ಉಡುಪಿ : ಉಡುಪಿ ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಅವಿಭಜಿತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭವು ದಿನಾಂಕ 10-03-2024ರಂದು ಸಂಜೆ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ದೇವರ ಭಜನೆಯಿಂದ ಮನಸ್ಸಿಗೆ ನೆಮ್ಮದಿ, ಸಂತೋಷ ಪ್ರಾಪ್ತಿಯಾಗುತ್ತದೆ. ಭಜನೆ ಭಗವಂತನ ಸಾಕ್ಷಾತ್ಕಾರಕ್ಕಿರುವ ಸುಲಭ ಮಾರ್ಗ. ಭಜನೆಗೆ ಅದ್ಭುತ ಶಕ್ತಿಯಿದೆ. ಅದರಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗದು. ಎಂತಹ ಸಂಕಷ್ಟ ಕಾಲದಲ್ಲಿಯೂ ಭಗವಂತನ ನಾಮಸ್ಮರಣೆ ನಮ್ಮನ್ನು ಪಾರುಮಾಡುತ್ತದೆ. ನಮ್ಮ ಸಂಸ್ಕೃತಿಯಿಂದ ವಿಮುಖರಾದ ಯುವ ಪೀಳಿಗೆಯನ್ನು ಸರಿದಾರಿಗೆ ತರಲು ಭಜನೆಯಂತಹ ಕಾರ್ಯಕ್ರಮಗಳು ಇಂದು ಅನಿವಾರ್ಯವಾಗಿವೆ. ಭಜನೆಯಿಂದ ಒಳಿತೇ ಆಗುತ್ತದೆಯೇ ಹೊರತು ಕೆಡುಕಾಗದು. ನಾವು ಮಕ್ಕಳಿಗೆ ಬಾಲ್ಯದಲ್ಲಿಯೇ ಅಧ್ಯಾತ್ಮದ ಅರಿವು ಮೂಡಿಸಿದಾಗ ಅವರೂ ಸತ್ಯ ಮಾರ್ಗದಲ್ಲಿಯೇ ನಡೆದು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಕಾರಣರಾಗುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಮಾತನಾಡಿ “ಮನದಲ್ಲಿ ಪ್ರವಹಿಸುವ ಅರಿಷಡ್ವರ್ಗಗಳನ್ನು ತ್ಯಾಗ ಮಾಡಿ, ಸ್ವಾರ್ಥ ಚಿಂತನೆಗಳಿಂದ ದೂರವಾಗಿ ದೀನ ದಲಿತರ ಸೇವೆ, ಉತ್ತಮ ಮಟ್ಟದ ಬದುಕನ್ನು ತಮ್ಮದಾಗಿಸಿಕೊಳ್ಳುವುದರಿಂದ ದೇವರು ಸುಪ್ರೀತನಾಗುತ್ತಾನೆ. ಶ್ರೀರಾಮ ಸರ್ವ ರೀತಿಯಲ್ಲಿಯೂ ಆದರ್ಶ, ಆತನಂತೆ ಜೀವನದಲ್ಲಿ ಎಲ್ಲರೂ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು” ಎಂದು ನುಡಿದರು.
ಮಲ್ಪೆಯ ಮತ್ಸ್ಯರಾಜ್ ಗ್ರೂಪ್‌ನ ಮುಖ್ಯಸ್ಥರಾದ ಕೇಶವ ಎಂ. ಕೋಟ್ಯಾನ್ ಮಾತನಾಡಿ, “ಭಜನೆ ಪ್ರತೀ ಮನೆಯಲ್ಲಿ ನಡೆಯಬೇಕು. ತಂದೆ ತಾಯಿ, ಮಕ್ಕಳು ಸೇರಿದಂತೆ ಮನೆಮಂದಿಯೆಲ್ಲಾ ಸೇರಿ ಭಜನೆ ಮಾಡಿದರೆ ಕುಟುಂಬ ವಿಭಜನೆಯಾಗದು” ಎಂದರು. ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಪ್ರಭಾಕರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಿತಿ ಕಳೆದ 13 ವರ್ಷಗಳಿಂದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯನ್ನು ಪೆರ್ಡೂರಿನಲ್ಲಿ ಆಯೋಜಿಸುತ್ತಾ ಬಂದಿದ್ದು, ಈ ಬಾರಿ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿದೆ. ಯುವ ಮನಸ್ಸುಗಳನ್ನು ಭಜನೆಯತ್ತ ಸೆಳೆಯುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಭಜಕರಾದ ಮಲ್ಪೆ ಬಾಲಕರ ಶ್ರೀರಾಮ ಭಜನಾ ಮಂಡಳಿಯ ಸೋಮಪ್ಪ ಕುಂದರ್ ತೊಟ್ಟಂ ಹಾಗೂ ಕನ್ನರ್ಪಾಡಿ ಜಯದುರ್ಗೆ ಭಜನಾ ಮಂಡಳಿಯ ಕಾಳಪ್ಪ ಶೆಟ್ಟಿ ಕನ್ನರ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ವಹಿಸಿದ್ದರು. ಮತ್ಸ್ಯರಾಜ್ ಗ್ರೂಪ್‌ನ ಅಭಿನಂದನ್ ಕೋಟ್ಯಾನ್, ಕೊಡವೂರಿನ ತೊಂದುಬೆಟ್ಟು ನಾಗನಕಟ್ಟೆ ಅಧ್ಯಕ್ಷ ಶೇಖರ ಪುತ್ರನ್, ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್, ತೀರ್ಪುಗಾರರಾದ ಗಿರೀಶ್ ತಂತ್ರಿ ಹಾಗೂ ತುಳಸಿದಾಸ್ ಉಪಸ್ಥಿತರಿದ್ದರು. ಸಮಿತಿಯ ಸಂತೋಷ್ ಶೆಟ್ಟಿ, ಸುಪ್ರೀತಾ ಶೆಟ್ಟಿ ಸನ್ಮಾನ ಪತ್ರ ಹಾಗೂ ಮಲ್ಲಿಕಾ ಶೆಟ್ಟಿ ದಾನಿಗಳ ವಿವರ ವಾಚಿಸಿದರು. ಉಪೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
ಈ ಭಜನಾ ಸ್ಪರ್ಧೆಯಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಗಳಿಂದ ಆಹ್ವಾನಿತ 11 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ರೂ.20,000/- ನಗದು ಹಾಗೂ ಫಲಕವನ್ನು ಗಾನ ಸುರಭಿ ಮಲ್ಪೆ ತಂಡ ಗೆದ್ದುಕೊಂಡಿತು, ದ್ವಿತೀಯ ಬಹುಮಾನ ರೂ.15,000/-ನಗದು ಹಾಗೂ ಫಲಕವನ್ನು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ ಹಾಗೂ ತೃತೀಯ ಬಹುಮಾನವನ್ನು ಶಿವರಂಜನಿ ಸುರತ್ಕಲ್ ತಂಡ ರೂ.12,000/- ನಗದು ಹಾಗೂ ಪ್ರಶಸ್ತಿ ಫಲಕವನ್ನು ಗೆದ್ದುಕೊಂಡಿತು. ವೈಯಕ್ತಿಕ ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಕಾಪು ಪೊಲಿಪು ತಂಡದ ನಿತಿನ್ ಹಾಗೂ ಪ್ರಜ್ವಲ್ ಕ್ರಮವಾಗಿ ಉತ್ತಮ ಹಾಡುಗಾರ, ಉತ್ತಮ ತಬಲ ವಾದಕ, ಉತ್ತಮ ಹಾರ್ಮೋನಿಯಂ ವಾದಕರಾಗಿ ಹಾಗೂ ಸ್ವರಾರ್ಪಣಂ ಕಟೀಲು ತಂಡದ ಶೋಧನ್ ಎರ್ಮಾಳ್ ಉತ್ತಮ ಹಾರ್ಮೋನಿಯಂ ವಾದಕನಾಗಿ ಬಹುಮಾನ ಗಳಿಸಿದರು.