ಮಂಗಳೂರು : ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರು ಸಂಯೋಜಿಸಿದ ‘ತುಳುನಾಡ ಆಟಿದ ಕೂಟ’ ಪಟ್ಟಾಂಗ ಕಾರ್ಯಕ್ರಮ ಇದೇ ಜುಲೈ 29ರಂದು ಶನಿವಾರ ಬೆಳಿಗ್ಗೆ ಗಂ.9.30ರಿಂದ ಪ್ರಸಾರಗೊಳ್ಳಲಿದೆ. ಇದರಲ್ಲಿ ತುಳುನಾಡಿನ ಆಟಿ ತಿಂಗಳ ವಿಶೇಷತೆ, ಆಟಿ ಮತ್ತು ಆಷಾಢಕ್ಕಿರುವ ವ್ಯತ್ಯಾಸ, ಆಟಿಯ ಆಚರಣೆಗಳು, ತಿಂಡಿ – ತಿನಿಸು, ಪಾಲೆ ಕಷಾಯ, ಆಟಿ ಕಳೆಂಜ, ಚೆನ್ನೆಮಣೆ ಮತ್ತಿತರ ಆಟಗಳ ಕುರಿತು ಸ್ವಾರಸ್ಯಕರ ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂವಾದದಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳನ್ನು ಬಳಸಲಾಗಿದೆ.
ಮಾತುಕತೆಯಲ್ಲಿ ಜಾನಪದ ತಜ್ಞ ಹಾಗೂ ಲೇಖಕ ಡಾ.ಗಣನಾಥ ಶೆಟ್ಟಿ ಎಕ್ಕಾರ್, ಲೇಖಕಿಯರಾದ ವಿಜಯಲಕ್ಷ್ಮೀ ಕಟೀಲ್, ಅಕ್ಷತಾ ರಾಜ್ ಪೆರ್ಲ ಹಾಗೂ ಜನಪದ ಗಾಯಕಿ ಅಕ್ಷತಾ ಕುಡ್ಲ ಭಾಗವಹಿಸಿದ್ದಾರೆ. ಮಾಧ್ಯಮ ಸಂಯೋಜಕ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಸಂವಾದವನ್ನು ನಡೆಸಿಕೊಡುವರು. ಜುಲೈ 22ರಂದು ಬೆಂಗಳೂರು ದೂರದರ್ಶನದ ಸ್ಟುಡಿಯೋದಲ್ಲಿ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಎನ್.ಪಂಕಜ ಚಂದನ ವಾಹಿನಿಯ ‘ತುಳುಸಿರಿ’ ವಿಭಾಗಕ್ಕಾಗಿ ಇದನ್ನು ಚಿತ್ರೀಕರಿಸಿಕೊಂಡು ಪ್ರಸಾರಕ್ಕೆ ಅಣಿಗೊಳಿಸಿದ್ದಾರೆ.
ಒಟ್ಟು ಎರಡು ಕಂತುಗಳಲ್ಲಿ ಮೂಡಿಬರುವ ಈ ಕಾರ್ಯಕ್ರಮವು ಕ್ರಮವಾಗಿ ಜುಲೈ 29 ಮತ್ತು ಆಗಸ್ಟ್ 5ರಂದು ಬೆಳಿಗ್ಗೆ 9:30ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವುದು.