ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್ ಇದರ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ 10-03-2024ರಂದು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಠದ ಅಧ್ಯಕ್ಷ ರಾಮಕೃಷ್ಣ ಜಿತಕಾಮಾನಂದಜೀ, ಭಾರತೀಯ ವಿದ್ಯಾಭವನದ ಗೌರವ ಜೊತೆ ಕಾರ್ಯದರ್ಶಿ ಪ್ರೊ ಜಿ.ಆರ್. ರೈ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಸಮಕ್ಷಮದಲ್ಲಿ ಮೃದಂಗ ಕಲಾವಿದ ಬಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಗರು “ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ಮತ್ತು ಬೌದ್ಧಿಕ ಪ್ರಬುದ್ಧತೆ ಬೆಳೆಯುತ್ತದೆ. ಸಂಗೀತ ಆಲಿಸುವವರ ಹೃದಯ ಮೃದುವಾಗುತ್ತದೆ. ಸಂಗೀತದಿಂದ ಸಾಮರಸ್ಯ ಮೂಡುತ್ತದೆ” ಎಂದರು.
ಸಂಗೀತ ಪರಿಷತ್ ಉಪಾಧ್ಯಕ್ಷ ಎಚ್. ಸುಬ್ರಹ್ಮಣ್ಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ “ಈ ವರ್ಷ 30 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತ್ರಿಂಶತ್ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಲಾಗಿದೆ.” ಎಂದರು. ಕೃಷ್ಣಮೂರ್ತಿ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ಬೆಂಗಳೂರಿನ ಪಟ್ಟಾಭಿರಾಮ ಪಂಡಿತ್ ಅವರಿಂದ ಹಾಡುಗಾರಿಕೆ ನಡೆಯಿತು. ತಿರುವನಂತಪುರದ ಸಂಪತ್ ಪಿಟೀಲಿನಲ್ಲಿ, ಬೆಂಗಳೂರಿನ ಪ್ರವೀಣ್ ಮೃದಂಗದಲ್ಲಿ ಹಾಗೂ ಸುಮುಖ ಕಾರಂತ ಖಂಜೀರದಲ್ಲಿ ಸಹಕರಿಸಿದರು. ಅಶ್ವಿನಿ ಕಲಾವಿದರನ್ನು ಪರಿಚಯಿಸಿದರು. ಎನ್.ಜೆ. ಗೋಪಾಲ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಂಗಳೂರಿನ ಕುಮಾರಿ ಧನಶ್ರೀ ಶಬರಾಯ, ಶ್ರೀ ಗೌತಮ್ ಭಟ್ ಹಾಗೂ ಕಾರ್ಕಳದ ಕುಮಾರಿ ಮಹತಿ ಅವರಿಂದ ಪಿಟೀಲು ಕಚೇರಿ ನಡೆಯಿತು.