ಮೈಸೂರು: ಮಾನಸಗಂಗೋತ್ರಿಯ ಲಲಿತ ಕಲಾ ಕಾಲೇಜಜಿನಲ್ಲಿ ಶ್ರೀ ಗುಬ್ಬಿ ವೀರಣ್ಣ ಪೀಠದವತಿಯಿಂದ ‘ರಂಗಬೆಳಕು’ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 09 ನವೆಂಬರ್ 2024ರಂದು ನಡೆಯಿತು.
ಸ್ವಿಚ್ ಅನ್ನು ಒತ್ತುವ ಮೂಲಕ ರಂಗದ ಮೇಲೆ ಬೆಳಕು ಮೂಡುವಂತೆ ಮಾಡಿ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ ಅಂತರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ವಯೋಲಿನ್ ವಾದಕರಾದ ಶ್ರೀ ಮೈಸೂರು ಮಂಜುನಾಥ್ ಮಾತನಾಡಿ “ಕತ್ತಲೆಯನ್ನು ಓಡಿಸುವ ಬೆಳಕು, ತಾನು ದೃಷ್ಟಿ ಹರಿಸಿದ ಎಲ್ಲಾ ಚರಾಚರ ವಸ್ತುಗಳನ್ನು ಬೆಳಗುವಂತೆ ಮಾಡುತ್ತದೆ. ಬೆಳಕು ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವ ಅಪಾರ. ಯಾವುದೇ ಕಲಾ ಪ್ರಕಾರದಲ್ಲಿ ಬೆಳಕಿನ ವಿನ್ಯಾಸ ಬಹಳ ಮುಖ್ಯಪಾತ್ರ ವಹಿಸುತ್ತದೆ. ಒಂದು ದೃಶ್ಯವನ್ನು, ಹಾಗೂ ಇಡೀ ಪರಿಸರವನ್ನು ಕಟ್ಟಿಕೊಡಲು ಬೆಳಕು ಬೇಕೇ ಬೇಕು. ಸಂಗೀತ ಕಛೇರಿಗಳಲ್ಲಿಯೂ ಹಾಡಿನ ಭಾವವನ್ನು ತೋರಿಸಲು ಸಂಗೀತಗಾರರ ಸ್ಪೂರ್ತಿಯನ್ನು ಕಟ್ಟಿಕೊಡಲು ಬೆಳಕಿನ ವಿನ್ಯಾಸ ಅತೀಮುಖ್ಯ.” ಎಂದು ತಿಳಿಸಿದರು.
ನಂತರ ಬೆಳಕಿನ ವಿನ್ಯಾಸಕಾರರಾದ ಶ್ರೀ ಮಹೇಶ್ ಕಲ್ಲತ್ತಿಯವರು ರಂಗಭೂಮಿಯಲ್ಲಿ ದೊಂದಿಯಿಂದ ಹಿಡಿದು ಇಂದಿನ ಆಧುನಿಕ ಯುಗದಲ್ಲಿ ಬಳಸುವ ಬೆಳಕಿನ ಸಾಧನಗಳನ್ನು ವಿದ್ಯಾರ್ಥಿಗಳಿಗೆ ಸ್ಲೈಡ್ ಶೋ ಮೂಲಕ ತೋರಿಸುತ್ತಾ ವಿವರಣೆ ನೀಡಿದರು. ನಂತರ ರಂಗಮಂದಿರದಲ್ಲಿ ಕಟ್ಟಿರುವ ಲೈಟ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಖುದ್ದಾಗಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.
ರಂಗತಜ್ಞರಾದ ಶ್ರೀ ಅರಸೀಕೆರೆ ಯೋಗಾನಂದ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ “ಇಂತಹ ಪ್ರಾತ್ಯಕ್ಷಿಕೆಗಳಿಂದ ವಿದಾರ್ಥಿಗಳು ನೇರವಾಗಿ ಕಲಿಯಲು ಸಾಧ್ಯವಾಗುವುದರಿಂದ ಮುಂದಿನ ದಿನಗಳಲ್ಲಿ ಇನ್ನು ಹಲವಾರು ವಿಷಯಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿಟಾ ವಿಮ್ಲ ಬ್ರಾಗ್ಸ್ರ ಇವರು ಮಾತನಾಡಿ “ವಿದ್ಯಾರ್ಥಿಗಳು ಬೆಳಕಿನ ವಿನ್ಯಾಸಕಾರರಾಗಿ ರೂಪುಗೊಂಡು ರಂಗಭೂಮಿಗೆ ಅಗತ್ಯವಿರುವ ತಂತ್ರಜ್ಞರ ಸ್ಥಾನವನ್ನು ತುಂಬಲಿ.” ಎಂದು ಆಶಿಸಿದರು. ನಾಟಕ ಶಿಕ್ಷಕರಾದ ಶ್ರೀ ಮೇಘ ಸಮೀರ್ ಅವರು ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆ ಮಾಡಿದರು.
ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸುಬ್ಬಲಕ್ಷ್ಮೀ ಗೀತಾ, ಸೂರ್ಯಪ್ರಭಾ, ನಟರಾಜ ಹಾಗೂ ಕಲಾವಿದರಾದ ಶ್ರೀಕಾಂತ್, ಮಂಜುನಾಥ್ ಸೇರಿದಂತೆ ಸುಮಾರು 80 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.