ಬೆಳ್ತಂಗಡಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ತುಳು ಸಂಘ ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟಕ್ಕೆ ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ವಾಣಿ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಿಲ್ಲಾ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ “ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನ, ಸತ್ವ ಹಾಗೂ ಭಾಷಾ ಸಂಪತ್ತಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಹೆಚ್ಚಿನ ಮಹತ್ವ ಬಂದಿದೆ. ಈಗಾಗಲೇ ಪಾಲ್ತಾಡಿ ರಾಮಕೃಷ್ಣ ಅಚಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರೌಢ ಶಾಲಾ ಮಟ್ಟದಲ್ಲಿ ಒಂದು ಪಾಠವಾಗಿ ತುಳು ಬಂತು. ಕಳೆದ ಶೈಕ್ಷಣಿಕ ಅವಧಿಯಲ್ಲಿ ಜಿಲ್ಲೆಯಲ್ಲಿ 333 ಮಕ್ಕಳು ತುಳು ಪಾಠದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಅವರೆಲ್ಲರನ್ನು ಅಕಾಡೆಮಿ ಪುರಸ್ಕರಿಸಿದೆ.” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಮಾತನಾಡಿ “ನಮ್ಮ ಸಂಸ್ಕೃತಿ ಉಳಿಯಲು ಭಾಷೆ ಮುಖ್ಯ. ತುಳುವಿನ ಬಗ್ಗೆ ಆನೇಕ ಸಂಶೋಧನೆಗಳು ನಡೆಯಬೇಕು. ತುಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಮ್ಮದಾಗಬೇಕು.” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ “ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಆಕಾಡೆಮಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.” ಎಂದರು.
ಜನಪದ ಕುಣಿತಗಳು ಹಾಗೂ ಹಾಡುಗಳ ಬಗ್ಗೆ ಕಲಾವಿದರಾದ ಜಯರಾಂ ಮುಂಡಾಜೆ ಹಾಗೂ ನಾಟಕ ರಚನೆಯ ಬಗ್ಗೆ ಆಕಾಶವಾಣಿ ಕಲಾವಿದೆ ಶ್ರೀಮತಿ ಅಕ್ಷತ ರಾಜ್ ಪೆರ್ಲ ಕಮ್ಮಟ ನಡೆಸಿಕೊಟ್ಟರು. ಉಜಿರೆ ಎಸ್. ಡಿ. ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ಉಪಸ್ಥಿತರಿದ್ದರು. ತುಳು ಕಲಿಕಾ ಶಿಕ್ಷಕಿ ಸಂಧ್ಯಾ ಸಹಿತ ತಾಲೂಕಿನ ನಾನಾ ಪದವಿ ಪೂರ್ವ ಕಾಲೇಜಿನ 55 ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.
ಬೆಳ್ತಂಗಡಿ ವಾಣಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿ, ಉಪನ್ಯಾಸಕ ಮಹಾಬಲ ಗೌಡ ನಿರೂಪಿಸಿ, ಉಪನ್ಯಾಸಕಿ ಮೀನಾಕ್ಷಿ ವಂದಿಸಿದರು.