ಪುತ್ತೂರು : ಸ್ಥಳೀಯ ಬಾಲವನದಲ್ಲಿ ಭಾರತೀಯ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 22 ಫೆಬ್ರವರಿ 2025ರಂದು ಭಾರತ ಸ್ಕೌಟ್ ಗೈಡ್ಸ್ ಸಂಸ್ಥಾಪಕ ಲಾರ್ಡ್ ಬ್ಯಾಡನ್ ಪವಲ್ ಇವರ ಜನ್ಮದಿನವನ್ನು ಚಿಂತನಾ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಅಂಬಿಕಾ ವಿದ್ಯಾಸಂಸ್ಥೆ, ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಪಾಪೆ ಮಜಲು ಹಿರಿಯ ಪ್ರಾಥಮಿಕ ಶಾಲೆ ಮತ್ತು ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಸಹಯೋಗದಲ್ಲಿ ಆಚರಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವ್ಯಕ್ತಿ ವಿಕಸನಗೊಳ್ಳಲು ಸಾಂಸ್ಕೃತಿಕ ಚಟುವಟಿಕೆ ಮತ್ತು ಸಂಗೀತದ ಪಾತ್ರದ ಕುರಿತಾದ ವಿಶೇಷ ಉಪನ್ಯಾಸ ಮತ್ತು ಕಲಾಸೃಷ್ಟಿ ತಂಡದವರಿಂದ ತತ್ಸಂಬಂಧೀ ವಿಚಾರ ಪ್ರಚೋದಕ ಮಾಯಾಜಾಲ ಕಾರ್ಯಕ್ರಮದೊಡನೆ ಸಂಪನ್ನವಾಯಿತು.
ಕಲಾಸೃಷ್ಟಿ ತಂಡದ ಮುಖ್ಯಸ್ಥೆ ಪ್ರೊ. ಮುಬೀನ ಪರವೀನ್ ತಾಜ್ ಮುಂದಾಳತ್ವದಲ್ಲಿ ಎರಡು ಗಂಟೆಗಳ ಕಾಲ ವಿವಿಧ ಮ್ಯಾಜಿಕ್ ಪ್ರದರ್ಶನ ಮಾಡಿದ್ದಲ್ಲದೆ ಪುಟಾಣಿಗಳಿಗೆ ಕೆಲವು ತಂತ್ರಗಳನ್ನು ಕಲಿಸಿ ಕೊಡಲಾಯಿತು. ಅಂತರಾಷ್ಟ್ರೀಯ ಖ್ಯಾತಿಯ ಕುಮಾರಿ ಶಮಾ ಪರವೀನ್ ತಾಜ್ ಇವರ ನಿರೂಪಣೆಯಲ್ಲಿ ಹಲವು ದೇಶ ಭಕ್ತಿ ಗೀತೆ ಸಹಿತದ ಮ್ಯಾಜಿಕ್ ಹಾಗೂ ಪುಟಾಣಿ ಚಾಂದ್ ಷರೀಫ್ ಹಲವಾರು ತಂತ್ರಗಳನ್ನೂ ಮಾಡಿ ತೋರಿಸಿದರು. ಶ್ರೀಮತಿ ಫಾತಿಮಾ ಷರೀಫ್ ಸಹಕಾರದಲ್ಲಿ ವಿವಿಧ ರೀತಿಯ ಬುದ್ಧಿವರ್ಧಕ ತಂತ್ರಗಳು ಪ್ರದರ್ಶಿತಗೊಂಡವು.
ಈ ತನ್ಮಧ್ಯೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಹಾಗೂ ಕ್ಷಾರ ತಜ್ಞ ಡಾ. ಸುರೇಶ ನೆಗಳಗುಳಿಯವರು ವ್ಯಕ್ತಿ ವಿಕಸನ ವಿಚಾರದ ಹಲವಾರು ಬೋಧನೆಗಳನ್ನು ಉದಾಹರಣೆ ಸಹಿತವಾಗಿ ವಿವರಿಸಿದರು. ಅದಕ್ಕೆ ಸಂಬಂಧಿಸಿದ ಗಜಲ್ ಹಾಗೂ ಮುಕ್ತಕ ಮಾಲೆ ವಾಚಿಸಿದ ಅವರು, ಕೆಲಸದ ಬದಲಾವಣೆಯೇ ವಿಶ್ರಾಂತಿ ಎಂದು ತಿಳಿದು ಅಭ್ಯಾಸ ಮಾಡುತ್ತಾ ಹಲವಾರು ಮನೋರಂಜಕ ಚಟುವಟಿಕೆಗಳು ಸಹ ನಮ್ಮ ದಿನಚರಿಯ ಭಾಗವಾಗಬೇಕು ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ ನ ಎಲ್.ಟಿ. ಗೈಡ್ ಶ್ರೀಮತಿ ಸುನೀತಾ, ಪಾಪೆ ಮಜಲಿನ ಮೇಬಲ್ ಡಿ’ಸೋಜಾ, ಬುಶ್ರಾ ಆಂಗ್ಲ ಮಾದ್ಯಮ ಶಾಲೆಯ ಕಬ್ ಮಾಸ್ತರ್ ಶ್ರೀಮತಿ ಹೇಮಲತಾ ಕಜೆಗದ್ದೆ, ಬೆಥನಿ ಶಾಲೆಯ ಶ್ರೀಮತಿ ಮೈತ್ರೇಯಿ, ಸ್ಕೌಟ್ ಮಾಸ್ತರ್ ಶ್ರೀ ಪ್ರದೀಪ್, ಅಂಬಿಕಾ ವಿದ್ಯಾಲಯದ ಗೈಡ್ ಟೀಚರ್ ಶ್ರೀಮತಿ ಚಂದ್ರಕಲಾ, ಪಾಪೆ ಮಜಲು ಗೈಡ್ ಟೀಚರ್ ಶ್ರೀಮತಿ ರಜನಿ ಸಹಿತ ಉಪಸ್ಥಿತರಿದ್ದ ಈ ಕಾರ್ಯಕ್ರಮವು ಪುಟಾಣಿಗಳಿಗೆ ಅತಿ ಮಹತ್ವದ ಹಾಗೂ ಮನೋರಂಜನೆಯನ್ನು ನೀಡಿ ಯಶಸ್ವಿಯಾಗಿ ನೆರವೇರಿತು. ಭಾರತ ಮಾತೆಗೆ ವಂದಿಸುವ ಹಾಡು ಹಾಗೂ ಮ್ಯಾಜಿಕ್ ಮುಖಾಂತರ ಮಾಡಿದ ಉದ್ಘಾಟನೆಗಳು ವಿಶೇಷವಾಗಿ ಮನಸೆಳೆದವು.