದರ್ಶ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅಭಿಲಾಷಾರವರು ಬರೆದ ನಾಟಕಗಳು ಅಂಬೆ-ಅಂಬಿಕೆ, ಗಂಗಿ ಪರಸಂಗ, ಬದುಕಲು ಬಿಡಿ, ಮಹಿಳಾ ಭಾರತ, ಅರಸು ಕನಸು, ಮಳೆ ಬಂತು ಮಳೆ ಹಾಗೂ ಮಕ್ಕಳ ನಾಟಕಗಳಾದ ಮಾಯಕದ ಹೂವು ಮತ್ತು ನಾನು ವಿಜ್ಞಾನಿಯಾಗುವೆ ಮೊದಲಾದ ನಾಟಕಗಳು ರಂಗ ದಿಗ್ಗಜರಾದ ಸುರೇಶ್ ಆನಗಳ್ಳಿ, ಶ್ರೀಪಾದ ಭಟ್, ವಿದ್ದು ಉಚ್ಚಿಲ ಮೊದಲಾದವರ ನಿರ್ದೇಶನದಲ್ಲಿ ರಾಜ್ಯಾದ್ಯಂತ ಪ್ರದರ್ಶನ ಕಂಡಿವೆ. ಅನೇಕ ಪತ್ರಿಕೆಗಳಲ್ಲಿ ಅಂಕಣ ಬರಹ, ಕತೆಗಳು, ಕವನಗಳು, ವಿಮರ್ಶೆಗಳನ್ನು ಬರೆದಿರುವ ಅಭಿಲಾಷಾರವರು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಕಲೆ ಸಾಹಿತ್ಯ ಮತ್ತು ಶಿಕ್ಷಣದ ಕುರಿತಂತೆ ವಿಚಾರ ಮಂಡಿಸಿದ್ದಾರೆ. ರಾಜ್ಯಾದ್ಯಂತ ಪ್ರಸಾರವಾದ ‘ಶಿಕ್ಷಣದಲ್ಲಿ ರಂಗಭೂಮಿ’ ಮತ್ತು ‘ಲಿಂಗ ಸೂಕ್ಷ್ಮತೆ’ ಕುರಿತು ಆಕಾಶವಾಣಿಯಲ್ಲಿ ಇವರು ಮಾಡಿದ ಭಾಷಣ ಬಹಳಷ್ಟು ಪ್ರಶಂಸೆಯನ್ನು ಪಡೆದಿದೆ.