ಮಂಗಳೂರು : ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುವ ಮಹತ್ವದ ಪ್ರಯತ್ನವಾದ ‘ತುಳು ವಿಕಿಪೀಡಿಯಾ’ ತನ್ನ ಲೈವ್ ಆವೃತ್ತಿಯ 10 ವರ್ಷಗಳನ್ನು ಪೂರೈಸಿದ್ದು, ಈ ಪ್ರಯುಕ್ತ ದಿನಾಂಕ 12 ಮತ್ತು 13 ಸೆಪ್ಟೆಂಬರ್ 2026ರಂದು ಮಂಗಳೂರಿನ ಕರಂಗಲ್ಪಾಡಿಯ ಎಜೆ ಗ್ಯಾಂಡ್ ಹೊಟೇಲ್‌ನಲ್ಲಿ ಕರಾವಳಿ ವಿಕಿ ಮೀಡಿಯನ್ಸ್ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ದಿನಾಂಕ 12 ಸೆಪ್ಟೆಂಬರ್ 2026ರಂದು ಬೆಳಗ್ಗೆ ಗಂಟೆ 10-00ಕ್ಕೆ ಗಣಕ ತಜ್ಞ ನಾಡೋಜ ಕೆ.ಪಿ. ರಾವ್ ಉದ್ಘಾಟಿಸಲಿದ್ದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತುಳು ವಿಕಿಪೀಡಿಯಾದ ನಿರ್ವಾಹಕ ಡಾ. ಯು.ಬಿ. ಪವನಜ ಅವರು ‘ವಿಕಿಪೀಡಿಯ ಕೋಡೆ-ಇನಿ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ಸ್ ಗ್ರೂಪ್‌ನ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ಅವರು ತಿಳಿಸಿದ್ದಾರೆ.

