ಬಂಟ್ವಾಳ : ಶ್ರೀ ಒಡಿಯೂರು ರಥೋತ್ಸವದಲ್ಲಿ ‘ಶ್ರೀರಾಮ ತುಳು ಸಾಹಿತ್ಯ ಸಮ್ಮೇಳನ’ವು ದಿನಾಂಕ 18-02-2024 ಮತ್ತು 19-02-2024ರಂದು ಶ್ರೀ ಒಡಿಯೂರು ಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ 18-02-2024ರಂದು ಸಾಹಿತಿ ಯಕ್ಷಗಾನ ಕಲಾವಿದರಾದ ಡಾ. ಭಾಸ್ಕರಾನಂದ ಕುಮಾರ್ ಕಟೀಲು ಇವರ ಅಧ್ಯಕ್ಷತೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು 24ನೇ ತುಳು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿಯಲ್ಲಿ ಬರೆದ ಅಧ್ಯಾತ್ಮ ರಾಮಾಯಣದ ‘ಸುಂದರಕಾಂಡ’ ಮತ್ತು ಡಾ. ವಸಂತಕುಮಾರ ಪೆರ್ಲ ಅವರು ಬರೆದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ತುಳು ಲೇಖನಗಳ ಸಂಕಲನ ‘ತೂಪರಿಕೆ’ ಬಿಡುಗಡೆಯಾಗಲಿವೆ.
ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯನಿಲಯದ ಸಹಾಯಕ ಉಪನ್ಯಾಸಕರಾದ ಡಾ. ರಾಜಶ್ರೀ ಶೆಟ್ಟಿ, ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಶಕುಮಾರ ಎಂ.ಕೆ. ಹಾಗೂ ದೈವನರ್ತಕರಾದ ಡಾ. ರವೀಶ್ ಪಡುಮಲೆ ಇವರಿಂದ ರಾಮಾಯಣದ ಬಗ್ಗೆ ವಿಮರ್ಶೆ, ಮಧ್ಯಾಹ್ನ 1-00 ಗಂಟೆಗೆ ಚುಟುಕು ಕವಿಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ 6-00 ಗಂಟೆಗೆ ಪಾವಂಜೆ ಮೇಳದವರಿಂದ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 19-02-2024ರಂದು ಸಂಜೆ 5-00 ಗಂಟೆಗೆ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದ ಸಾಯಿಶಕ್ತಿ ಕಲಾ ಬಳಗ ಅರ್ಪಣೆ ಮಾಡುವ ಕದ್ರಿ ನವನೀತ ಶೆಟ್ಟಿ ರಚಿಸಿರುವ ಅದ್ದೂರಿ ತುಳು ಪೌರಾಣಿಕ ನಾಟಕ ‘ಬೊಳ್ಳಿಮಲೆತ ಶಿವಶಕ್ತಿಲು’ ಪ್ರದರ್ಶನಗೊಳ್ಳಲಿದೆ. ಸಂಜೆ 7-00 ಗಂಟೆಯಿಂದ ನಡೆಯಲಿರುವ ರಥಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್, ವಿಟ್ಲ ಸೀಮೆ ಹಾಗೂ ವಿವಿಧ ಭಜನ ಮಂಡಲಿಗಳಿಂದ ಕುಣಿತ ಭಜನೆ ನಡೆಯಲಿದೆ. ಕನ್ಯಾನ ಸದ್ಗುರು ನಿತ್ಯಾನಂದ ಮಂದಿರದ ಬಳಿ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ, ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಬಳಿ ಹಾಗೂ ಕಮ್ಮಾಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.