ಪುತ್ತೂರು : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ವತಿಯಿಂದ ಕೊಡಮಾಡುವ ಸ್ವರ್ಣ ಸಾಧನಾ ಪ್ರಶಸ್ತಿಗೆ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 04-05-2024ರಂದು ಪುತ್ತೂರಿನ ಜೈನ ಭವನದಲ್ಲಿ ಜರಗಲಿದೆ. ಪ್ರಶಸ್ತಿಯು ರೂಪಾಯಿ 15,000 ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ತಿಳಿಸಿದ್ದಾರೆ.
ಸುಬ್ರಾಯ ಚೊಕ್ಕಾಡಿ :
ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ತನ್ನ ಪ್ರಾಥಮಿಕ ಶಿಕ್ಷಣವನ್ನು ಚೊಕ್ಕಾಡಿಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಪಂಜದಲ್ಲಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡದಲ್ಲಿ ಎಂ. ಎ. ಪದವಿ ಪಡೆದರು. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭವಾಯಿತು. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಎಳೆವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಪ್ರತಿಭಟನೆಯ ರೂಪ ನೀಡಿದ್ದೆ ಮೂರ್ತ ಕಾವ್ಯರೂಪದಲ್ಲಿ. ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವ. ಹೀಗೆ ಇವರು ಬರೆದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಿತವಾಗಿವೆ.
ಸುಬ್ರಾಯ ಚೊಕ್ಕಾಡಿಯವರ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಮುಂತಾದವು ಇವರ ಪ್ರಕಟಿತ ಕೃತಿಗಳು ಹಾಗೂ ಕವನ ಸಂಕಲನಗಳು.
ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯ ಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.