ಸರಳ ಸುಂದರತೆಯಿಂದ ಸಮೃದ್ಧಿಗೊಂಡ ರಜತ ಸಮ್ಮೇಳನ
05 ಫೆಬ್ರವರಿ 2023, ಉಜಿರೆ: ದಕ ಕಸಾಪದ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಉಜಿರೆಯಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆಯವರ ಸರ್ವಧ್ಯಕ್ಷತೆಯಲ್ಲಿ ಇದೀಗ ಸಂಪನ್ನಗೊಂಡಿದೆ. ಇದೊಂದು ದಕ ಕಸಾಪಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣ, ಇದನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ದಕ ಕಸಾಪದ ಅಧ್ಯಕ್ಷರಾಗಿರುವ ಡಾ. ಎಂ ಪಿ ಶ್ರೀನಾಥ್ ಮತ್ತು ಅವರ ತಂಡ ಪಟ್ಟ ಪ್ರಾಮಾಣಿಕ ಪ್ರಯತ್ನಕ್ಕೆ ಮೊತ್ತ ಮೊದಲು ಅಭಿನಂದನೆಗಳು.
ದಕ ಕಸಾಪ ಕಳೆದೊಂದು ವರ್ಷದಿಂದ ಒಂದಿಷ್ಟು ಹೊಸ ಚಿಂತನೆಗಳೊಂದಿಗೆ ಬಹುತೇಕ ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಯಿಂದ ಹೆಜ್ಜೆ ಹಾಕಲು ಆರಂಭ ಮಾಡಿದ್ದೆ ಒಂದು ಆಶಾದಾಯಕ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಉಜಿರೆಯ ರಜತ ಸಮ್ಮೇಳನದ ಬಗ್ಗೆ ಸಹಜವಾಗಿಯೇ ಅನೇಕ ನಿರೀಕ್ಷೆಗಳಿದ್ಥವು. ಅವುಗಳನ್ನೆಲ್ಲ ಹೆಚ್ಚು ಕಡಿಮೆ ಪೊರೈಸಿ ಒಂದು ಯಶಸ್ವೀ ದಾಖಲೆ ಬರೆದ ಕೀರ್ತಿಯೂ ಈ ಸಮ್ಮೇಳನಕ್ಕೆ ಖಂಡಿತ ಲಭಿಸಿದೆ ಒಂದಿಷ್ಟು ಪ್ರೇಕ್ಷಕರ ಕೊರತೆಯ ನಡುವೆ.
ಒಂದು ಸಮ್ಮೇಳನ ಸಂಪೂರ್ಣ ಸಫಲ ಆಗಬೇಕಾದರೆ ಬರೀ ಆಡಂಬರವೇ ಬೇಕು ಎಂಬ ಮಿಥ್ಯೆಯನ್ನು ಹೋಗಲಾಡಿಸಿ ಎಲ್ಲ ಹಂತದ ಸರಳತೆಯಲ್ಲೂ ಸುಂದರತೆ ಸಾಧ್ಯ ಎಂಬ ಆಲೋಚನೆಯನ್ನು ನೀಡಿದ್ದಾರೆ. ಸ್ವತಹ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಹೇಮಾವತಿ ಹೆಗ್ಗಡೆ ಅವರು ಬಹಳ ಪ್ರಾಂಜಲವಾಗಿ ” ಈ ಸ್ಥಾನಕ್ಕೆ ನನಗಿಂತ ಶ್ರೇಷ್ಠರಿದ್ದರು ಎಂಬ ಅರಿವು ತಾನಗಿದೆ, ಕೆಲವು ವಿಶೇಷ ಸಂದರ್ಭಗಳ ಹಿನ್ನೆಲೆಯಲ್ಲಿ ನನ್ನನ್ನು ಆಯ್ಕೆ ಮಾಡಿರಬಹುದು ” ಎಂದು ಅಧ್ಯಕ್ಷ ಭಾಷಣದಲ್ಲಿ ಸೃಷ್ಟವಾಗಿ ಹೇಳಿದ್ದು ಮತ್ತು ಮಹಿಳಾ ಸುರಕ್ಷತೆ ಬಗ್ಗೆ, ಅದರಲ್ಲೂ ನಿರ್ಭಯ ಕೇಸ್ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದು, ( ಇತರ ಕೆಲವು ಕನ್ನಡ ಭಾಷೆಯ ಕಾಳಜಿಗಳ ಜತೆಗೆ) ಕಸಾಪದ ಕೆಲವು ಅನಿವಾರ್ಯತೆಗಳಿಗೂ ನೇರಾ ಸಾಕ್ಷಿ.
ಅದೂ ಯಾವುದೇ ಎಲ್ಲೇ ಇರಲಿ, ಸಮ್ಮೇಳನಗಳ ಗೋಷ್ಠಿಯ ಸಾರ್ಥಕತೆ ಅಷ್ಟಕಷ್ಟೆ. ಇಲ್ಲೂ ನಡೆದ ಹಲವು ಗೋಷ್ಠಿಗಳು ಒಟ್ಟು ದೃಷ್ಟಿಯಿಂದ ಓ. ಕೆ ಅನ್ನಿಸಿದರೂ ಬಹುತೇಕ ಗೋಷ್ಠಿಗಳು ಪುರುಷ ಪ್ರಧಾನ ಆದದ್ದು ಸರಿಯಲ್ಲ. ಉಳಿದಂತೆ ಈ ಬಾರಿ ಎಲ್ಲ ಜಾತಿ ಮತ ಧರ್ಮಗಳ ಪ್ರಾತಿನಿಧ್ಯ ಒಂದು ಸ್ವಾಗತಾರ್ಹ ಬೆಳವಣಿಗೆ. ಎಲ್ಲೂ ದುಂದು ವೆಚ್ಚ ಮಾಡದ ಕ್ರಮವೂ ಅತ್ಯಂತ ಶ್ಲಾಘನೀಯ. ಈ ಎಲ್ಲ ಉತ್ತಮತೆಯನ್ನೂ ಬಿಡದೇ ಮುಂದುವರಿದು ದಕ ಕಸಾಪ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಹತ್ತಿರವಾಗಲಿ ಕುವೆಂಪು ಸಾರಿದ ಮಾನವತೆಯ, ಸಾರದೊಂದಿಗೆ ಎಂಬ ಆಶಯ ಸಮಸ್ತ ಕರಾವಳಿ ಕನ್ನಡಿಗರದ್ದು.
– ಕಲ್ಲಚ್ಚು ಮಹೇಶ ಆರ್ ನಾಯಕ್