“ಗುರು ಗೋವಿಂದ ದೋವು ಖಡೆ ಕಾಕೆ ಲಾಗೂ ಪಾಯ್
ಬಲಿಹಾರಿ ಗುರು ಆಪೆನೆ ಗೋವಿಂದ ದಿಯೋ ಬತಾಯ್.”
“ಗುರು ಮತ್ತು ದೇವರು ಇಬ್ಬರೂ ಜೊತೆಯಾಗಿ ಬಂದರೆ ಮೊದಲು ಗುರುವಿನ ಪಾದಕ್ಕೆ ನಮಸ್ಕರಿಸುವೆ. ಏಕೆಂದರೆ ದೇವರ ಅಸ್ತಿತ್ವದ ತಿಳುವಳಿಕೆ ನೀಡಿದವರು ಗುರು. ಭೂಮಿಯನ್ನು ಕಾಗದ ಮಾಡಿ ಏಳು ಸಮುದ್ರವನ್ನು ಶಾಯಿ ಮಾಡಿ ಬರೆದರೂ ಗುರುವಿನ ಗುಣಗಾನ ಮಾಡಲಿಕ್ಕಾಗದು” ಎಂದು ಸಂತ ಕಬೀರರು ಗುರುವಿನ ಸ್ಥಾನದ ಮಹತ್ವವನ್ನು ತಿಳಿಸಿದ್ದಾರೆ. ರಾಜಾ ಅಲೆಗ್ಸಾಂಡರ್ ತನ್ನ ಗುರು ಅರಿಸ್ಟಾಟಲ್ ನ ಬಗ್ಗೆ ಹೇಳುತ್ತಾ “ತಂದೆ ಸ್ವರ್ಗದಿಂದ ಭೂಮಿಗೆ ತಂದ, ಗುರುವು ಸ್ವರ್ಗದೆತ್ತರಕ್ಕೆ ಏರಿಸಿದ. ತಂದೆ ನಶ್ವರ ದೇಹ ಕೊಟ್ಟರೆ ಗುರುವು ಅಮರ ಸಿರಿಯನ್ನೂ ದಿವ್ಯ ಜೀವನವನ್ನೂ ನೀಡಿದ” ಎನ್ನುತ್ತಾನೆ.
ಒಬ್ಬ ಅಶಕ್ತನನ್ನು ಶಕ್ತನನ್ನಾಗಿಸುವ, ಅವಿವೇಕಿಯನ್ನು ವಿವೇಕಿಯನ್ನಾಗಿಸುವ ಶಕ್ತಿ ಗುರುವಿಗಿದೆ. ಶಿಕ್ಷಣ ಸಂಸ್ಥೆಯ ಪಾಠಪಟ್ಟಿಯಲ್ಲಿರುವ ಪಾಠಗಳನ್ನು ಪೂರ್ಣಗೊಳಿಸುವುದಷ್ಟೇ ಶಿಕ್ಷಕನ ಕರ್ತವ್ಯವಾಗಿರಬಾರದು. ಪ್ರತಿಭಾವಂತ ಶಿಕ್ಷಕ ತನ್ನ ಪ್ರತಿಭೆಯ ಪ್ರಭಾವದಿಂದ ವಿದ್ಯಾರ್ಥಿಗಳನ್ನು ಪಾಠ ಕೇಳಿ ಅಂಕ ಪಡೆಯುವುದಕ್ಕೆ ತಯಾರು ಮಾಡುವುದರೊಂದಿಗೆ, ಅವನಲ್ಲಿರುವ ಪ್ರತಿಭೆಯನ್ನು ಹೊರ ತಂದು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸಬೇಕು. ಎಷ್ಟೋ ಮಂದಿ ಶಿಕ್ಷಕರು ಈ ಕೆಲಸವನ್ನು ಮಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅಧ್ಯಾಯದ ಪುಟಗಳನ್ನು ತೆರೆದಿದ್ದಾರೆ.
ಶ್ರೀಮತಿ ವಿಜಯಲಕ್ಷ್ಮೀ ಎಚ್.ಎನ್. ಇಂಥಹವರಲ್ಲಿ ಒಬ್ಬರು. ಶ್ರೀ ನಂಜುಂಡಯ್ಯ ಹಾಗೂ ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಸುಪುತ್ರಿಯಾದ ಇವರು ಮೂಲತಃ ಬೆಂಗಳೂರಿನವರು. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಇವರು ಗಮಕ ಕಲೆಯಲ್ಲಿಯೂ ತರಬೇತಿ ಪಡೆದಿದ್ದಾರೆ. ಎರಡು ವರ್ಷಗಳ ಕಾಲ ‘ಕುಮಾರವ್ಯಾಸ ಭಾರತ’ ಮತ್ತು ‘ತೊರವೆ ರಾಮಾಯಣ’ ಕಾವ್ಯಗಳ ವಾಚನ ಕಾರ್ಯಕ್ರಮವನ್ನು ಮನೆ ಮನೆಗಳಲ್ಲಿ ಮಾಡಿದ ಹೆಗ್ಗಳಿಕೆ ಇವರದ್ದು. ಗಮಕಕ್ಕೆ ವ್ಯಾಖ್ಯಾನಗಳನ್ನು ಈಗಲೂ ನೀಡುತ್ತಿದ್ದಾರೆ.
ಹತ್ತು ವರ್ಷ ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಹನ್ನೊಂದು ವರ್ಷ ಪದ್ಮನಾಭ ನಗರದ ಡೆಕ್ಕನ್ ಅಂತರರಾಷ್ಟ್ರೀಯ ಶಾಲೆ ಮತ್ತು ಮೂರು ವರ್ಷ ರಾಜಾಜಿ ನಗರದ ಸೇಂಟ್ ಆನ್ಸ್ ಶಾಲೆಯಲ್ಲಿ ಅಧ್ಯಾಪಿಕೆಯಾಗಿ ಒಟ್ಟು 24 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಇವರು ಐ.ಸಿ.ಎಸ್.ಸಿ. ಕನ್ನಡ ಪಠ್ಯ ಪುಸ್ತಕದ ಕೈಪಿಡಿ ರಚಿಸಿದ್ದಾರೆ. ಇವರ ಕವನ ಹಾಗೂ ವೈಚಾರಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಎಳೆಯ ವಯಸ್ಸಿನಿಂದಲೇ ಲಲಿತ ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಇವರು ಸಂಗೀತ ಶಿಕ್ಷಣವನ್ನು ಪೂರ್ತಿಗೊಳಿಸಲಾಗದೆ ನಿರಾಶಾಭಾವ ತಾಳಿದ್ದರು. ಮಕ್ಕಳು, ಮೊಮ್ಮಕ್ಕಳು ಅದನ್ನು ಮೈಗೂಡಿಸಿಕೊಂಡು ಕ್ರಿಯಾಶೀಲರಾಗಿರುವುದು ಇವರಿಗೆ ಹೆಮ್ಮೆ ತಂದಿದೆ. ಸಂಗೀತ ನೃತ್ಯ ಕಲೆಗಳಲ್ಲಿ ಆಸಕ್ತಿ ಇರುವ ಇವರು ತನ್ನ ವಿದ್ಯಾರ್ಥಿಗಳನ್ನು ಭಾಷಣ, ಸಂಗೀತ, ನೃತ್ಯ ಮತ್ತು ಚರ್ಚಾ ಸ್ಪರ್ಧೆಗಳಿಗೆ ತಯಾರುಗೊಳಿಸಿ, ಬಹುಮಾನಿತರಾಗುವಲ್ಲಿ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಗೆದ್ದು ಬಂದಾಗ ಆಗುವ ಸಂತೋಷ, ವಿದ್ಯಾರ್ಥಿಗಳ ಒಡನಾಟದಿಂದ ಅವರು ತೋರುವ ಪ್ರೀತಿ ಮತ್ತು ಬೆಳಸಿಕೊಂಡ ಗೌರವ ಸಾರ್ಥಕ ಭಾವ ತಂದಿದೆ ಎನ್ನುತ್ತಾರೆ ವಿಜಯಲಕ್ಷ್ಮಿಯವರು.
ಅಜ್ಜ, ತಂದೆ, ದೊಡ್ಡಪ್ಪ ಅಣ್ಣ ಎಲ್ಲರ ಒಲವೂ ಅಧ್ಯಾಪಕರಾಗಿ ದುಡಿಯುವತ್ತ ಇದ್ದ ಕುಟುಂಬದಲ್ಲಿ ವಿಜಯಲಕ್ಷ್ಮೀಯವರು ಜನಿಸಿ, ಶಿಕ್ಷಕಿಯಾಗಿ ಮುಂದುವರಿಯಲು ಪ್ರೇರಣೆ ಪಡೆದಿದ್ದಾರೆ. ಕಾವ್ಯವಾಚನದಲ್ಲಿ ವ್ಯಾಖ್ಯಾನ ಕಲೆಯನ್ನು ಮೈಗೂಡಿಸಿಕೊಂಡ ಇವರು ಹಳೆಗನ್ನಡ ಪಾಠ ಮಾಡುವಾಗ ಅಗತ್ಯ ಬಿದ್ದಾಗ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಿ, ಮಕ್ಕಳ ಏಕಾಗ್ರತೆಯನ್ನು ಕಾಪಾಡಿಕೊಳ್ಳುವಂತೆ ಮಾಡುತ್ತಿದ್ದರು. ಆ ಕಥೆಗಳಲ್ಲಿ ಬರುವ ಜೀವನ ಮೌಲ್ಯವನ್ನು ತಿಳಿಸಿ ಹೇಳುವಾಗ ವಿದ್ಯಾರ್ಥಿಗಳು ಆಸಕ್ತಿವಹಿಸುತ್ತಿದ್ದರು. ವಿಜಯಲಕ್ಷ್ಮೀಯವರ ಮಾತುಗಳಲ್ಲಿ ಹೇಳುವುದಾದರೆ ‘ಇಂದಿನ ಮಕ್ಕಳಿಗೆ ಇವೆಲ್ಲ ಬೇಡ ಎನ್ನುವ ಮಾತು ಸುಳ್ಳು. ಹೇಳುವ ರೀತಿಯಲ್ಲಿ ಹೇಳಿದರೆ ಮಕ್ಕಳ ಆಸಕ್ತಿ ಕೆರಳುತ್ತದೆ. ಅವರು ಹೇಳಿದ್ದನ್ನು ಸ್ವೀಕರಿಸುತ್ತಾರೆ’.
ಲಲಿತ ಕಲೆಗಳಲ್ಲಿ ತೊಡಗಿಸಿಕೊಂಡ ಮಕ್ಕಳಲ್ಲಿ ಬೇಡದ ವಿಚಾರಕ್ಕೆ ಸಮಯವಿರುವುದಿಲ್ಲ. ಆ ಕಲೆಗಳಲ್ಲಿನ ತಾಳಗತಿಗಳ ಲೆಕ್ಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿರುತ್ತದೆ. ಲಲಿತ ಕಲೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ ಎಂಬ ಮಾತಿದೆ. ಅದು ಸಂಪೂರ್ಣ ಸುಳ್ಳು. ಈ ರೀತಿ ತೊಡಗಿಸಿಕೊಂಡ ವಿದ್ಯಾರ್ಥಿಗಳೇ ಕಲಿಕೆಯಲ್ಲಿ ಮುಂದಿರುತ್ತಾರೆ. ಪುಸ್ತಕದ ಹುಳುವಾಗದೆ ಲೋಕಜ್ಞಾನ ಹೊಂದಿರುತ್ತಾರೆ. ಜೀವನ ಕಲೆ ಅವರಿಗೆ ಸಿದ್ಧಿಸಿದೆ. ತನ್ನ ಸ್ವತಃ ಮೊಮ್ಮಕ್ಕಳು ಸಂಗೀತ, ಶಾಸ್ತ್ರೀಯ ನೃತ್ಯ, ಕೊಳಲು ವಾದನ ಇಷ್ಟೆಲ್ಲಾ ತರಗತಿಗಳಿಗೆ ಹೋಗಿ ಅಭ್ಯಾಸ ಮಾಡುವುದರೊಂದಿಗೆ ಸ್ಪರ್ಧೆಗಳಲ್ಲೂ ಪ್ರಥಮ ಬಹುಮಾನವೇ. ಆದರೆ ಶಾಲೆಯ ಪಾಠ ಪ್ರವಚನಗಳಲ್ಲಿ ಹಿಂದುಳಿಯದೆ, ಪ್ರಥಮ ಸ್ಥಾನ ಕಾಯ್ದುಕೊಂಡದ್ದು ಹೆಮ್ಮೆಯ ವಿಚಾರ. ಕಲೆ ಯಾವತ್ತೂ ಕಲಿಕೆಗೆ ಪೂರಕವಾಗಿರುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎನ್ನುತ್ತಾರೆ ವಿಜಯಲಕ್ಷ್ಮೀಯವರು.
ಒಬ್ಬ ಮಹಿಳೆಯಾಗಿ ತನ್ನ ಹೆಚ್ಚಿನ ಸಮಯವನ್ನು ಶಾಲೆಗೆ ವಿನಿಯೋಗಿಸುತ್ತಿರುವ ವಿಜಯಲಕ್ಷ್ಮೀಯವರು ಮನೆ, ಸಂಸಾರ, ಶಾಲೆ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೋ ಎಂಬ ಸಂಶಯಕ್ಕೆ ಅವರು ನೀಡಿದ ಉತ್ತರ “ಪೂರ್ವಯೋಜಿತವಾಗಿ ಕೆಲಸಗಳನ್ನು ಮಾಡಿಕೊಳ್ಳುತ್ತಿರುವುದು. ಶಾಲೆಯಲ್ಲಿ ವೇಳಾಪಟ್ಟಿ ಹಾಕಿಕೊಂಡಂತೆ ಮನೆಯಲ್ಲೂ ವೇಳಾಪಟ್ಟಿ ಹಾಕಿಕೊಂಡು ಅದರ ಪ್ರಕಾರವೇ ಹೋಗುವುದರಿಂದ ತೊಂದರೆ ಆಗುವುದಿಲ್ಲ.” ಜೀವನ ಕಹಿ ಸಿಹಿಗಳ ಮಿಶ್ರಣ. ಶಿಕ್ಷಕ ವೃತ್ತಿಯಲ್ಲೂ ಅದು ಹೊಸದಲ್ಲ. ‘ಉತ್ತಮ ಪಾಠ ಯೋಜನೆ ತಯಾರಿಗೆ’ ಪ್ರೋತ್ಸಾಹಕರ ಬಹುಮಾನ ನೀಡುವ ಒಂದು ಕ್ರಮ ಇದೆ. ನನ್ನ ಪಾಠ ಯೋಜನೆ ತೋರಿಸಿ ತಾನೇ ತಯಾರಿಸಿದ್ದೆಂದು ಹೇಳಿ ಪುರಸ್ಕಾರ ಪಡೆದು ಶಬಾಸ್ ಗಿರಿಗಿಟ್ಟಿಸಿಕೊಂಡ ನೋವು ಒಂದೆಡೆಯಾದರೆ – ಶಸ್ತ್ರಚಿಕಿತ್ಸೆಯ ನಂತರ ಮೇಲೆ ತರಗತಿಗಳಿಗೆ ಏರಿ ಹೋಗಲಾರದ ನನಗೆ ಕೆಳಗಿನ ಕೊಠಡಿ ತೆರೆವು ಮಾಡಿಕೊಟ್ಟು ವಿದ್ಯಾರ್ಥಿಗಳು ತೋರಿದ ಪ್ರೀತಿ, ವಿಚಾರಿಸಿಕೊಂಡ ಬಗೆ ಹಾಗೂ ವ್ಯವಸ್ಥೆ ಕಲ್ಪಿಸಿಕೊಟ್ಟ ಶಾಲಾ ಮುಖ್ಯಸ್ಥರ ಬಗ್ಗೆ ಗೌರವ ಮೂಡಿದೆ ಎನ್ನುತ್ತಾರೆ.