28 ಫೆಬ್ರವರಿ 2023, ಮಂಗಳೂರು: ತುಳು ಸಿನಿಮಾ ರಂಗವು ಕೂಡು ಕುಟುಂಬ ಕಲ್ಪನೆಯಲ್ಲಿ ಬೆಳೆದು ಬಂದಿದೆ. ಇಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಸಹಿತ ಎಲ್ಲರ ನಡುವೆ ಸಂಬಂಧ ಪರಸ್ಪರ ಬೆಸೆದುಕೊಂಡಿದೆ ಎಂದು ವಿದ್ವಾಂಸ ಪ್ರೊ. ಬಿ. ಎ. ವಿವೇಕ ರೈ ಹೇಳಿದರು.
ತಮ್ಮ ಲಕ್ಷ್ಮಣ ಅವರು ಬರೆದ ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ “ತುಳು ಬೆಳ್ಳಿ ತೆರೆಯ ಸುವರ್ಣ ಯಾನ” ಕೃತಿ ಯನ್ನು ಫೆ.27 ಸೋಮವಾರದಂದು ನಗರದ ಪುರಭವನ ದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಭಾಷೆಯ ಮೇಲಿನ ಭಾವನಾತ್ಮಕ ಸಂಬಂಧ ಪ್ರೀತಿ, ಅಭಿಮಾನದಿಂದ ಮಾಡುವ ಸಿನಿಮಾ ಗಳನ್ನು ನಾವು ನೋಡಿ, ಬೆಂಬಲಿಸಬೇಕು. ನಮ್ಮ ಭಾಷೆಯ ಸಿನಿಮಾ ವನ್ನು ನಾವು ತುಳು ಭಾಷಿಕರೇ ನೋಡದಿದ್ದರೆ ಅದು ಸರಿಯಲ್ಲ. ತುಳು ಸಿನಿಮಾ ಗಳ ವೀಕ್ಷಣೆ ಹೆಚ್ಚುವ ಮೂಲಕ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.
ತಮ ಲಕ್ಷ್ಮಣ ಅವರು ತುಳು ಸಿನಿಮಾ ರಂಗದ ಚರಿತ್ರಾ ಅರ್ಹ ಕೃತಿಯನ್ನು ಅರ್ಪಿಸಿದ್ದಾರೆ. ತಲಸ್ಪರ್ಶಿ ಜ್ಞಾನ ನೀಡಬಹುದಾದ ಈ ಪುಸ್ತಕವು ವಿಶ್ವವಿದ್ಯಾಲಯದಿಂದ ಪದವಿ ಪಡೆಯುವಷ್ಟು ಅಮೂಲ್ಯ ವಾಗಿದೆ ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಸಿನಿಮಾ ಮಾಡಿ ಸಿರಿವಂತರಾದವರು ಯಾರೂ ಇಲ್ಲ. ಆದರೂ, ಭಾಷೆಯ ಮೇಲಿನ ಪ್ರೀತಿ ಹಾಗೂ ಸ್ವಾಭಿಮಾನದಿಂದ ತುಳು ಸಿನಿಮಾ ಮಾಡುತ್ತಾರೆ ಎಂದರು. ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ. ಮಾತನಾಡಿದರು. ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಾಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ತುಳು ಚಿತ್ರರಂಗದ ಉನ್ನತಿಗೆ ಶ್ರಮಿಸಿದ ಸಾಧಕರನ್ನು ಗೌರವಿಸಲಾಯಿತು. ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು.