ಮಂಗಳೂರು : ದೇಶದ ನಾನಾ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ‘ಉತ್ತರ್- ದಕ್ಷಿಣ್’ ಸರಣಿ ಸಂಗೀತ ಕಾರ್ಯಕ್ರಮವನ್ನು ದಿನಾಂಕ 28-01-2024ರಂದು ಸಂಜೆ 5.30ಕ್ಕೆ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಆಯೋಜಿಸಲಾಗಿದೆ.
ನಗರದ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಂಬೈನ ವಿವಿದ್ ಆರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತ ಪಡಿಸುತ್ತಿದ್ದು, 12 ವರ್ಷಗಳಿಂದ ನಡೆಯುತ್ತಿರುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರಿಗೆ ಅಚ್ಚುಮೆಚ್ಚಿನ ಕಚೇರಿಗಳಲ್ಲಿ ಒಂದಾಗಿದೆ. ಇದು ಉತ್ತರಾದಿ ಮತ್ತು ದಕ್ಷಿಣಾದಿ ಹೀಗೆ ಎರಡು ರೀತಿಯ ಸಂಗೀತದೊಂದಿಗೆ ಪ್ರಾದೇಶಿಕ ಸಾಮರಸ್ಯಕ್ಕೆ ಕೊಡುಗೆ ನೀಡುತ್ತದೆ.
ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ರಾಂಚಿ ಮತ್ತು ಈಗ ಮಂಗಳೂರಿನಲ್ಲಿ 13ನೇ ಆವೃತ್ತಿಯ ಸಂಗೀತ ಕಚೇರಿಯನ್ನು ಆಯೋಜಿಸಲಾಗಿದೆ. ಉತ್ಕೃಷ್ಟ ಮಟ್ಟದ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಉತ್ತರಾದಿ ಹಾಗೂ ದಕ್ಷಿಣಾದಿ ವಿಭಾಗದ ಸಂಗೀತಪ್ರಿಯರಿಗೆ ಇದೊಂದು ರಸದೌತಣವಾಗಲಿದೆ. ವರ್ಣರಂಜಿತ ಹಿನ್ನಲೆ, ಕಲಾವಿದರ ಕೌಶಲ್ಯ, ಬೆಳಕು, ಧ್ವನಿ ಮತ್ತು ಸಂಗೀತ ಸಭಾಂಗಣದಲ್ಲಿ ಸ್ಥಳಾವಕಾಶ ಹೀಗೆ ಎಲ್ಲವನ್ನು ಸುಂದರವಾಗಿ ನಿರೂಪಿಸಲಾಗುತ್ತದೆ. ದೇಗುಲದಲ್ಲಿ ನೋಡಿದ ರಸಾನುಭವವನ್ನು ಈ ಸಂಗೀತ ಕಾರ್ಯಕ್ರಮವು ಪ್ರೇಕ್ಷಕರಿಗೆ ಹೊಸರೀತಿಯ ವಿನೂತನ ಅನುಭವನ್ನು ಕಟ್ಟಿಕೊಡಲಿದೆ.
ಉತ್ತರ ದಕ್ಷಿಣದ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಮೈಸೂರು ನಾಗರಾಜ್ ಮತ್ತು ಡಾ. ಎಂ. ಮಂಜುನಾಥ್ ಅವರ ವಿಶಿಷ್ಟ ಪಿಟೀಲು ಯುಗಳ ಸಂಯೋಜನೆಯಾಗಿದ್ದು, ಅವರಿಗೆ ವಿದ್ವಾನ್ ಅರ್ಜುನ್ ಕುಮಾರ್ ಮತ್ತು ವಿದ್ವಾನ್ ಗಿರಿಧರ್ ಉಡುಪ ಅವರ ಮೃದಂಗ ಮತ್ತು ಘಟಂನಲ್ಲಿ ಸಾಥ್‌ನ್ನು ನೀಡಲಿದ್ದಾರೆ. ಅನಂತರದಲ್ಲಿ ನಮ್ಮ ದೇಶದ ಪ್ರಖ್ಯಾತ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ. ಇವರಿಗೆ ನರೇಂದ್ರ ಎಲ್. ನಾಯಕ್ ಹಾರ್ಮೋನಿಯಂನಲ್ಲಿ ಮತ್ತು ಕೇಶವ್ ಜೋಶಿ ತಬಲದಲ್ಲಿ ಸಾಥ್ ನೀಡಲಿದ್ದಾರೆ.