ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದದೊಂದಿಗೆ ‘ಸಿನ್ಸ್ 1999 ಶ್ವೇತಯಾನ – 101’ ನೇ ಕಾರ್ಯಕ್ರಮದ ಅಂಗವಾಗಿ ಮೈಸೂರಿನ ‘ನಿರ್ದಿಗಂತ’ ತಂಡದಿಂದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕದ ಪ್ರದರ್ಶನವು ದಿನಾಂಕ 21 ಜನವರಿ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗ ಸಾಹಿತಿಗಳಾದ ಅಭಿಲಾಷ ಸೋಮಯಾಜಿ ಮಾತನಾಡಿ “ನಾಟಕ ರಂಗಭೂಮಿಯ ವಿಶಿಷ್ಟವಾದ ಕಾರ್ಯದಿಂದಲೇ ರಂಗಕ್ಷೇತ್ರದ ಶಿಸ್ತು ಮತ್ತು ಮೌಲ್ಯ ವೃದ್ಧಿಯಾಗಿದೆ. ‘ನಿರ್ದಿಗಂತ’ ನಾಟಕ ತಂಡದಿಂದ ಹೊಸ ಹೊಸ ಕಲ್ಪನೆಯೊಂದಿಗೆ ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇದೆ. ರಂಗಭೂಮಿಯ ಪರಿಕಲ್ಪನೆಗಳು ಪ್ರತೀ ನಿರ್ದೇಶಕರಿಂದಲೂ ಬೇರೆ ಬೇರೆ ರೀತಿಯ ಆಯಾಮ ಹೊಂದಿ ವಿಭಿನ್ನವಾಗಿ ರಂಗದಲ್ಲಿ ಬಿತ್ತರಗೊಂಡು ಬುದ್ಧಿಗೆ ಕೆಲಸ ಕೊಡುವಂತಿರುತ್ತದೆ ಹಾಗೂ ಇನ್ನಷ್ಟು ಹುಡುಕಾಟಕ್ಕೆ ಆಸ್ಪದ ನೀಡುತ್ತದೆ” ಎಂದರು.
‘ರಸರಂಗ’ದ ಸುಧಾ ಕದ್ರಿಕಟ್ಟು, ನಿವೃತ್ತ ಜೀವ ವಿಮಾ ಅಧಿಕಾರಿಗಳಾದ ಸತ್ಯನಾರಾಯಣ ಅರಸ್, ಗುರುರಾಜ ಹೆಬ್ಬಾರ್ ಹಂಗಳೂರು, ದೈಹಿಕ ಶಿಕ್ಷಕರರಾದ ಉಮೇಶ್ ಹಾಗೂ ‘ನಿರ್ದಿಗಂತ’ದ ಸೆಟ್ ಮ್ಯಾನೇಜರ್ ಗಣೇಶ್ ಭೀಮನ ಕೋಣಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ‘ನಿರ್ದಿಗಂತ’ದ ‘ತಿಂಡಿಗೆ ಬಂದ ತುಂಡೇರಾಯ’ ಪ್ರಸ್ತುತಿಗೊಂಡಿತು.