12 ಏಪ್ರಿಲ್ 2023, ಉಡುಪಿ: ರಥಬೀದಿ ಗೆಳೆಯರು ವತಿಯಿಂದ ರವಿವಾರ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಹಿರಿಯ ಅಂಕಣಕಾರ ಡಾ. ಬಿ. ಭಾಸ್ಕರ್ ರಾವ್ ಅವರ ‘ಸಾರ್ವಕಾಲಿಕ’ ಪುಸ್ತಕವನ್ನು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಶಿಕ್ಷಣ, ಮಕ್ಕಳು, ಪರಿಸರ, ಸಂವಿಧಾನ, ಧರ್ಮ, ಪ್ರೀತಿ ಹೀಗೆ ವೈವಿಧ್ಯಮಯ ವಿಷಯ ಆಧರಿಸಿ ಬರೆದ ಹಲವು ಲೇಖನಗಳು ಈ ಕೃತಿಯಲ್ಲಿವೆ. ಇದರ ಆಳ, ಹರವು, ವೈವಿಧ್ಯ ಬೆರಗುಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಸಾರ್ವಕಾಲಿಕ’ ಎಂಬ ಶೀರ್ಷಿಕೆ ಅರ್ಥಪೂರ್ಣವಾದುದು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ್ ರಾವ್ ಕೃತಿ ಅವಲೋಕನದಲ್ಲಿ ತಿಳಿಸಿದರು.
ಎಲ್ಲ ಬರಹಗಳು ಸಾರ್ವಕಾಲಿಕವಾಗದು. ಇತಿಮಿತಿ ಹೊಂದಿದ ಅಂಕಣಕಾರ ಕೆಲವೇ ಲೇಖನಗಳನ್ನು ಸಾರ್ವಕಾಲಿಕ ಮೌಲ್ಯಗಳಿಂದ ಬರೆಯಬಹುದು. ಆಯಾ ಸಂದರ್ಭಕ್ಕೆ ಸರಿಯಾಗಿ ಹೊಸ ಸಮಾಜ ಹೇಗಿರಬೇಕು ಎಂಬ ಸೂಕ್ಷ್ಮ ಸಂವೇದನೆಗಳಿಂದ ಭಾಸ್ಕರ ರಾವ್ ಬರೆದ ಅನೇಕ ಲೇಖನ ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿದೆ. ಓದುಗರನ್ನು ಶಿಕ್ಷಿತ, ವಿಚಾರವಂತರನ್ನಾಗಿಸುವ ಅವರ ಪ್ರಯತ್ನ ಶ್ಲಾಘನೀಯ ಎಂದರು.
ತಮಗೆ ಬರೆಯಬೇಕೆಂದು ಕಾಣಿಸಿದ ತುಡಿತ, ಉದಯವಾಣಿ, ತರಂಗ ಸಹಿತ ಪತ್ರಿಕೆಗಳು ಕೊಟ್ಟ ಅವಕಾಶಗಳನ್ನು ಓದುಗರು ಸ್ಪಂದಿಸಿದ ರೀತಿಗಳನ್ನು ಲೇಖಕ ಡಾ. ಬಿ. ಭಾಸ್ಕರ್ ರಾವ್ ಉಲ್ಲೇಖಿಸಿದರು. ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವ೦ದಿಸಿದರು. ಕಾರ್ಯಕ್ರಮ ಸಂಯೋಜಕ ಜೆ.ಪಿ. ಪ್ರಭಾಕರ ತುಮರಿ ನಿರ್ವಹಿಸಿದರು. ‘ಉದಯವಾಣಿ’, ‘ತರಂಗ’, ‘ತುಷಾರ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ‘ಸಾರ್ವಕಾಲಿಕ’ ಪ್ರಥಮ ಸಂಪುಟದಲ್ಲಿದೆ.