ಮಂಗಳೂರು : ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮವು ದಿನಾಂಕ 01-05-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ ಸದಾನಂದ ನಾರಾವಿ “ಇಂದು ವ್ಯಾವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ. ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಸದಸ್ಯರ ಕವನ, ಬರಹಗಳ ಸಂಗ್ರಹದ ಆರು ಪುಸ್ತಕಗಳನ್ನು ಹೊರತರುವ ಕೆಲಸ ಸುಲಭಸಾಧ್ಯವಾಗಿಸಿದ ಸಂಘಟನೆಯ ಪದಾಧಿಕಾರಿಗಳು ಅಭಿನಂದನಾರ್ಹರು, ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ” ಎಂದು ಆಶಿಸಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಷಯಾ ಆರ್.ಶೆಟ್ಟಿ ಮಾತನಾಡಿ “ಕೃತಿ ರೂಪದಲ್ಲಿ ಸಾಹಿತ್ಯದ ದಾಖಲೀಕರಣ ಸಂಘಟನೆಯ ಅಪೂರ್ವ ಹಾಗೂ ಶ್ಲಾಘನೀಯ ಕಾರ್ಯ. ಪ್ರಾದೇಶಿಕ ಭಾಷಾ ವೈವಿಧ್ಯದೊಂದಿಗೆ ಶಬ್ದಭಂಡಾರ ಹಾಗೂ ಅಧ್ಯಯನ ಪೂರಕ ಮಾಹಿತಿ ಸಂಗ್ರಹದಲ್ಲಿ ಈ ಕೃತಿಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಯೂಟ್ಯೂಬ್ ಚಾನೆಲ್ ಅನ್ನು ನಿರೂಪಕ ಕದ್ರಿ ನವನೀತ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಸಾಹಿತಿ, ಸಂಘಟಕ ಕಾ.ವೀ. ಕೃಷ್ಣದಾಸ್, ದಯಾನಂದ ಕಟೀಲ್, ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘಟನೆ ಸದಸ್ಯರ ಬರಹಗಳ ಸಂಗ್ರಹ ‘ಬೊಲ್ಲಿದಾರಗೆ’, ‘ಉದಿಪು’, ‘ಉಪ್ಪರಿಗೆ’, ‘ತುಡರ್’, ಕೇಪುಲ’ ಮತ್ತು ‘ಪುಂಡಿಕಾಣಿಕೆ’ ಕೃತಿಗಳನ್ನು ವಿಜಯಲಕ್ಷ್ಮೀ ಕಟೀಲ್, ಡಾ. ಮೀನಾಕ್ಷಿ ರಾಮಚಂದ್ರ, ರಾಜಶ್ರೀ ಟಿ. ರೈ ಪೆರ್ಲ, ವೀಣಾ ಟಿ. ಶೆಟ್ಟಿ, ರಘು ಇಡ್ಕಿದು, ಅಕ್ಷಯಾ ಆರ್. ಶೆಟ್ಟಿ ಇವರುಗಳು ಅನಾವರಣಗೊಳಿಸಿ ಕೃತಿ ಪರಿಚಯಿಸಿದರು. ಕೃತಿ ರಚನೆಗೆ ನೆರವು ನೀಡಿದವರನ್ನು ಈ ಸಂದರ್ಭ ಗೌರವಿಸಲಾಯಿತು.
‘ತುಳು ಸಾಹಿತ್ಯದ ಬುಲೆಚ್ಚಿಲ್‌ದ ತಾದಿ ಆನಿ-ಇನಿ-ನನ’ ವಿಚಾರದ ಕುರಿತು ಹಿರಿಯ ಸಾಹಿತಿ, ಸಂಶೋಧಕ ಮುದ್ದು ಮೂಡುಬೆಳ್ಳಿ ಉಪನ್ಯಾಸ ನೀಡಿದರು. ಹರಿಣಿ ಎಂ.ಶೆಟ್ಟಿ, ದಿವ್ಯಾ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳು ಅವರಿಗೆ ‘ಕಲತ ಬೊಲ್ಲಿ’ ಸನ್ಮಾನ ನೀಡಲಾಯಿತು. ವಿನಮ್ರ ಇಡ್ಕಿದು ಪ್ರಾರ್ಥಿಸಿದರು. ಸಾಹಿತಿ ರೇಣುಕಾ ಕಣಿಯೂರು ಬೀಳು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆ ಸದಸ್ಯರಿಂದ ‘ಅಮೃತ ತುಲು ಚಿಟ್ಕ’ ಕವಿಗೋಷ್ಠಿ, ಪದರಂಗಿತ ಮಿನದನ, ಚಾತುರ್ಪು ತೂಪರಿಕೆ ಕಲಾ ಪ್ರದರ್ಶನ ಜರುಗಿತು.