ಮಂಗಳೂರು : ಓದುಗ ಬಳಗ ಹೊಸಬೆಟ್ಟು ಕುಳಾಯಿ ಇದರ ವತಿಯಿಂದ ಆಯೋಜಿಸಿದ್ದ ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ನುಡಿ ನಮನ ಕಾರ್ಯಕ್ರಮವು ದಿನಾಂಕ 10 ಜನವರಿ 2026ರಂದು ಕುಳಾಯಿ ಮಹಿಳಾ ಮಂಡಲದಲ್ಲಿ ನಡೆಯಿತು. ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲೇಖಕ ಕೃಷ್ಣಮೂರ್ತಿ ಪಿ. “ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿ ಮಾಡಿ ಜನಪ್ರಿಯತೆ ಪಡೆದಿದ್ದ ಯೋಗೀಶ್ ಕಾಂಚನ್ ಬೈಕಂಪಾಡಿಯವರು ಅನನ್ಯ ಸಾಧನೆಯನ್ನು ಮಾಡಿದ್ದು ಸಮಾಜ ಅವರ ಸೇವೆಯನ್ನು ಗುರುತಿಸಬೇಕು. ತುಳು ಕನ್ನಡದ ಕವಿಯಾಗಿ ಸಮಾಜದ ಅಸಮಾನತೆಯನ್ನು, ನೋವು ನಲಿವುಗಳನ್ನು ಕವಿತೆಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟರು. ತುಳು ಅಕಾಡೆಮಿಯ ಸದಸ್ಯರಾಗಿ ತುಳು ಸಾಹಿತ್ಯದ ಸೇವೆಯನ್ನು ಯೋಗೀಶ್ ಕಾಂಚನ್ ಮಾಡಿದವರು” ಎಂದು ನುಡಿದರು.

ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಕಾರ್ಯದರ್ಶಿ ಸತೀಶ್ ಸದಾನಂದ ಮಾತನಾಡಿ “ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಯೋಗೀಶ್ ಕಾಂಚನ್ ನ್ಯಾಯ ಪರ ವಿಚಾರಗಳಿಗೆ ಬೆಂಬಲ ನೀಡಿದವರು” ಎಂದರು. ಹೊಸಬೆಟ್ಟು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ಚಂದ್ರಕಲಾ ಅವರು ಯೋಗೀಶ್ ಕಾಂಚನ್ ಅವರ ಬದುಕು ಬರಹದ ಕುರಿತು ತಿಳಿಸಿದರು. ಟಿ.ವಿ. ನಿರೂಪಕ ಪ್ರಕಾಶ್ ಪುತ್ತೂರು ಮಾತನಾಡಿ “ಮೌನವಾಗಿ ಕಾರ್ಯ ಮಾಡುತ್ತಲೇ ಯೋಗೀಶ್ ಕಾಂಚನ್ ಹೊಸಬೆಟ್ಟು ಗ್ರಂಥಾಲಯದ ಬೆಳವಣಿಗೆಗೆ ಶ್ರಮಿಸಿದವರು” ಎಂದರು.

ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿಯ ಅಧ್ಯಕ್ಷ ಧನುರಾಜ್ ಅತ್ತಾವರ, ಇಶ್ಯೂಸ್ ಅಂಡ್ ಕನ್ಸರ್ನ್ ಪತ್ರಿಕೆಯ ಸಂಪಾದಕ ಜಯರಾಮ ಶ್ರೀಯನ್, ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ.ಯ ಕಾರ್ಯದರ್ಶಿ ಶೋಭೆ0ದ್ರ ಸಸಿಹಿತ್ಲು, ಗೋವಿಂದ ದಾಸ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಮಾಧವ ಕೋಟ್ಯಾನ್, ಹೊಸಬೆಟ್ಟು ಗ್ರಂಥಾಲಯದ ಓದುಗ ಬಳಗದ ಅಧ್ಯಕ್ಷ ವಿನ್ಸೆಂಟ್ ಪಿಂಟೋ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕುಳಾಯಿ ಮಹಿಳಾ ಮಂಡಲದ ಅಧ್ಯಕ್ಷೆ ರೇವತಿ ನವೀನ್, ಕಾರ್ಯದರ್ಶಿ ವಾಣಿ, ಕೋಶಾಧಿಕಾರಿ ಪೂರ್ಣಿಮಾ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಅಧಿಕಾರಿ ನರಸಿಂಹ ಕುಳಾಯಿ, ಮಂಗಳೂರಿನ ಬಹು ಓದು ಬಳಗದ ಡಾ. ಉಷಾ ಪ್ರಕಾಶ್, ಓದುಗ ಬಳಗದ ನವೀನ್ ಕುಮಾರ್, ರಮೇಶ್ ಜಿ. ಅಮೀನ್, ಯಶವಂತ ವೈ. ಕರ್ಕೇರ, ಯೋಗೀಶ್ ಕಾಂಚನ್ ಅವರ ಪುತ್ರಿಯರು ಮತ್ತು ಬಂಧುಗಳು ಮತ್ತಿತರರು ಉಪಸ್ಥಿತರಿದ್ದರು.
