ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಶಾಸ್ತ್ರೀಯ ಸಂಗೀತ ಸರಣಿ ‘ಉದಯರಾಗ’ ಇದರ 47ನೇ ಸಂಗೀತ ಕಛೇರಿಯು ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ದಿನಾಂಕ 17- 12- 2023 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಭಾಗವಹಿಸಿದ ದೊಡ್ಡಕೊಪ್ಲ ಸ್ವಚ್ಛಸಾಗರ ಅಭಿಯಾನದ ಸಂಯೋಜಕ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕೃಷ್ಣ.ಕೆ.ಪೂಜಾರಿ ಮಾತನಾಡಿ “ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಸಾರುವ ಶಾಸ್ತ್ರೀಯ ಸಂಗೀತಕ್ಕೆ ಹೃದಯವನ್ನು ಅರಳಿಸುವ ಗುಣವಿದೆ. ಯುವಜನತೆ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.” ಎಂದು ನುಡಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್‌ರಾವ್ ಉಪಸ್ಥಿತರಿದ್ದರು.
ಬಳಿಕ ನಡೆದ ಕಛೇರಿಯಲ್ಲಿ ಪ್ರಣವ್ ಅಡಿಗ ಉಡುಪಿ ಅವರಿಂದ ಕೊಳಲು ವಾದನ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ವಿಜೇತ ಸುಬ್ರಹ್ಮಣ್ಯ ಕಾಬೆಕ್ಕೋಡು ಹಾಗು ಮೃದಂಗದಲ್ಲಿ ಡಿ.ಆರ್ ಹರಿಕೃಷ್ಣ ಪಾವಂಜೆ ಸಹಕರಿಸಿದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು.
ಪ್ರಣವ್ ಅಡಿಗ :
ಉಡುಪಿ ಅಂಬಲಪಾಡಿಯ ಶ್ರೀ ಮತಿ ವೀಣಾ ಅಡಿಗ ಮತ್ತು ಶ್ರೀ ಪ್ರಕಾಶ ಅಡಿಗ ಅವರ ಸುಪುತ್ರನಾಗಿರುವ ಪ್ರಣವ್ ಅಡಿಗ ಉಡುಪಿಯ ಆನಂದ ತೀರ್ಥ ವಿದ್ಯಾಲಯದ ಏಳನೇ ತರಗತಿ ವಿದ್ಯಾರ್ಥಿ.
ವಿದ್ವಾನ್ ಕೆ. ರಾಘವೇಂದ್ರ ರಾವ್ ಹಾಗೂ ವಿದ್ವಾನ್ ಕೆ. ರವಿಚಂದ್ರ ಕುಳೂರು ಇವರಲ್ಲಿ 6 ವರ್ಷಗಳಿಂದ ಕೊಳಲು ಹಾಗೂ ಸಂಗೀತಾಭ್ಯಾಸ ಮಾಡಿ, ಪ್ರಸ್ತುತ ವಿದುಷಿ ವಾರಿಜಾಕ್ಷಿ ಆರ್. ಭಟ್ ಇವರ ಬಳಿ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ.
ಇವರು ಉಡುಪಿಯ ಶ್ರೀ ಕೃಷ್ಣ ಮಠವು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ ಸ್ಪರ್ಧೆ, ಅಲೆವೂರು, ಗುಡ್ಡೆಯಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಡೆಸಿದ ಸ್ಪರ್ಧೆ, ವೀಣಾಧರಿ ಸಂಗೀತ ಶಾಲೆ ಆಯೋಜಿಸಿದ ಆನ್ಲೈನ್ ಸಂಗೀತ ಸ್ಪರ್ಧೆ, ಕೇರಳದ ‘ಸಪ್ತ ಸ್ವರಂಗಳ್’ ನಡೆಸಿದ ರಾಷ್ಟ್ರಮಟ್ಟದ ಸ್ಪರ್ಧೆ, ‘ವಿದ್ಯೇಶ ನಾದವೈಭವಂ’ ಆನ್ಲೈನ್ ಸ್ಪರ್ಧೆಯಲ್ಲಿ, ಪೂಣೆಯ ‘ಚಿನ್ಮಯ ನಾದಬಿಂದು’ ಆಯೋಜಿಸಿದ ರಾಷ್ಟ್ರಮಟ್ಟದ ಸ್ಪರ್ಧೆ, ಬೆಂಗಳೂರಿನ ಇಸ್ಕಾನ್ ಆಯೋಜಿಸಿದ ಸ್ಪರ್ಧೆಯಲ್ಲಿ, ಬೆಂಗಳೂರಿನ ‘ಆರ್ಟ್ ಆಫ್ ಲೀವಿಂಗ್’ ಆಯೋಜಿಸಿದ ಕೊಳಲು ವಾದನ ಸ್ಪರ್ಧೆ, ಕೇರಳದ ಗುರುವಾಯುರುವಿನಲ್ಲಿ ನಡೆದ ‘ನಾದೋಪಾಸನ’ ಸ್ಪರ್ಧೆ ಹಾಗೂ ‘ಕಾಪು ಬೀಚ್ ಉತ್ಸವ’ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಇವರು ಹೆಚ್ಚಾಗಿ ಪ್ರಥಮ ತಪ್ಪಿದರೆ ದ್ವಿತೀಯ ಬಹುಮಾನದೊಂದಿಗೆ ಹಿಂದಿರುಗುತ್ತಾರೆ. ಬರಿಗೈಳಿ ಬಂದದ್ದೇ ಇಲ್ಲ.
ಕನ್ನರ್ಪಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ, ಕಾವೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಎಲ್ಲಾರೆಯ ಲಕ್ಷ್ಮೀ ಜನಾರ್ಧನ ದೇವಸ್ಥಾನ, ಶಿವಪುರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉದ್ಯಾವರ, ಸುರತ್ಕಲ್ ಮುಂತಾದ ಕಡೆಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿದ್ದಾರೆ.