ಉಡುಪಿ : ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಘಟಕದ ಸಹಭಾಗಿತ್ವದಲ್ಲಿ ಉಡುಪಿ ಅಂಬಾಗಿಲಿನ ಅಮೃತ ಗಾರ್ಡನ್‌ನಲ್ಲಿ ದಿನಾಂಕ : 18-06-2023ರಂದು ಬೆಳಿಗ್ಗೆ ಉಡುಪಿ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ “ನಮ್ಮ ಜಾನಪದ ಕಲೆಗಳು ಈ ಮಣ್ಣಿನ ಸತ್ವವನ್ನು ಹೀರಿಕೊಂಡು ಬೆಳೆದ ಸಂಸ್ಕೃತಿಯಾಗಿವೆ. ಆರಾಧನಾ ಕಲೆಗಳಿರಬಹುದು ಅಥವಾ ಪ್ರದರ್ಶನ ಕಲೆಗಳೇ ಆಗಿರಲಿ ಅವುಗಳಿಗೆ ಕಲಾವಿದನ ಬದುಕನ್ನು ರೂಪಿಸುವ ಶಕ್ತಿಯಿದೆ. ನಮ್ಮಲ್ಲಿ ಅದೆಷ್ಟೋ ಸಾಂಸ್ಕೃತಿಕವಾಗಿ ಶ್ರೀಮಂತವಾದ ಜಾನಪದ ಕಲೆಗಳಿವೆ, ಪ್ರತಿಭಾವಂತ ಕಲಾವಿದರಿದ್ದಾರೆ. ಕಲಾ ತಂಡಗಳಿವೆ. ಕಾಲಕಾಲಕ್ಕೆ ಈ ಕಲಾಪ್ರಾಕಾರಗಳನ್ನು ಯುವ ಪೀಳಿಗೆಗೆ ದಾಟಿಸದಿದ್ದರೆ ಅವು ತೆರೆಯ ಮರೆಯ ಕಾಯಿಗಳಾಗಿ ನಶಿಸಿ ಹೋಗುತ್ತವೆ. ಹೀಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಜಾನಪದ ಪರಿಷತ್‌ನ ಸಹಕಾರದಿಂದ ಇಂತಹ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಿದೆ. ಈಗಾಗಲೇ ಹಲವಾರು ಕಡೆಗಳಲ್ಲಿ ಜಾನಪದ ವೈಭವ ಕಾರ್ಯಕ್ರಮಗಳು, ಜಾನಪದ ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ. ಈ ಕಾರ್ಯಕ್ರಮ ಕೂಡಾ ಇದರ ಮುಂದುವರಿದ ಭಾಗವಾಗಿದೆ” ಎಂದು ಅವರು ತಿಳಿಸಿದರು.
ಜಾನಪದ ಸ್ಪರ್ಧೆಯನ್ನು ನಾಡಿನ ಪ್ರಸಿದ್ಧ ದೈವ ನರ್ತಕ ರವಿ ಪಾಣಾರ ಅವರು ಉದ್ಘಾಟಿಸಿರುವುದು ಬಹಳ ಸಂತೋಷ ತಂದಿದೆ. ಯಾವುದೇ ಕಲಾಪ್ರಕಾರಗಳನ್ನು ಕೇವಲ ಸೇವೆಯ ರೂಪದಲ್ಲಿ ನಡೆಸಿಕೊಂಡರೆ ಸಾಲದು, ಅವುಗಳನ್ನು ಭಕ್ತಿಯಿಂದ, ಶೃದ್ಧೆಯಿಂದ ಆರಾಧಿಸಿಕೊಂಡು ಬಂದರೆ ಅವುಗಳು ಕಲಾವಿದರನ್ನು ಯಶಸ್ವಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತವೆ ಎನ್ನುವುದಕ್ಕೆ ರವಿ ಪಾಣಾರರೇ ಸಾಕ್ಷಿ. ಕರಾವಳಿಯ ಕುಣಿತ ಭಜನೆ, ದೈವಾರಾಧನೆ, ಪಾಡ್ದನಗಳು, ಯಕ್ಷಗಾನ ಮೊದಲಾದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದೈವ ನರ್ತಕ ರವಿ ಪಾಣಾರ ಪಡ್ಡಮ ಅವರು ಮಾತನಾಡಿ, “ದೈವರಾಧಾನೆಯಂತಹ ಆರಾಧನಾ ಕಲೆಗಳನ್ನು ತಮ್ಮ ಪರಂಪರೆಯನ್ನಾಗಿಸಿಕೊಂಡು ಬಂದ ಸಮುದಾಯಗಳಿವೆ. ದೈವರಾಧನೆಯೂ ಆರಾಧನಾ ಕಲೆಯೇ ಆಗಿದೆ, ಮನೋರಂಜನಾ ಕಲೆಯಲ್ಲ. ಈ ಪರಿಮಿತಿಯನ್ನು ಕಲಾವಿದ, ಸಮಾಜ ಅರಿತುಕೊಳ್ಳಬೇಕು. ದೈವರಾಧನೆಯಲ್ಲಿ ಪಾಡ್ದನ ಹೇಳುವ ಕ್ರಮವಿದೆ. 50-60 ದೈವಗಳ ಪಾಡ್ದನ ನಮ್ಮ ಹಿರಿಯರಿಗೆ ಬಾಯಿಪಾಠವಿತ್ತು. ಅವುಗಳದ್ದೇ ಆದ ಲಯ, ರಾಗ, ಶ್ರುತಿಯಿದೆ. ಇದೀಗ ಕಾಲ ಬದಲಾದಂತೆ ಅವುಗಳು ಕೂಡಾ ನಶಿಸಿಹೋಗುತ್ತಿವೆ. ಅವುಗಳನ್ನು ಉಳಿಸುವ ಪ್ರಯತ್ನಗಳು ನಡೆಯಬೇಕು. ಈ ನಿಟ್ಟಿನಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ಟಿಯವರಂತಹ ಕಲಾರಾಧಕರು ಈ ಕಲೆಯ ಬಗ್ಗೆ ಪ್ರೋತ್ಸಾಹ ನೀಡುತ್ತಿರುವುದು ಕಲಾವಿದರಲ್ಲಿ ಹೊಸ ಭರವಸೆ ಮೂಡಿಸಿದೆ. ದೈವಾರಾಧನೆ ಮಾಡುವವರಿಗೆ (ದೈವದ ಚಾಕ್ರಿಯವರು) ಸಮಾಜದಿಂದ ಹೆಚ್ಚಿನ ಪ್ರೋತ್ಸಾಹ, ಗೌರವ ಸಿಗುತ್ತಿರುವುದು ನೆಮ್ಮದಿ ತಂದಿದೆ. ನಮ್ಮ ಹಿರಿಯರು ಬಹಳ ಕಡಿಮೆ ಗೌರವ ಸಂಭಾವನೆಯನ್ನು ಪಡೆದುಕೊಂಡು ಈ ದೈವದ ಚಾಕ್ರಿಯನ್ನು ಭಕ್ತಿಯಿಂದ ನಡೆಸಿಕೊಂಡು ಬಂದಿದ್ದಾರೆ. ಅಂದು ಈ ಸಂಭಾವನೆಯಿಂದ ಜೀವನ ನಡೆಸುವುದು ಕೂಡಾ ಕಷ್ಟಕರವಾಗಿತ್ತು. ಆದರೂ ಅವರು ಈ ಕಲೆಯನ್ನು ಬಿಡದೆ ತಮ್ಮನ್ನು ಸಮರ್ಪಿಸಿಕೊಂಡು, ತಲೆಮಾರಿಗೆ ದಾಟಿಸಿದ್ದಾರೆ. ಹೀಗಾಗಿ ಇಂದಿನ ಆಧುನಿಕತೆಯ ಭರಾಟೆಯ ನಡುವೆಯೂ ದೈವಾರಾಧನೆ ತನ್ನ ಸೊಗಡನ್ನು ಕಳೆದುಕೊಂಡಿಲ್ಲ. ಹೀಗೆಯೇ ಅನ್ಯ ಜಾನಪದ ಕಲೆಗಳಿಗೂ ಕೂಡಾ ಸಮಾಜದ ನಿರಂತರ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ , ಜಾನಪದ ಪರಿಷತ್‌ನ ಉಡುಪಿ ಘಟಕದ ಕಾರ್ಯ ಮಾದರಿಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಡಾ.ಲೇರಿ ಕರ್ನೆಲಿಯೋ, ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಪಾಲ ಸಿ. ಬಂಗೇರ, ಗೌರವಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ರಾಧಾಕೃಷ್ಣ ಮೆಂಡನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರೂಪಿಸಿ, ಪರಿಷತ್ತಿನ ಖಜಾಂಚಿ ಪ್ರಶಾಂತ ಭಂಡಾರಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ವಿವಿಧ ವಿಭಾಗಗಳಲ್ಲಿ ಜಾನಪದ ಸ್ಪರ್ಧೆಗಳು ನಡೆದವು. ವೈಯುಕ್ತಿಕ ವಿಭಾಗದಲ್ಲಿ ಗಾದೆ/ಒಗಟು ಹೇಳುವ ಸ್ಪರ್ಧೆ ಹಾಗೂ ಜಾನಪದ ಗೀತೆ ಸ್ಪರ್ಧೆ ನಡೆಯಿತು. ಸಮೂಹ ವಿಭಾಗದಲ್ಲಿ ಜಾನಪದ ಗೀತೆ, ಜಾನಪದ ವಾದ್ಯ ಹಾಗೂ ಜಾನಪದ ನೃತ್ಯ ನಡೆಯಿತು. ತುಳು ನಾಡಿನ ಅನೇಕ ಜಾನಪದ ತಂಡಗಳು ಅತೀ ಉತ್ಸಾಹದಿಂದ ಪಾಲ್ಗೊಂಡು ಉಣ ಬಡಿಸಿದ ಜಾನಪದ ರಸದೌತಣ. ಹೀಗೆ ಎಲ್ಲವೂ ಅಪಾರ ಜನ ಮೆಚ್ಚುಗೆ ಗಳಿಸಿದವು.
ಅದೇ ದಿನ ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಚೈತನ್ಯ ವೆಲ್‌ಫೇರ್ ಫೌಂಡೇಶನ್ ಮೂಲಕ ಸಮಾಜ ಸೇವೆ ನಡೆಸುತ್ತಿರುವ ಸುನೀಲ್ ಸಾಲ್ಯಾನ್ ಕಡೆಕಾರ್ ಅವರಿಗೆ `ಸೇವಾರತ್ನ ಜಾನಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಪ್ರದಾನ ಮಾಡಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅವರು “ಆಧುನಿಕತೆಯ ಪ್ರಭಾವದಿಂದ ಈ ಮಣ್ಣಿನ ಸಂಸ್ಕೃತಿ ಹಿನ್ನಡೆ ಕಂಡರೂ, ಡಾ.ತಲ್ಲೂರು ಶಿವರಾಮ ಶೆಟ್ಟಿಯವರಂತರ ಸಂಸ್ಕೃತಿಯ ಪ್ರೋತ್ಸಾಹಕರಿಂದಾಗಿ ಮತ್ತೆ ಜಾಗೃತಾವಸ್ಥೆಗೆ ತಲುಪಿರುವುದು ಶ್ಲಾಘನೀಯ. ಕುಣಿತ ಭಜನೆ, ಯಕ್ಷಗಾನ, ಜಾನಪದ ಕಲೆಗಳ ಪ್ರದರ್ಶನ, ಜಾನಪದ ಕಲಾವಿದರಿಗೆ ಪ್ರಶಸ್ತಿ, ಸಾಮಾಜಿಕ ನೆರವಿನ ಮೂಲಕ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮಾದರಿ ಸಮಾಜ ಸೇವೆ ನಡೆಸುತ್ತಿದೆ” ಎಂದು ಕೊಂಡಾಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, “ನಾಗರಿಕತೆಯ ಉತ್ತುಂಗ ಕಂಡ ಸಂಸ್ಕೃತಿ ನಮ್ಮದು. ಜಾನಪದ ಗ್ರಂಥಸ್ಯ ಅಲ್ಲ, ಅದು ಕಂಠಸ್ಯ. ಜನರ ನಡುವೆ, ಜನರ ಭಾವನೆಗಳನ್ನು ಅರಿತು ಈ ಜನಪದ ಕಲೆಗಳಿಗೆ ಮೂರ್ತರೂಪ ಕೊಟ್ಟವರು ಜನಪದರು. ಇಂದು ಮೊಬೈಲ್ ಯುಗದಲ್ಲಿ ಕಳೆದುಹೋಗುತ್ತಿರುವ ಯುವ ಪೀಳಿಗೆಯನ್ನು ಮರಳಿ ನಮ್ಮ ಸಂಸ್ಕೃತಿಯತ್ತ ಹೊರಳಿಸಲು ಇಂತಹ ಕಾರ್ಯಕ್ರಮಗಳು ಬೇಕು. ಈ ನಿಟ್ಟಿನಲ್ಲಿ ಡಾ.ತಲ್ಲೂರು ಅವರ ಪ್ರಯತ್ನ ಅಭಿನಂದನೀಯ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಮಾತನಾಡಿ “ಕರಾವಳಿಯಲ್ಲಿ ಯಕ್ಷಗಾನ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಮೊದಲಾದ ಕಲಾಪ್ರಕಾರಗಳಿಗೆ ಪ್ರೋತ್ಸಾಹ ಹೆಚ್ಚು ದೊರೆಯುತ್ತದೆ ಆದರೆ ಜಾನಪದ ಕಲೆಗಳಿಗೆ ಈ ಪ್ರೋತ್ಸಾಹ ದೊರೆಯುತ್ತಿಲ್ಲ. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮೇಲೆ ನಮ್ಮ ಜನಪದ ಮೂಲ ಸಂಸ್ಕೃತಿಯ ಕಲೆಯ ಬಗ್ಗೆ ಜನರಿಗೆ ಅರಿವು ಮೂಡತೊಡಗಿದೆ” ಎಂದರು.
ಮಾಹೆ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫೀಲೋಸಫಿಕಲ್ ಆರ್ಟ್ಸ್ ಆಂಡ್ ಸೈನ್ಸ್ ಇದರ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ, ನಗರಸಭೆ ಸದಸ್ಯ ವಿಜಯ ಕೊಡವೂರು ಅವರು ಪ್ರಸ್ತುತ ಕಾಲಘಟ್ಟದಲ್ಲಿ ಜಾನಪದದ ಮಹತ್ವವನ್ನು ವಿವರಿಸಿದರು.
ಹಿರಿಯ ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಅವರು ಮಾತನಾಡಿ “ನಮ್ಮ ಜಾನಪದ ಕಲೆಗಳು ಪ್ರಕೃತಿ ಆರಾಧನೆಯನ್ನು ಕಲಿಸುತ್ತವೆ. ಜನಪದರ ಜೀವನ ಶೈಲಿ, ಆಹಾರ, ಔಷಧಿ, ಉಡುಗೆ ತೊಡುಗೆ ಎಲ್ಲವೂ ಪ್ರಕೃತಿ ಮೂಲಗಳಿಂದಲೇ ಆಗಿದೆ. ಆದ್ದರಿಂದ ಮೊದಲು ನಾವು ನಮ್ಮ ಜನಪದ ಮೂಲವನ್ನು ಅರಿತುಕೊಳ್ಳಬೇಕು” ಎಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ “ಜಾನಪದ ಸ್ಪರ್ಧೆಯಲ್ಲಿ ಭಾಗವಹಿಸಿದ ಉತ್ಸಾಹಿ ಯುವಕರ ಕಲಾತಂಡಗಳನ್ನು ಗಮನಿಸಿ, ಪ್ರತೀ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲೆಯಲ್ಲಿ ನಮ್ಮ ಜನಪದ ಕಲೆಗಳ ಬಗ್ಗೆ ಅರಿವು, ಪ್ರದರ್ಶನಕ್ಕೆ ಟ್ರಸ್ಟ್ ಹಾಗೂ ಪರಿಷತ್ ಮೂಲಕ ಎಲ್ಲಾ ನೆರವು ನೀಡಲಾಗುವುದು” ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ತಲ್ಲೂರ್ ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಜಾನಪದ ಪರಿಷತ್ತಿನ ಉಡುಪಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಲಯನ್ಸ್ ಮುಖಂಡ ಎನ್.ಎಂ.ಹೆಗ್ಡೆ, ಡಾ.ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಾನಪದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಾದೆ-ಒಗಟು ಹಾಗೂ ಜಾನಪದ ಗೀತೆ ವೈಯುಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.3,000/-, ದ್ವಿತೀಯ ರೂ.2,000/- ಹಾಗೂ ತೃತೀಯ ರೂ.1,000/- ನಗದು ಪುರಸ್ಕಾರ, ಜಾನಪದ ಗೀತೆ ಹಾಗೂ ಜಾನಪದ ವಾದ್ಯ ಸಮೂಹ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.5,000/-, ದ್ವಿತೀಯ ರೂ.3,೦೦೦/- ಹಾಗೂ ತೃತೀಯ ರೂ.2,೦೦೦/- ಹಾಗೂ ಜಾನಪದ ನೃತ್ಯ ಸಮೂಹ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.10,೦೦೦/-, ದ್ವಿತೀಯ ರೂ.7,500/- ಹಾಗೂ ತೃತೀಯ ಬಹುಮಾನವಾಗಿ ರೂ.5,೦೦೦/- ನೀಡಿ ಪುರಸ್ಕರಿಸಲಾಯಿತು. ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಮಾಹೆ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫೀಲೋಸಫಿಕಲ್ ಆರ್ಟ್ಸ್ ಆಂಡ್ ಸೈನ್ಸ್ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ, ಹಿರಿಯ ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ, ತಲ್ಲೂರ್ ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಚೈತನ್ಯ ವೆಲ್‌ಫೇರ್ ಫೌಂಡೇಶನ್‌ನ ಸುನೀಲ್ ಸಾಲ್ಯಾನ್ ಕಡೆಕಾರ್, ಜಾನಪದ ಪರಿಷತ್ತಿನ ಉಡುಪಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಲಯನ್ಸ್ ಮುಖಂಡ ಎನ್.ಎಂ.ಹೆಗ್ಡೆ, ಡಾ.ಅನುಪಮಾ ಉಪಸ್ಥಿತರಿದ್ದರು.
ಸ್ಪರ್ಧಾ ಫಲಿತಾಂಶ :
ಗಾದೆ/ಒಗಟು ಸ್ಪರ್ಧೆ : ಪ್ರಥಮ ಪೂಜಾ ಪಿ. ಶೆಟ್ಟಿ, ದ್ವಿತೀಯ ಅಖಿಲಾ ಹೆಗ್ಡೆ ಹಾಗೂ ತೃತೀಯ ಪಲ್ಲವಿ.
ಜಾನಪದ ಗೀತೆ (ವೈಯುಕ್ತಿಕ ): ಪ್ರಥಮ ಅಖಿಲಾ ಹೆಗ್ಡೆ, ದ್ವಿತೀಯ ಭಗವಾನ್ ಹಾಗೂ ತೃತೀಯ ಭಾರ್ಗವಿ ಮತ್ತು ಅರುಣ್ ಬಂಗೇರ.
ಜಾನಪದ ಗೀತೆ (ಸಮೂಹ ) : ಪ್ರಥಮ ಭಾರ್ಗವಿ ಮತ್ತು ತಂಡ, ದ್ವಿತೀಯ ಸರಸ್ವತಿ ಜಾನಪದ ಕಲಾತಂಡ ಮಲ್ಪೆ ಹಾಗೂ ತೃತೀಯ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು, ಉಡುಪಿ.
ಜಾನಪದ ಸಮೂಹ ವಾದ್ಯ ಸ್ಪರ್ಧೆ : ಪ್ರಥಮ ನಿತ್ಯಶ್ರೀ ಜಾನಪದ ಕಲಾತಂಡ ಕಾಪು, ದ್ವಿತೀಯ ಭಾರ್ಗವಿ ಮತ್ತು ತಂಡ ಹಾಗೂ ತೃತೀಯ ಸರಸ್ವತಿ ಜಾನಪದ ಕಲಾತಂಡ ಕಾಪು.
ಜಾನಪದ ಸಮೂಹ ನೃತ್ಯ ಸ್ಪರ್ಧೆ : ಪ್ರಥಮ ನಿತ್ಯಶ್ರೀ ಜಾನಪದ ಕಲಾತಂಡ ಕಾಪು, ದ್ವಿತೀಯ ಮಹಾಲಿಂಗೇಶ್ವರ ಜಾನಪದ ಕಲಾತಂಡ ಕಾರ್ಕಳ ಹಾಗೂ ತೃತೀಯ ಸರಸ್ವತಿ ಜಾನಪದ ಕಲಾ ತಂಡ ಕಾಪು.
ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿ, ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅನುಷಾ ಆಚಾರ್ಯ ಹಾಗೂ ಹೇಮಂತ್ ಪರಿಚಯಿಸಿ, ಖಜಾಂಚಿ ಪ್ರಶಾಂತ್ ಭಂಡಾರಿ ವಂದಿಸಿದರು.