ಕುಶಾಲನಗರ : ಖ್ಯಾತ ಕಾದಂಬರಿಕಾರರೂ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರೂ ಆದ ಎಸ್.ಎಲ್. ಭೈರಪ್ಪ ಅವರ ಅಗಲುವಿಕೆಯ ಕುರಿತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಿರಿ ಬಳಗದ ವತಿಯಿಂದ ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜಂಟಿಯಾಗಿ ದಿನಾಂಕ 26 ಸೆಪ್ಟೆಂಬರ್ 2025ರಂದು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತ್ಯಾಭಿಮಾನಿಗಳು ಕಂಬನಿ ಮಿಡಿದರು. ಕಾದಂಬರಿಕಾರ ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಕಾಲ ಮೌನಾಚರಣೆ ನಡೆಸಿ ನುಡಿನಮನ ಸಲ್ಲಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ “ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದ ಎಸ್.ಎಲ್. ಭೈರಪ್ಪ ತಮ್ಮ ಕಾದಂಬರಿ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ, ಅವರ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿರುವುದು ಅವರ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿದೆ” ಎಂದರು.
ಜಿಲ್ಲಾ ಕ.ಸಾ.ಪ. ಸಮಿತಿಯ ಸದಸ್ಯ ಎಂ.ಎನ್. ವೆಂಕಟನಾಯಕ್ ಮಾತನಾಡಿ “ವಂಶವೃಕ್ಷ, ದಾಟು, ತಂತು ಮುಂತಾದ ಪ್ರಮುಖ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ” ಎಂದರು. ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ “ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ನಿಧನವು ಕನ್ನಡದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ” ಎಂದರು.
ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ “ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರೂ ಆದ ಎಸ್.ಎಲ್. ಭೈರಪ್ಪ ಅವರ ಅಗಲುವಿಕೆ ವಿಷಾದದ ಸಂಗತಿ” ಎಂದರು.
ಎಸ್.ಎಲ್. ಭೈರಪ್ಪ ಅವರ ಸಾಹಿತ್ಯ ಯಾತ್ರೆ ಕುರಿತು ಮಾತನಾಡಿದ ಲೇಖಕರಾದ ಉ.ರಾ. ನಾಗೇಶ್ “ಭೈರಪ್ಪ ಅವರು ಉಪನಿಷತ್ತಿನ ರೀತಿಯಲ್ಲಿ ಸಾಹಿತ್ಯ ಲೋಕದ ಶಿಖರದೆತ್ತರದಲ್ಲಿ ನಿಂತ ಮಹಾನ್ ಲೇಖಕರು. ಅವರ ಸಾಹಿತ್ಯವು ಕನ್ನಡ ಸಾರಸ್ವತ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಪಾರ ಸಾಧನೆಯು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಿರೀಟಪ್ರಾಯವಾಗಿದೆ” ಎಂದರು.
ಕೂಡಿಗೆ ಸರ್ಕಾರಿ ಪಿ.ಯೂ. ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ನಿವೃತ್ತ ಪ್ರಾಂಶುಪಾಲ ಜಿ. ಕೆಂಚಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ತಾಲೂಕು ಕ.ಸಾ.ಪ. ಗೌರವ ಕೋಶಾಧಿಕಾರಿ ಕೆ.ವಿ. ಉಮೇಶ್, ಕ.ಸಾ.ಪ. ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಅಣ್ಣಯ್ಯ, ಎಚ್.ಎನ್. ಸುಬ್ರಹ್ಮಣ್ಯ, ಟಿ.ಜಿ. ಪ್ರೇಮಕುಮಾರ್, ಮಣಜೂರು ಮಂಜುನಾಥ್, ಡಿ.ವಿ. ರಾಜೇಶ್, ಶಿಕ್ಷಕಿ ವಿ.ಎಸ್. ರಜನಿ ಮೊದಲಾದವರು ಉಪಸ್ಥಿತರಿದ್ದರು.