ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ರೋಟರಿ ಕ್ಲಬ್ ಪ್ರಾಯೋಜಕತ್ವದ ಸುರತ್ಕಲ್ ಫೈ ಓವರ್ ಕೆಳಗಡೆ ಉದಯರಾಗ – 53 ಶಾಸ್ತ್ರೀಯ ಸಂಗೀತದ ಸರಣಿ ಕಾರ್ಯಕ್ರಮವು ದಿನಾಂಕ 05-05-2024ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುರತ್ಕಲ್ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ “ಶಾಸ್ತ್ರೀಯ ಸಂಗೀತದಿಂದ ಪರಿಪೂರ್ಣ ಅನುಭವದ ಆನಂದ ಲಭ್ಯವಾಗುತ್ತದೆ. ಸಾಮಾಜಿಕ ಸೇವಾ ಸಂಸ್ಥೆಗಳು ಆದ್ಯತೆಯ ನೆಲೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು.’ ಎಂದು ನುಡಿದರು. ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಕುಳಾಯಿ ಶುಭ ಹಾರೈಸಿದರು.
ಉಡುಪಿಯ ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಆರಾಧನ ಕಲಾಭವನ ಸಾರಡ್ಕದ ಶಂಕರ್ ಸಾರಡ್ಕ, ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಉಪಸ್ಥಿತರಿದ್ದರು. ಗೀತಾ ಸಾರಡ್ಕ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಇವರಿಗೆ ಅನನ್ಯ ಪಿ. ಎಸ್. ಪುತ್ತೂರು ವಯಲಿನ್‌ನಲ್ಲಿ ಹಾಗೂ ಹರಿಕೃಷ್ಣ ಪಾವಂಜೆ ಮೃದಂಗದಲ್ಲಿ ಸಹಕರಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ಕಾರ್ಯದರ್ಶಿ ನಿತ್ಯಾನಂದ ರಾವ್ ಕಾರ್ಯಕ್ರಮ ಸಂಯೋಜಿಸಿದರು.