08.05.2001ರಂದು ಉಡುಪಿಯ ಕುಂಜಾರುಗಿರಿಯ ವಿಷ್ಣುಮೂರ್ತಿ ಆಚಾರ್ಯ ಹಾಗೂ ಸ್ನೇಹ ಆಚಾರ್ಯ ಇವರ ಮಗಳಾಗಿ ಜನನ. ಉಡುಪಿಯ ಪೂರ್ಣಪ್ರಜ್ಞಾ ಕಾಲೇಜ್ ನಲ್ಲಿ BA ಇನ್ ಇಂಗ್ಲಿಷ್ ಮುಗಿಸಿ, ಪ್ರಸ್ತುತ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ Masters Of Performing Arts- Bharathanatyam ಹಾಗೂ Masters In English Literature ವಿಷಯದಲ್ಲಿ ಉನ್ನತ ಪದವಿಯ ವ್ಯಾಸಂಗವನ್ನು ಮಾಡುತ್ತಿದ್ದಾರೆ.
ಶಾಲೆಯಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಮುಖಾಂತರ ನಡೆದ ಪ್ರತೀ ಶಾಲೆಗೂ ಬಡಗು ಯಕ್ಷ ಶಿಕ್ಷಣದ “ಯಕ್ಷ ಕಿಶೋರ” ಎಂಬ ಕಾರ್ಯಕ್ರಮದಿಂದ ೩ನೇ ತರಗತಿಯಲ್ಲಿ ಇರುವಾಗ ಯಕ್ಷಗಾನ ಕಲೆಗೆ ಪಾದಾರ್ಪಣೆಯಾಯಿತು. ಆಗ ಗುರುಗಳಾಗಿ ಶ್ರೀ ಮಂಜುನಾಥ ಕುಲಾಲ ಐರೋಡಿ, ಶ್ರೀ ಕೃಷ್ಣಮೂರ್ತಿ ಉರಾಳ ಹಾಗೂ ಶ್ರೀ ನರಸಿಂಹ ತುಂಗ ಅವರ ಬಳಿ ಬಡಗುತಿಟ್ಟು ಯಕ್ಷಗಾನವನ್ನು ಅಭ್ಯಾಸ ಮಾಡಿ, ಪ್ರಸ್ತುತ ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ ಅವರ ಗರಡಿಯಲ್ಲಿ ತೆಂಕುತಿಟ್ಟು ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ಮೇಲೆ ಆಸಕ್ತಿ ಬೆಳೆದಿತ್ತು. ತಂದೆ, ತಾಯಿ, ಅಜ್ಜ, ಅಜ್ಜಿ ಹೀಗೆ ಮನೆಯಲ್ಲಿ ಇರುವ ಎಲ್ಲರಿಗೂ ಯಕ್ಷಗಾನ ಎಂದರೆ ಬಹಳ ಅಚ್ಚಮೆಚ್ಚು. ಉಡುಪಿಯ ರಾಜಾಂಗಣದಲ್ಲಿ ಯಾವುದೇ ಯಕ್ಷಗಾನ ಪ್ರದರ್ಶನವಿದ್ದರೂ ಕರೆದುಕೊಂಡು ಹೋಗುತ್ತಿದ್ದರು. ತೆಂಕುತಿಟ್ಟು ಯಕ್ಷಗಾನದ ಮೇಲೆ ಬಹಳ ಆಸಕ್ತಿ. ಆದರೆ ಬಡಗು ಯಕ್ಷ ಶಿಕ್ಷಣ ದೊರೆಯಲು ಪ್ರಾರಂಭವಾದಾಗ ತಂದೆ, ತಾಯಿ, ಅಜ್ಜ, ಅಜ್ಜಿ, ಎಸ್.ವಿ ಭಟ್, ಮುರಳಿ ಕಡೇಕರ್, ಹೆಚ್.ಎನ್. ವೆಂಕಟೇಶ್ ಹೀಗೆ ಹಲವಾರು ಜನರ ಪ್ರೋತ್ಸಾಹ ಹೊಸ ಪ್ರೇರಣೆ ಹಾಗೂ ಹುರುಪು ತಂದಿತು. ಯಾವುದಾದರು ವೇಷ, ಪಾತ್ರ ರಂಗದಲ್ಲಿ ಕುಣಿಯುವಾಗ ಅದು ನಾನು ಮಾಡಿದರೆ ಹೇಗೆ…? ಹೇಗೆಲ್ಲಾ ಇದರಲ್ಲಿ ಉನ್ನತ ಪ್ರದರ್ಶನಕ್ಕೆ ಆಸ್ವಾದನೆ ಕೊಡಬಹುದು..? ಎಂಬೆಲ್ಲಾ ಆಲೋಚನೆಗಳು ಬರಲು ಪ್ರಾರಂಭವಾಯಿತು. ರಂಗಕ್ಕೆ ಬಂದ ಮೇಲೆ ಗುರುಗಳ ಪ್ರೇರಣೆ, ಅವರಿಂದ ಒಬ್ಬ ಕಲಾವಿದರ ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ಅರ್ಥೈಸಿಕೊಂಡೆ ಎಂದು ವಿಂಧ್ಯಾ ಅವರು ಹೇಳುತ್ತಾರೆ.
ರಂಗಕ್ಕೆ ಹೋಗುವ ಮುನ್ನ ಪ್ರಸಂಗ ಹಾಗೂ ಪಾತ್ರದ ಸಂಪೂರ್ಣ ಅರಿವು ಅಗತ್ಯ. ಪ್ರಸಂಗದ ಪದ್ಯಗಳನ್ನು ತಿಳಿದು ಸರಿಯಾದ ಹಿನ್ನೆಲೆ ಹಾಗೂ ಅರ್ಥ, ಅದರೊಂದಿಗೆ ಸೂಕ್ಷ್ಮ ವಿಚಾರಗಳ ತಿಳುವಳಿಕೆ, ಎದುರು ವೇಷದವರೊಂದಿಗೆ ಮಾತುಕತೆ, ಭಾಗವತರಿಂದ ಹಾಗೂ ಗುರುಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ರಂಗಕ್ಕೆ ಏರುತ್ತೇನೆ. ಮಾನಸಿಕವಾಗಿ ಆ ಪಾತ್ರವನ್ನು ನಾನೇ ಎಂದು ತಿಳಿದು ರಂಗಕ್ಕೆ ಹೋದಾಗ ಏನೋ ಒಂದು ರೀತಿಯ ಬೇರೆ ಪ್ರಪಂಚಕ್ಕೆ ಗಮಿಸಿದ ಅನುಭವವಾಗುವುದು ಸಹಜ.
ದಕ್ಷಯಜ್ಞ, ಮಾನಿಷಾದ, ಶ್ರೀ ದೇವಿ ಮಹಾತ್ಮೆ, ಬಬ್ರುವಾಹನ ಕಾಳಗ, ಕೃಷ್ಣ ಲೀಲೆ – ಕಂಸ ವಧೆ, ಕೃಷ್ಣ ಪಾರಿಜಾತ, ಗಜೇಂದ್ರ ಮೋಕ್ಷ ಇತ್ಯಾದಿ ನೆಚ್ಚಿನ ಪ್ರಸಂಗಗಳು. ದಾಕ್ಷಾಯಿಣಿ, ಕೃಷ್ಣಾರ್ಜುನದ ಕೃಷ್ಣ, ಮಾನಿಷಾದದ ಸೈರಿಣಿ ಹಾಗೂ ಶತ್ರುಘ್ನ, ದೇವಿ ಮಹಾತ್ಮೆಯ ಚಂಡ ಮುಂಡ, ರಕ್ತಬೀಜ, ಬಬ್ರುವಾಹನ, ಕೃಷ್ಣ, ಸತ್ಯಭಾಮೆ, ಹುಹು ಗಂಧರ್ವ ಇತ್ಯಾದಿ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನವನ್ನು ಬಹಳ ಗೌರವದಿಂದ ಕಾಣುವ ಸ್ಥಿತಿ ಒದಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಕೇವಲ ಮನೋರಂಜನೆ ಅಲ್ಲದೆ ಜೀವನದ ಪಾಠ ಅಥವಾ ಜೀವನವನ್ನೇ ರಂಗದಲ್ಲಿ ಪ್ರದರ್ಶಿಸುವ ಕಲೆಯಾಗಿರುವ ಯಕ್ಷಗಾನವನ್ನು ಕೀಳರಿಮೆಯಿಂದ ಕಾಣುವ ಕಾಲವೊಂದಿತ್ತು. ಲಾಕ್ ಡೌನ್ ನಲ್ಲಿ ಹಲವಾರು ಆನ್ಲೈನ್ ಕಾರ್ಯಕ್ರಮದ ಪ್ರಭಾವದಿಂದಾಗಿ ಯಕ್ಷಗಾನದ ಪ್ರೇಕ್ಷಕರೂ ಹೆಚ್ಚಾಗಿ ಪ್ರದರ್ಶನದ ಗುಣಮಟ್ಟವು ಏರಿದೆ. ಇದು ಬಹಳ ಪ್ರಶಂಸನೀಯ ಎಂದು ಹೇಳುತ್ತಾರೆ ವಿಂಧ್ಯಾ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ನಿಮ್ಮ ಅಭಿಪ್ರಾಯ:-
ಯಕ್ಷಗಾನದ ಪ್ರೇಕ್ಷಕರು ಪ್ರದರ್ಶನದ ನಂತರ ಆ ಕಥೆಯ ಸತ್ವವನ್ನು ತಮ್ಮದಾಗಿಸಿಕೊಳ್ಳಬೇಕು ಎಂಬುದು ಪ್ರತೀ ಕಲಾವಿದನ ಆಸೆ. ಈಗ ಹಾಗೆಯೇ ಆಗುತ್ತಿದೆ. ಜನರಲ್ಲಿ ಕಲೆ, ಕಲಾವಿದ, ಕಥೆ ಇವುಗಳಿಗೆ ಮಾನ್ಯತೆ ದೊರೆಯುತ್ತಿದೆ. ಜನರು ಕೇವಲ ಆನಂದಕ್ಕಾಗಿ ಅಲ್ಲದೆ ಜ್ಞಾನಕ್ಕಾಗಿಯೂ ಯಕ್ಷಗಾನದ ಸಹಾಯ ಅಪೇಕ್ಷಿಸುತ್ತಿದ್ದಾರೆ. ಇದರಿಂದಾಗಿ ಕಲಾವಿದನು ತನ್ನ ಪಾತ್ರಕ್ಕೆ ಇನ್ನಷ್ಟು ಹೆಚ್ಚಿನ ಪರಿಶ್ರಮ ಮಾಡುವುದು ಕಾಣುತ್ತದೆ. ಯಕ್ಷಗಾನ ಅಳಿಯುವ ಕಲೆಯಲ್ಲ. ಬೆಳೆದು ಬೆಳೆಸುವ ಕಲೆ. ಈ ಕಲೆಯ ಮೌಲ್ಯ ಎಲ್ಲರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಮುಂದೆ ಈ ಕಲೆಯನ್ನು ಬಹಳಷ್ಟು ಮಂದಿಗೆ ಕಲಿಸುವ, ಪರಿಚಯಿಸುವ ಆಸೆ ಇದೆ. ಇದರಿಂದ ನಾನು ಬೆಳೆದು ಕಲೆಯನ್ನೂ ಬೆಳೆಸಿದ ತೃಪ್ತಿ ಒದಗಬಹುದು ಎಂದು ಹೇಳುತ್ತಾರೆ ವಿಂಧ್ಯಾ.
ಹಲವಾರು ಹವ್ಯಾಸಿ ಕಲಾ ತಂಡದಲ್ಲಿ ಅತಿಥಿಯಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ರಂಗದಲ್ಲಿ ಪ್ರದರ್ಶಿಸಿದ್ದಾರೆ.
ಪುಸ್ತಕ ಓದುವುದು, ಭರತನಾಟ್ಯದ ಕಲಾವಿದೆಯೂ ಆಗಿರುವ ಕಾರಣ ದೈಹಿಕ ವ್ಯಾಯಾಮಗಳು ಅಗತ್ಯ, ಹಾಡುವುದು ಮುಂತಾದವು ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.