ಮಂಗಳೂರು : ‘ಬಹು ಓದು ಬಳಗ’ ಮಂಗಳೂರು ಪ್ರಕಟಿಸಿರುವ ‘ತಾಯಿ ಬೇರು’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 14 ಏಪ್ರಿಲ್ 2025ರ ಸೋಮವಾರದಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಸಮಾಜಶಾಸ್ತ್ರಜ್ಞ ಡಾ. ಲಕ್ಷ್ಮೀಪತಿ ಸಿ. ಜೆ. ಮಾತನಾಡಿ “ಅನ್ನೋನ್ಯವಾಗಿರುವ ಜನರ ಮಧ್ಯೆ ಭಯ ಹುಟ್ಟಿಸುವವರು ನಿಜವಾದ ಭಯೋತ್ಪಾದಕರಾಗಿದ್ದಾರೆ. ಈ ಭಯೋತ್ಪಾದಕರನ್ನು ಕರಾವಳಿಯ ಜನತೆ ಮಟ್ಟಹಾಕಬೇಕಿದೆ. ಅದಕ್ಕಾಗಿ ಮೌನ ಮುರಿದು ಪ್ರಬಲ ಹೋರಾಟ ಮಾಡಬೇಕಿದೆ. ಕರಾವಳಿಯು ಬಹುಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಈ ಸಂಸ್ಕೃತಿಯನ್ನು ನಾಶಪಡಿಸಲು ಬೆರಳೆಣಿಕೆಯ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಶಾಂತಿ ಬಯಸುವ ಬಹುಸಂಖ್ಯಾತರು ಅವಕಾಶ ಮಾಡಿಕೊಡಬಾರದು. ಬಹುಜನರು ಮೌನವಾಗಿದ್ದರೆ ಕೋಮುವಾದಿ ಶಕ್ತಿಗಳಿಗೆ ಅದು ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ. ತಳ ಸಮುದಾಯದ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್. ಅಂತಹ ಅಂಬೇಡ್ಕರ್ ಅವರ ಫೋಟೋವನ್ನು ಎಲ್ಲಿಡಬೇಕು ಎಂದು ಈ ಮತೀಯ ಶಕ್ತಿಗಳು ನಿರ್ಧರಿಸುವಷ್ಟರ ಮಟ್ಟಿಗೆ ತಲುಪಿರುವುದು ವಿಪರ್ಯಾಸ. ನಿಜವಾದ ಈ ಭಯೋತ್ಪಾದಕರು, ಮತೀಯವಾದಿಗಳು ಮಾದಕ ದ್ರವ್ಯ ವ್ಯಸನಿಗಳಿಗಿಂತಲೂ ಅಪಾಯಕಾರಿಗಳು. ಕರಾವಳಿಯಲ್ಲಿ ಬಹುಸಂಸ್ಕೃತಿಯನ್ನು ಕಟ್ಟಿದವರು ತೆರೆಮರೆಗೆ ಸರಿಯುತ್ತಿದ್ದಾರೆ. ಈ ಸಂಸ್ಕೃತಿಗಳನ್ನು ಕೆಡಹುವವರು ವಿಜೃಂಭಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮುಸ್ಲಿಮರು, ಕ್ರೈಸ್ತರು, ದಲಿತರು, ಹಿಂದುಳಿದ ವರ್ಗದ ಶಾಂತಿ ಬಯಸುವ ಜನರು ಜೊತೆಗೂಡಿ ಬದುಕುವ ಕನಸನ್ನು ಕಾಣುತ್ತಿದ್ದಾರೆ. ಹಾಗಾಗಿ ನಮ್ಮದು ವಿಕಸಿತ ಭಾರತವಾಗಿದೆ” ಎಂದು ಹೇಳಿದರು.
ಆಕೃತಿ ಆಶಯ ಪಬ್ಲಿಕೇಶನ್ ಇದರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಡಾ. ಜ್ಯೋತಿ ಚೇಳ್ಯಾರು ವಹಿಸಿದ್ದರು. ಉಪನ್ಯಾಸಕಿ ಡಾ. ಸುಧಾರಾಣಿ ಪುಸ್ತಕ ವಿಮರ್ಶೆ ಮಾಡಿದರು. ಅತಿಥಿಗಳಾಗಿ ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಸಮಾಜ ಸೇವಕಿ ಮಲ್ಪೆ ಶಾರದಕ್ಕೆ ಭಾಗವಹಿಸಿದ್ದರು. ಆಕೃತಿ ಆಶಯ ಪಬ್ಲಿಕೇಶನ್ ಇದರ ಪ್ರಕಾಶಕ ಕಲ್ಲೂರು ನಾಗೇಶ ಸ್ವಾಗತಿಸಿ, ಕೃತಿಯ ಪ್ರಧಾನ ಸಂಪಾದಕ ಡಾ.ಪ್ರಕಾಶ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಉಷಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಮತ್ತೋರ್ವ ಪ್ರಧಾನ ಸಂಪಾದಕ ಡಾ. ಶ್ರೀನಿವಾಸ ಹೊಡೆಯಾಲ ವಂದಿಸಿದರು.