ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ಣಾಟಕ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ ತಾಳಮದ್ದಲೆ ಸಪ್ತಾಹ -2023 ಹಾಗೂ ತಾಳಮದ್ದಲೆ ಪ್ರಶಸ್ತಿ ಪ್ರದಾನ ಸಮಾರಂಭ ಮೇ 21ರಿಂದ 27ರವರೆಗೆ ನಡೆಯಲಿದೆ.
ತಾಳಮದ್ದಲೆ ಸಪ್ತಾಹವನ್ನು ದಿನಾಂಕ ಮೇ 21, 2023 ರವಿವಾರದಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು ಶ್ರೀ ಯಶಪಾಲ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಖ್ಯಾತ ವೈದ್ಯರಾದ ಡಾ. ಕಬ್ಯಾಡಿ ಹರಿರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ. ಉಡುಪಿ ಎ.ಜಿ.ಎಂ. ಕರ್ನಾಟಕ ಬ್ಯಾಂಕಿನ ಶ್ರೀ ಬಿ. ರಾಜಗೋಪಲ್, ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ದಿಲೀಪ್ ರಾಜ್ ಹೆಗ್ಡೆ ಹಾಗೂ ಪರ್ಕಳ ಪಾಟೇಲ್ ಕ್ಲೋತ್ ಸ್ಟೋರ್ ಮಾಲಕರಾದ ಶ್ರೀ ಗಣೇಶ ಪಾಟೀಲ್ ಇವರುಗಳು ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ಮೇ 21 ಮತ್ತು 22ರಂದು ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಅನುಕ್ರಮವಾಗಿ ‘ಭೀಷ್ಮಾರ್ಜುನ’ ಮತ್ತು ‘ಅತಿಕಾಯ ಕಾಳಗ’ ಹಾಗೂ 23 ಮತ್ತು 24ರಂದು ಬನ್ನಂಜೆ ಶ್ರೀ ಶಿವಗಿರಿ ಸಭಾಭವನದಲ್ಲಿ ಕ್ರಮವಾಗಿ ‘ವಾಮನ ಚರಿತ್ರೆ’ ಮತ್ತು ‘ಸುಧನ್ವಾರ್ಜುನ’, 25 ಮತ್ತು 26ರಂದು ಮಲ್ಪೆ ಬಾಲಕರ ಶ್ರೀರಾಮ ಭಜನಾ ಮಂದಿರದಲ್ಲಿ ಕ್ರಮವಾಗಿ ‘ಕರ್ಣಾರ್ಜುನ’, ‘ಕಚ ದೇವಯಾನಿ’ ಹಾಗೂ ಮೇ 27ರಂದು ಶಿರ್ವದ ಮಹಿಳಾ ಸೌಧದಲ್ಲಿ ‘ಶ್ರೀಕೃಷ್ಣ ಸಂಧಾನ’ ತಾಳಮದ್ದಲೆ ನಡೆಯಲಿದೆ.
ಮೇ 27ರಂದು ಸಂಜೆ 5 ಗಂಟೆಗೆ ನಡೆಯಲಿರುವ ಸಪ್ತಾಹ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ವಹಿಸಲಿದ್ದು, ಕುಂಭಾಶಿ ಧಾರ್ಮಿಕ-ಸಾಮಾಜಿಕ ಮುಖಂಡರಾದ ಶ್ರೀ ಕೃಷ್ಣಪ್ರಸಾದ ಅಡ್ಯಂತಾಯ, ಶೀರ್ವ ಯಕ್ಷಗಾನ ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ಕೆ. ಶ್ರೀಪತಿ ಕಾಮತ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮ ಶೆಟ್ಟಿಯವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ‘ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ’ ಹಾಗೂ ಪಂಡಿತ ‘ಪೆರ್ಲ ಕೃಷ್ಣ ಭಟ್ ಪ್ರಶಸ್ತಿ’ಗಳನ್ನು ಅನುಕ್ರಮವಾಗಿ ಶ್ರೀ ಶ್ರೀಕರ ಭಟ್, ಮುಂಡಾಜೆ ಮತ್ತು ಡಾ. ಪಾದೇಕಲ್ಲು ವಿಷ್ಣು ಭಟ್, ಆತ್ರಾಡಿಯವರಿಗೆ ಪ್ರದಾನ ಮಾಡಲಾಗುವುದು.
ಕೆ. ಶ್ರೀಕರ ಭಟ್, ಮರಾಠೆ
ಅರ್ಥಧಾರಿ, ಪತ್ರಕರ್ತ, ಲೇಖಕ, ವಿಮರ್ಶಕ, ಸಂಘಟಕರಾಗಿರುವ ಇವರು ಕಾರ್ಕಳ ತಾಲೂಕಿನ ಈದು ಗ್ರಾಮದವರು. ಪ್ರಸಕ್ತ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ವಾಸವಾಗಿದ್ದಾರೆ. ‘ರಸಲೋಕ ದೃಷ್ಟಾರ ದೇರಾಜೆ ಸೀತಾರಾಮಯ್ಯ’, ‘ಭದ್ರಗಿರಿ ಉಪಕಥಾ ಪ್ರಪಂಚ’, ‘ಶ್ರೀ ವಿಷ್ಣು ಭಟ್ ಡೊಂಗ್ರೆ’ ಇವರ ಪ್ರಸಿದ್ಧ ಕೃತಿಗಳು. ವಿವಿಧ ಪತ್ರಿಕೆಗಳಲ್ಲಿ ವಿಶೇಷ ಲೇಖನಗಳಾಗಿ, ಅಂಕಣಗಳಾಗಿ ಹಲವು ಬರಹಗಳು ಪ್ರಕಟವಾಗಿವೆ. ಶೇಣಿ, ಸಾಮಗ, ದೇರಾಜೆಯವರಂಥ ಹಿರಿಯ ಅರ್ಥಧಾರಿಗಳ ಕೂಟದಲ್ಲಿ ಭಾಗವಹಿಸಿದ ಹಿರಿಮೆಗೆ ಪಾತ್ರರಾದ ಇವರು ಅನೇಕ ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ನಿರೂಪಿಸಿದ್ದಾರೆ.
ಡಾ. ಪಾದೆಕಲ್ಲು ವಿಷ್ಣು ಭಟ್
ಅರ್ಥಧಾರಿ, ಸಂಶೋಧಕ, ಲೇಖಕ, ಪ್ರವಚನಕಾರ ಡಾ. ಪಾದೆಕಲ್ಲು ವಿಷ್ಣು ಭಟ್ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತರು. ಮೂಲತಃ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದವರಾದ ಇವರು ಪ್ರಸಕ್ತ ಉಡುಪಿ ಸಮೀಪದ ಆತ್ರಾಡಿಯಲ್ಲಿ ವಾಸವಾಗಿದ್ದಾರೆ. ‘ಮಹಾಜನಪದ’, ‘ಭಾನುಮತಿಯ ನೆತ್ತ’, ‘ಪುರಾಣಲೋಕ, ‘ಸಾಹಿತ್ಯಾಧ್ಯಯನ’, ‘ವೈಷ್ಟೋದೇವಿ ಸಂದರ್ಶನ’, ‘ಹಿರಿಯರಿವರು’ ಸೇರಿದಂತೆ 21 ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ 21 ಸಂಪಾದಿತ ಕೃತಿಗಳು ಹಾಗೂ 29 ಸಹ ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಸದಾ ಅಧ್ಯಯನಶೀಲರಾದ ಇವರು ಹಳೆಗನ್ನಡ ಸಾಹಿತ್ಯ, ವ್ಯಾಕರಣದಲ್ಲಿ ವಿದ್ವಾಂಸರು, ಭಾಗವತ ಪುರಾಣದ ಯಕ್ಷಗಾನ ಪ್ರಸಂಗಗಳ ಕುರಿತ ಇವರ ಸಂಶೋಧನ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭ್ಯವಾಗಿದೆ. ಇವರ ಭಾಷಾಶುದ್ಧಿ, ವಾಕ್‌ಸಿದ್ಧಿಗಳೇ ಅರ್ಥಗಾರಿಕೆಯೆಂಬ ಮಾತಿನ ಮಂಟಪದ ಅಲಂಕಾರಗಳು.
ಈ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾರಂಗದ ಪರವಾಗಿ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಕಾರ್ಯದರ್ಶಿಯಾದ ಮುರಲಿ ಕಡೆಕಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಸರ್ವರಿಗೂ ತುಂಬು ಹೃದಯದ ಸ್ವಾಗತವನ್ನು ಬಯಸಿದ್ದಾರೆ.