ಮುಂಬೈ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಇತ್ತೀಚಿಗೆ ನಿಧನರಾದ ಹಿರಿಯ ಕಲಾ ಚೇತನ ಸಂಗೀತ ವಿದುಷಿ ಸರೋಜಾ ಶ್ರೀನಾಥ್ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವನ್ನು ದಿನಾಂಕ 22 ಆಗಸ್ಟ್ 2025ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎನ್. ಉಪಾಧ್ಯ ಇವರು ವಹಿಸಿ ಮಾತನಾಡುತ್ತಾ “ಶ್ರೀಮತಿ ಸರೋಜಾ ಶ್ರೀನಾಥ್ ಅವರು ಮುಂಬಯಿ ವಿಶ್ವವಿದ್ಯಾಲಯದ ನಲಂದಾ ನೃತ್ಯ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ಶಾಸ್ತಜ್ಞೆಯಾಗಿ, ಭರತನಾಟ್ಯ ವಿಭಾಗದ ಮುಖ್ಯಸ್ಥೆಯಾಗಿ ಇಪ್ಪತ್ತೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಸೈ ಎನಿಸಿಕೊಂಡರು. ಬಾಲ್ಯದಿಂದಲೂ ವಿಶೇಷ ಆಸಕ್ತಿ ತಳೆದಿದ್ದ ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಅಲ್ಲಿ ಒಳ್ಳೆಯ ವೇದಿಕೆ ದೊರಕಿತು. ಸರೋಜಾ ಅವರದ್ದು ಸೃಷ್ಟಿಶೀಲ ಮನಸ್ಸು. ವಿಶ್ವವಿದ್ಯಾಲಯದ ನೃತ್ಯಕಲಾ ತರಗತಿಗಳಲ್ಲಿ ಪಾಠ ಪ್ರವಚನಗಳ ಜತೆಜತೆಗೆ ಸಂಗೀತ ರಚನೆ, ಸಂಯೋಜನೆ ಮಾಡಲು ಸಿಕ್ಕ ಅವಕಾಶವನ್ನು ಸರೋಜಾ ಅವರು ತಮ್ಮೊಳಗಿನ ಪ್ರತಿಭೆ ಹೊರಹೊಮ್ಮಲು ಬಳಸಿಕೊಂಡರು. ಪ್ರತಿ ವರ್ಷ ನಲಂದಾ ಮಹಾ ವಿದ್ಯಾಲಯದಲ್ಲಿ ನಡೆಯುತಿದ್ದ ಸಂಗೀತ, ನೃತ್ಯ, ನಾಟಕ ಸ್ಪರ್ಧೆಗಳಿಗಾಗಿ ಒಂದು ಅಥವಾ ಎರಡು ನೃತ್ಯ ನಾಟಕಗಳನ್ನು ಸಾಹಿತ್ಯ, ಸಂಗೀತ ರಚನೆಯೊಂದಿಗೆ ಸ್ವತಃ ರಚನೆ ಮಾಡಿ ಕೊಡುತ್ತಿದ್ದರು. ಡಾ. ಕನಕರಿಲೇ ಅವರ ಉತ್ತಮ ಮಾರ್ಗದರ್ಶನದಲ್ಲಿ ಸರೋಜಾ ಅವರು ಪದವಿ ತರಗತಿಗಳ ಪಠ್ಯಕ್ರಮಗಳಿಗೆ ಹಾಗೂ ಕೊರಿಯೋಗ್ರಫಿ ವಿಷಯದ ಪರೀಕ್ಷೆಗಳಿಗಾಗಿ ಹೊಸ ಹೊಸ ಕೀರ್ತನೆಗಳು, ಕೃತಿ, ಜಾವಳಿ, ಪದ ತಿಲ್ಲಾನ, ಶ್ಲೋಕಗಳನ್ನು ರಚಿಸಿದರು. ಸರೋಜಾ ಅವರು ಪ್ರಯೋಗ ನಿರತರಾಗಿದ್ದವರು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರವಾದ ನಷ್ಟವಾಗಿದೆ. ನೃತ್ಯ, ಸಂಗೀತ ಜ್ಞಾನ ಮತ್ತು ಸಾಹಿತ್ಯಾಭಿರುಚಿ ಇವು ಮೂರೂ ಸರೋಜಾ ಶ್ರೀನಾಥ್ ಅವರಲ್ಲಿ ಮುಪ್ಪುರಿಗೊಂಡಿದ್ದವು. ಅವರು ಸಂಗೀತ ರಚನೆಗಳ ಜೊತೆಗೆ ರಾಗ ಹಾಗೂ ನೃತ್ಯ ಸಂಯೋಜನೆಗಳನ್ನು ಸುಲಲಿತವಾಗಿ ಮಾಡುತ್ತಿದ್ದರು. ಭರತನಾಟ್ಯ ವಿಭಾಗದ ಜೊತೆಗೆ ಇನ್ನಿತರ ಸಂಘ ಸಂಸ್ಥೆಗಳಿಗೆ, ಸಾರ್ವಜನಿಕ ಸಂದರ್ಭಗಳಿಗೆ ರಚಿಸಿದ ಅವರ ಅನೇಕ ರಚನೆಗಳು ಇಂದಿಗೂ ವ್ಯಾಪಕವಾಗಿ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿ.
ತಾವು ಕಲಿತ ಸಂಗೀತ, ನೃತ್ಯ ಕಲಾ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ನಿಟ್ಟಿನಲ್ಲಿ ಅವರು ಕಟಿಬದ್ಧರಾಗಿ ಕೆಲಸ ಮಾಡಿದರು. ‘ಕನಕಸಭಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್’ ಎಂಬ ನೃತ್ಯ ಶಾಲೆಯನ್ನು ಮುಂಬೈಯಲ್ಲಿ ಆರಂಭಿಸಿ ಸಾವಿರಾರು ಆಸಕ್ತರಿಗೆ ನೃತ್ಯ, ಸಂಗೀತದ ಸವಿಯನ್ನು ಅವರು ಉಣಬಡಿಸಿದ್ದಾರೆ. ಈ ಸಂಸ್ಥೆಗೆ ಈಗ 45ರ ಪ್ರಾಯ. ಸರೋಜಾ ಅವರ ಮಗಳು ಡಾ. ಸಿರಿ ನೃತ್ಯ ಕಲಾವಿದರಾಗಿ ಅಂತಾರಾಷ್ಟೀಯ ಮಟ್ಟದಲ್ಲಿ ನಾಮಾಂಕಿತರಾಗಿದ್ದಾರೆ. ಮೊಮ್ಮಗಳು ಅಮರ ಸಹ ಕಲಾಮಾತೆಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ಅವರ ಅಳಿಯ ಸಿಂಗಾಪುರದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಇಡೀ ಕುಟುಂಬವೇ ಕಲೆಯ ಉಪಾಸನೆಯಲ್ಲಿ ನಿರತವಾಗಿದೆ.
ಸರೋಜಾ ಶ್ರೀನಾಥ್ ಅವರದು ಬಹುಭಾಷಿಕ ಸಂವೇದನೆ. ಸಂಸ್ಕೃತ, ಇಂಗ್ಲೀಷ್, ಮರಾಠಿ, ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಕೆಲವು ವಿದೇಶಿ ಭಾಷೆಗಳಲ್ಲಿ ಅವರಿಗೆ ಒಳ್ಳೆಯ ಹಿಡಿತವಿತ್ತು. ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ಅವರಿಗೆ ವಿಶೇಷವಾದ ಅಭಿಮಾನವಿತ್ತು. ಅಮರ ರಾಮಾಯಣ, ಮೈಸೂರಿನಿಂದ ಮೌನ್ಟ್ ಟಾಂಬೋರವರೆಗೆ, ಜಗದಗಲ ಕುತೂಹಲ, ಸಂಗೀತ ಸಾಹಿತ್ಯ ಅನುಸಂಧಾನ, ಕರ್ನಾಟಕದ ದೇವಾಲಯಗಳು, ಕನ್ನಡ ನಾಡಿನ ಸಂಗೀತ ಸೌಭಾಗ್ಯ, ತಾತಿ ಹೇಳಿದ ಕತೆಗಳು, ಭಾಗ್ಯಶ್ರೀ, ಪಾರ್ವತಿ ಕಲ್ಯಾಣ, ಸಂಗೀತ ವಾದ್ಯಗಳು ಮೊದಲಾದವು ಸರೋಜಾ ಶ್ರೀನಾಥ್ ಅವರ ಪ್ರಕಟಿತ ಮಹತ್ವದ ಕನ್ನಡ ಕೃತಿಗಳು. ಸಂಗೀತ, ನೃತ್ಯ ಶಾಸ್ತ್ರಗಳಿಗೆ ಸಂಬಂಧಿಸಿದ ಅವರ ಅನೇಕ ರಚನೆಗಳು ಬಹು ಜನಪ್ರಿಯವಾಗಿವೆ. ಅವರ ನಿಧನದಿಂದ ದೊಡ್ಡ ಶೂನ್ಯವೊಂದು ಆವರಿಸಿದೆ” ಎಂದು ಸರೋಜಾ ಅವರ ಬಹುಮುಖ ಸಾಧನೆಯನ್ನು ಸ್ಮರಿಸಿಕೊಂಡರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಮಾತನಾಡುತ್ತಾ “ಸರೋಜಾ ಶ್ರೀನಾಥ್ ಅವರು ಮಾದರಿ ಮಹಿಳೆ. ನಿರಂತರವಾಗಿ ಓದು, ಅಧ್ಯಯನ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತನ್ನ ತೊಂಭತ್ತರ ಹರೆಯದಲ್ಲಿ ಆತ್ಮಕಥನವನ್ನು ಬರೆದು ಬೆಳಕಿಗೆ ತಂದದ್ದು ಸಾಮಾನ್ಯದ ಮಾತಲ್ಲ. ಹಿರಿಕಿರಿಯರೆಂಬ ಭೇದವಿಲ್ಲದೆ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತು ಬಾಳಿದವರು. ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಟ್ಟ ಕೊಡುಗೆ ಅಪಾರವಾದುದು” ಎಂದು ಸರೋಜಾ ಶ್ರೀನಾಥ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡರು.
ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಮಾತನಾಡಿ, “ಸಾಮಾನ್ಯವಾಗಿ ಮನುಷ್ಯನ ವಯಸ್ಸು ವೃದ್ಧಿಯಾದಂತೆ ಜೀವನೋತ್ಸಾಹವು ಕುಗ್ಗುತ್ತದೆ. ಆದರೆ ಸರೋಜಮ್ಮನವರಲ್ಲಿ ಅದು ಹಿಗ್ಗಿ ಹೊಮ್ಮುತ್ತಿತ್ತು. ತೊಂಬತ್ತರ ಆಯುವಿನಲ್ಲೂ ಕೃತಿ ರಚನೆ, ಹೊಸ ಲಿಪಿಯ ಶೋಧ, ಸಂಗೀತ ನೃತ್ಯದ ಉಪಾಸನೆ ಮುಂದುವರಿದಿತ್ತು. ಅವರೀಗ ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿರಬಹುದು. ಆದರೆ ಅವರ ಕ್ರಿಯಾಶೀಲತೆ, ಸೃಜನಶೀಲ ಮನೋಭಾವ, ಕನ್ನಡ ಪ್ರೀತಿ ಮತ್ತು ಎಲ್ಲರೊಡನೆ ಇರಬೇಕಾದ ತಾಯ್ತನದ ಮಮತೆ ನಮಗೆ ಸದಾ ಆದರ್ಶವಾಗಿರುವುದು. ಮಾತೆತ್ತಿದರೆ ಕನ್ನಡ ವಿಭಾಗದ ಕುರಿತು ಮೆಚ್ಚುಗೆ, ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದ ಅವರನ್ನು ವಿಭಾಗದ ವಿದ್ಯಾರ್ಥಿಗಳಾದ ನಾವು ಸದಾ ಸ್ಮರಿಸಬೇಕು. ಅವರ ಕನ್ನಡ ನಾಡಿನ ಸಂಗೀತ ಸೌಭಾಗ್ಯ ಕೃತಿಗೆ ಮುನ್ನುಡಿಯನ್ನು ಬರೆಯಲು ಮತ್ತು ಅವರೊಂದಿಗೆ ಅಲ್ಪ ಸಮಯದ ಭೇಟಿ, ಮಾತುಕತೆಗೆ ಅವಕಾಶವಾಗಿದ್ದು ನನ್ನ ಭಾಗ್ಯ” ಎಂದು ಸ್ಮರಿಸಿದರು.
ವಿಭಾಗದ ಸಂಶೋಧನ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರು ಸರೋಜಾ ಶ್ರೀನಾಥ್ ಅವರ ಸಾಧನೆಯನ್ನು ತೆರೆದಿಟ್ಟು, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸಂಶೋಧನ ವಿದ್ಯಾರ್ಥಿಗಳಾದ ಸುರೇಖಾ ದೇವಾಡಿಗ, ಅನಿತಾ ಪೂಜಾರಿ ತಾಕೋಡೆ, ಸುರೇಖಾ ಹರಿಪ್ರಸಾದ್ ಶೆಟ್ಟಿ, ಪ್ರತಿಭಾ ರಾವ್, ಎಂ.ಎ. ವಿದ್ಯಾರ್ಥಿ ಭಾಗ್ಯ ಜ್ಯೋತಿ, ಡಿಪ್ಲೊಮಾ ವಿದ್ಯಾರ್ಥಿಗಳಾದ ಉಷಾ ಶೆಟ್ಟಿ, ಪುಷ್ಪಲತಾ ಗೌಡ, ಯೋಗಿನಿ ಆತ್ರೇಯ, ಶಾರದಾ ವಲಾಡ್ ಇವರುಗಳು ಉಪಸ್ಥಿತರಿದ್ದರು.