ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ವಿವಿಧ ಕೊಂಕಣಿ ಸಂಘಟನೆಗಳ ಸಹಕಾರದಲ್ಲಿ ಇತ್ತೀಚೆಗೆ ನಿಧನರಾದ ಕೊಂಕಣಿ ಸಾಹಿತಿ ಗ್ಲೇಡಿಸ್ ರೇಗೊ ಇವರಿಗೆ ಶೃದ್ಧಾಂಜಲಿ ಸಭೆಯನ್ನು ದಿನಾಂಕ 26 ಜುಲೈ 2025ರಂದು ಸಂದೇಶ ಸಭಾಂಗಣದಲ್ಲಿ ನಡೆಸಲಾಯಿತು. ಸಂದೇಶ ಫೌಂಡೇಶನ್, ಮಾಂಡ್ ಸೊಭಾಣ್, ಕೊಂಕಣಿ ಲಖಕ ಸಂಘ ಕರ್ನಾಟಕ, ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಸಂಘ, ದಾಯ್ಜಿ ದುಬಾಯ್ ಮಂಗಳೂರು ಘಟಕ, ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
ಸ್ವಾಗತಿಸಿ, ಪ್ರಸ್ತಾವನೆಗೈದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಇವರು “ಗ್ರೇಡಿಸ್ ರೇಗೊ ಕೊಂಕಣಿಯ ವೀರ ಮಹಿಳೆಯಂತಿದ್ದರು. ಕೊಂಕಣಿ ಪುಸ್ತಕ ಪ್ರಕಾಶನ, ಸಾಹಿತ್ಯ ರಚನೆ, ಸಂಶೋಧನೆ, ಜನಪದ, ಕತೆ, ಕವಿತೆ, ಕಾದಂಬರಿ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಕೆಲನ ಮಾಡಿ, ಸ್ಪೂರ್ತಿಯ ನೆಲೆಯಾಗಿದ್ದವರು. ಅವರ ಕೆಲಸ ಕಾರ್ಯಗಳ ಪ್ರೇರಣೆಯಿಂದ ನಮ್ಮ ಕೆಲಸ ಮುಂದುವರಿಸೋಣ. ಹಿರಿಯ ಲೇಖಕರನ್ನು ಅವರು ಜೀವಂತವಿರುವಾಗ ಗೌರವಿಸಬೇಕು. ಈ ಪರಿಪಾಟವನ್ನು ಅಕಾಡೆಮಿ ಆರಂಭಿಸಿದ್ದು, ವಯಸ್ಸು ಹಾಗೂ ಅನಾರೋಗ್ಯದ ನಿಮಿತ್ತ ಮನೆಯಲ್ಲೇ ಇರುವ ಸಾಹಿತಿಗಳನ್ನು ಅವರ ಮನೆಗೆ ಹೋಗಿ ಸನ್ಮಾನಿಸಿ, ಕುಶಲೋಪಚರಿ ನಡೆಸಿಕೊಂಡು ಬರಲಾಗುತ್ತಿದೆ” ಎಂದು ಹೇಳಿದರು.
ಕನ್ನಡದ ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಹಾಗೂ ಕೊಂಕಣಿ ಲೇಖಕರಾದ ರೊನಿ ಅರುಣ್, ಡಾಲ್ಫಿ ಲೋಬೊ, ಹೇಮಾಚಾರ್ಯ, ಪಿಂಟೊ ವಾಮಂಜೂರು, ರೇಮಂಡ್ ಡಿಕುನ್ಹಾ, ಅಂಡ್ರ್ಯೂ ಎಲ್. ಡಿಕುನ್ಹಾ, ಸ್ವೀವನ್ ಕ್ವಾಡ್ರಸ್ ಇವರುಗಳು ಗ್ಲೇಡಿಸ್ ರೇಗೊಗೆ ನುಡಿನಮನ ಸಲ್ಲಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಪ್ನಾ ಕ್ರಾಸ್ತಾ ಹಾಗೂ ಸಾಹಿತಿ ಲೇಖಕರು ಉಪಸ್ಥಿತರಿದ್ದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.